ಡೇನಿಯಲ್ ವೆಬರ್ ಎಂಬ ಗಂಡಸಿಗೆ
- poorna drishti
- Feb 12, 2023
- 1 min read
ಶ್ರೀಕೀರ್ತಿ. ಬೀ.ಎನ್.
ಅನುಮಾನಕ್ಕೆ ಆಸ್ಪದವೇ ಇಲ್ಲ.
ಅವಳ ಶೀಲವೇ ಲೀಲೆಯಾಗಿರುವಾಗ
ಶಂಕಿಸುವ ಶಂಕೆಯಿಲ್ಲ.
ಒಳ ಹೋರಗಿನ ದೇಹವನ್ನೆಲ್ಲಾ
ಕಂಡುಂಡಾಡಿದೆ ಜಗವೆಲ್ಲಾ.
ಎಲ್ಲರ ಏಕಾಂತಕ್ಕೂ,
ಮಳ್ಳ ಮನಸಿನ ಲೋಕಕ್ಕೂ
ನಿರ್ವಾಣದಲಿ ನಿರ್ವಾಣ
ನಿರ್ಮಿಸುವ ನೀರೆಯಾಗಿ,
ಏಕಾಂಗಿಯಾಗಿ ಭುವಿಯ ಸುತ್ತಿ
ಎಣಿಸಲಾಗಷ್ಟು ಬಾರಿ
ಅನಿಸಿದಾಗಲೆಲ್ಲ ಹಾರಿ
ಹರಡಿಕೊಂಡಿರುವವಳ ನೀನು
ಅರಸಿ ಹರಸಿಕೊಂಡಿರುವವ
ಗಂಡಿನಲೂ ಹುಟ್ಟಿಸಿ
ಭಯ-ಅಸೂಯೆಗಳನು ಹೆಣ್ಣಾಗಿಸಿರುವವ,
ಇಕ್ಕಳಕ್ಕೆ ಸಿಲುಕಿಸಿ ಸ್ತ್ರೀ-ಸ್ತ್ರೀವಾದವ
ಭವ ಮೀರಿದ ನವ-
ಗಂಡು ಕುಲದವ.
ಇರಲಾಗದು, ಹಿಡಿಯಲಾಗದು
ಹಳಸಿ ಮಾಸಿದ ಧರ್ಮ-
ಸಂಸ್ಕೃತಿಯ ಇತಿಹಾಸಗಳಿನ್ನೆನು?
ನಿನ್ನ-ಅವಳ ನಡುವಿನ
ಸವಿದಾಂಪತ್ಯ ಸಂಬಂಧಗಳನು.
ಹುಟ್ಟಿಸುವುದಿಲ್ಲವೇನೊ ಇನ್ನು ನೀನು
ನಾಚಿಕೆ(ಗೇಡಿನ), ಸೇಡಿನ ಟ್ರೋಜನ್
ಯುದ್ಧದ "ಮಹಾ"ಪುರಾ(ಯ)ಣಗಳ
ಕಾರಣಗಳನು.
ಎಲ್ಲೆಡೆ ಅನುಸರಿಸಿ,
ಅನುಸ್ಮರಿಸಿ ಅನುಕ್ಷಣವು
ಸುತ್ತಿಸುವಾಗ ಅವರವರ ಮನದೊಳಗೇ
ಅವಳ ತನು ಭಗಭಾಗವನ್ನು
ನವರಾವಣರು ಹೊತ್ತಿಟ್ಟುಕೊಂಡ
ಆ ಸನ್ನಿಯನ್ನು
ಸಂಜೆಯ ವೇಳೆಗೆ ಸ್ವಾಗತಿಸುವೆಯೇನೊ...
ಪತಿಯಾಗಿ
ತೆರೆದು ನಿನ್ನ ಬಾಹುಗಳ ಬಾಗಿಲನು
ಮನದ ಮೆತ್ತೆಯಲ್ಲಿ ಮೆತ್ತಗೆ
ಜಗದಗಲಗಲಿಸಿ ಕಾಲುಗಳನ್ನು
ನುಸುಳಿಸಲು ಗಂಡೆಂಬ ಜಾತಿಯ
ತುಂಡು ಹೈಕಳ(ಂತಹ) ಮನಸುಗಳನ್ನು
ಹೀನಾಯವಾಗಿ ಹಿಯಾಳಿಸಲು
ತೆಕ್ಕೆಯಲ್ಲಿ ಮಲಗಿಸಿಕೊಂಡು
ರಮಿಸಿ ನಿನ್ನ
"ನವ-ಧರ್ಮ-ಪತ್ನಿ”
ಸನ್ನಿಲಿಯೊನಳನ್ನು.
Comments