top of page
poorna drishti

ಅಡುಗೆ ಆದ ಮೇಲೆ

Original: After Kitchen… by Prof. Rachel Bari

Translation: Prof. Ramaprasad B V


ಅಡುಗೆ ಆದ ಮೇಲೆ

ಇನ್ನೆಲ್ಲಿ ಸೃಜನಶೀಲತೆ?

ನಲ್ಲಿಯಲ್ಲಿ ಸುರಿಯುತ್ತಿರುವ ನೀರಿನ ಸದ್ದು,

ತೊಳೆಸಿಕೊಳ್ಳಲು ಸಿಂಕ್‌ಲ್ಲಿ ಕಾಯುತ್ತಿರುವ

ಪಾತ್ರೆಗಳ ಟಣ್ ಟಣ್ ಸದ್ದು -

ಸೃಜನಶೀಲತೆಯ ಸಂಗೀತಕ್ಕೆ

ತಾವೆಲ್ಲಿ ಉಳಿದೀತು?

ಮೂರಾಬಟ್ಟೆಯಾಗಿರುವ ಅಡುಗೆ ಕಟ್ಟೆ

ಹೆಚ್ಚಿಸಿಕೊಳ್ಳಲು ತರಕಾರಿ ಬುಟ್ಟಿಯಲ್ಲಿ ಕಾದಿರುವ ತರಕಾರಿಗಳು

ಭಯ ಹುಟ್ಟಿಸುವ ಹಾಗಿದ್ದರೂ ಕತ್ತರಿಸುವ ಕೈಗಳಲ್ಲಿ ಪಳಗಿರುವ ಚಾಕು.

ಇವುಗಳಲೆಲ್ಲಿದೆ ಸೃಜನಶೀಲತೆ?

ಬರೀ ಕಾಯಿಪಲ್ಲೆ ಹೆಚ್ಚುವುದಷ್ಟೇ.

ಈರುಳ್ಳಿ ಸಿಪ್ಪೆ ತೆಗೆಯವುವಾಗ

ನಾತವೇ ತಾನೇ, ಸೊಗಡಲ್ಲವಲ್ಲ?

ಬೆಳ್ಳುಳ್ಳಿಯಂತೂ - ಥೂ!

ಇಲ್ಲಿ ಉಸಿರೆಳದರೆ, ಓ ಕಾವ್ಯದೇವಿಯೇ,

ಭಾವಗೀತೆಗಳು ಹುಟ್ಟಬಲ್ಲವೇನು?

ಓ ಕಾವ್ಯದೇವಿಯೇ,

ಬಣ್ಣಗಳಲ್ಲಿ, ಸುವಾಸನೆಯಲ್ಲಿ,

ಕೊರಕಲು ಕಣಿವೆಗಳಲ್ಲಿ

ಇಬ್ಬನಿ ಮೂಡಿರುವ ಗರಿಗರಿ ಹಸಿರು ಎಲೆಗಳಲ್ಲಿ -

ಇಲ್ಲಿ ತಾನೇ ನೀ ಅಡಗಿರುವುದು?

ಪದ್ಯಗಳ, ಗೀತೆಗಳ ಪ್ರೇರಣಾಶಕ್ತಿ

ಶರತ್ಕಾಲದ ಚಳಿಯೇ ತಾನೇ, ಅಡುಗೆ ಮನೆಯಲ್ಲವಲ್ಲ?

ಅಡುಗೆ ಮನೆಯಲ್ಲಿ ಜೋಡಿಸಿರುವ ಮಸಾಲೆ ಡಬ್ಬಗಳ ಸಾಲಲ್ಲಿ

ನೀ ಕಳೆದು ಹೋಗುವೆ.

ಆ ಮಸಾಲೆಗಳ ಸಾಲು ಸಾಂಬಾರಿಗೆ

ಬಣ್ಣ ಘಮ ನೀಡಬಲ್ಲದೇ ಹೊರತು

ಪದ್ಯಗಳಿಗಲ್ಲ.

ಒಗ್ಗರಣೆಗೆ ಹಾಕಿದ ಕರಿಬೇವಿನೆಲೆಯಂತೆ

ಸುರುಳಿ ಸುಕ್ಕಾಗುತ್ತವೆ ಪದ್ಯಗಳ ಸಾಲುಗಳು.

ಕುಕ್ರ‍್ರು ಬಾಣಲಿಗಳ ಸದ್ದು,

ಪಾತ್ರೆ ತಿಕ್ಕುವ ಸದ್ದು,

ತೊಟ್ಟಿಕ್ಕುವ ನಲ್ಲಿಯ ನೀರಿನ ಸದ್ದು-

ಇವುಗಳ ಅಪಸ್ವರಕ್ಕೆ ಅಂಜಿ

ಪದಗಳು ಬಾಡುತ್ತವೆ

ಎಂದೆಂದೂ ಹೂವಾಗದೇ.

ಅಡುಗೆಯಾದ ಮೇಲೆ ಇನ್ನೆಲ್ಲಿ ಸೃಜನಶೀಲತೆ?


Comments


bottom of page