top of page

ಮಳೆ ಮತ್ತು ಕವಿತೆ

ಕೊಟ್ರೇಶ್ ಅರಸೀಕೆರೆ

 

ಪ್ರತಿ ಮಳೆಗೂ ಒಂದು

ಹೆಸರುಂಟು;

ಪ್ರತಿ ಮಳೆಯೂ ಒಂದೊಂದು

ಕವಿತೆ

ಕವಿತೆಗೂ ಎಷ್ಟೆಲ್ಲ ಹೆಸರು

 

ಆಗಾಗ ಮುದ್ದು ಮಾಡುತ್ತದೆ

ರಗಳೆ ಮಾಡಿ ಗೋಳೊಯ್ದು

ಅರ್ಥವಾಗದಂತೆ ಸುರಿಯುತ್ತದೆ

ಮತ್ತೆ

ಮಗುವಿನಂತೆ ಸರಳ, ಆಗಾಗ

ವಿರಳ, ಭರಪೂರ

 

ಸುಮ್ಮನೆ ತೋಯ್ಯಬೇಕು

ಮಮಕಾರದಲ್ಲಿ

ಅರ್ಥವಾಗುವವರೆಗೂ

ಕೆಲ ಬಾರಿ ಅರ್ಥವಾದಂತೆ

 

ಪ್ರತಿ ಬಾರಿ ಸುರಿದಾಗ

ಮೋಹಗೊಳಿಸುತ್ತದೆ

ಹನಿದರೂ, ಜೋರಾದರೂ

ಬೋರಾದರೂ

ಬದುಕ ಕಲಿಸುತ್ತದೆ ವಿನಯದಿಂದ

 

ಎಷ್ಟೊಂದು ಒಳ್ಳೆಯ ಕವಿ

ಮಳೆ

ಪ್ರತಿಬಾರಿ ಸುರಿದಾಗ

ಅಚ್ಚರಿ ಹುಟ್ಟಿಸುತ್ತದೆ

ಹೊಸ ಕವಿತೆ ನೀಡುತ್ತದೆ

ಸಲಹುತ್ತದೆ ತಾಯಿಯ ಹಾಗೆ

 

-ಕೊಟ್ರೇಶ್ ಅರಸೀಕೆರೆ

Comments


bottom of page