top of page

ಎಚ್ ನಾಗವೇಣಿ ಅವರ ‘ಧಣಿಗಳ ಬೆಳ್ಳಿಲೋಟ’ ಕಥೆಯಲ್ಲಿ ವರ್ಗ ಸಂಘರ್ಷದ ನೆಲೆಗಳು

ರವಿಕುಮಾರ .ಡಿ

ಸಂಶೋಧನಾರ್ಥಿ

ಕನ್ನಡಭಾರತಿ ವಿಭಾಗ

ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ -577451


ಭಾರತದ ಸಮಾಜದಲ್ಲಿ ಪ್ರಾಚೀನ ಕಾಲದಿಂದಲೂ ತಾರತಮ್ಯ ದೋರಣೆ ಎದ್ದು ಕಾಣುತ್ತದೆ. ಉಳ್ಳವರು ಇಲ್ಲದವರನ್ನು ಶೋಷಿಸುವ, ಅಮಾನವೀಯವಾಗಿ ನಡೆಸಿಕೊಳ್ಳುವುದನ್ನು ಮೊದಲಿನಿಂದಲೂ ನಾವು ಕಾಣಬಹುದಾಗಿದೆ. ಆದರೆ ಶೋಷಿತರ ಸ್ವಾಭಿಮಾನಕ್ಕೆ ದಕ್ಕೆ ಬಂದಾಗ ಪ್ರತಿರೋಧಿಸುವ ಆಕ್ರೋಶ ವ್ಯಕ್ತಪಡಿಸುವುದನ್ನು ನಾವು ಇತಿಹಾಸದಲ್ಲಿ ಹಲವಾರು ಉದಾಹರಣೆಗಳು ನೋಡಬಹುದಾಗಿದೆ.


ಎಚ್ ನಾಗವೇಣಿ ಅವರು ಮಾಸ್ತಿಯವರ ಕಥೆಗಳಂತೆ ಕಥಾ ತಂತ್ರಕ್ಕೆ ತಲೆ ಕೆಡಿಸಿಕೊಳ್ಳದೆ ನೇರವಾಗಿ, ಪ್ರಭಾವಶಾಲಿಯಾಗಿ ಕತೆಗಳನ್ನು ಬರೆಯಬಲ್ಲರು ಎನ್ನುವುದಕ್ಕೆ ಅವರ ಮೀಯುವ ಆಟ ಸಂಕಲನದ ಧಣಿಗಳ ಬೆಳ್ಳಿಲೋಟ ಕತೆ ನಿದರ್ಶನವಾಗಿದೆ, ಹೊಸ ಕಥನ ಶೈಲಿಯನ್ನು ರೂಢಿಸಿಕೊಂಡಿರುವ ನಾಗವೇಣಿಯವರು ಕರಾವಳಿಯ ಜನಜೀವನ ಪರಿಸರವನ್ನು ತಮ್ಮ ಕಥನಗಳಲ್ಲಿ ತುಂಬಾ ಆಪ್ತವಾಗಿ ಚಿತ್ರಿಸಿದ್ದಾರೆ. ಉಳ್ಳವರ ಪ್ರಪಂಚದಲ್ಲಿ ಸಾಮಾನ್ಯ ಜನರು ಅನುಭವಿಸುವ ನೋವು, ಅವಮಾನ ಮತ್ತು ಪ್ರತಿಭಟನೆಗಳನ್ನು ಇಲ್ಲಿನ ಕತೆ ಚಿತ್ರಿಸುತ್ತದೆ. ನಾಗವೇಣಿ ಅವರ ಪಾತ್ರ ಸೃಷ್ಟಿ ವಿಭಿನ್ನವಾದುದು. ಹೊಳೆಯು ಒಂದು ಪಾತ್ರವಾಗಿ ಮನುಷ್ಯರಂತೆ ಹೊಳೆಗೂ ಹಲವಾರು ಭಾವನೆಗಳಿವೆ ಎಂಬಂತೆ ಶಾಂಭವಿ ಹೊಳೆಯ ಪಾತ್ರ ಸಕ್ರಿಯವಾಗಿ ಮೂಡಿ ಬಂದಿದೆ. ಮನುಷ್ಯ ಮತ್ತು ಪರಿಸರದ ನಡುವಿನ ಅವಿನಾಭಾವ ಸಂಬಂಧ ಪ್ರಕೃತಿಯು ಕೂಡ ಮನುಷ್ಯನ ಪರಿಸ್ಥಿತಿಗೆ ಒಳಗಾಗುವ ದೃಶ್ಯ ನಮ್ಮ ಕಣ್ಣ ಮುಂದೆ ಈ ಕತೆ ತೆರೆದಿಡುತ್ತದೆ.


ಕಥೆಯ ಆರಂಭದಲ್ಲಿಯೇ ಚಿನ್ನಮ್ಮ ಹೊಳೆಯ ಕಾರಣದಿಂದ ತನ್ನ ಕುಟುಂಬ ಅನೇಕ ತೊಂದರೆಗಳಿಗೆ ಸಿಲುಕಿರುವುದು, ಕಳ್ಳತನದ ಅಪವಾದ ಅವರ ಬಡ ಕುಟುಂಬದ ಗುಡಿಸಲಿನ ಚಾವಣಿಗೆ ಹೊರಿಸಿದ್ದು. ಜೊತೆಯಲ್ಲಿ ಚಿನ್ನಮ್ಮನ ದುಡಿತಕ್ಕೆ ಪಡಿಯಿಲ್ಲದಂತ ಸ್ಥಿತಿ. ಇವೆಲ್ಲ ಕಾರಣದಿಂದ ಚಿನ್ನಮ್ಮ ಒಂಥರ ಹುಚ್ಚಳಾಗಿದ್ದಾಳೆ. ಶಾಂಭವಿ ಹೊಳೆ ಬೆಳ್ಳಿಲೋಟ ಎಂದು ನುಂಗಿತ್ತೋ ಅಂದಿನಿಂದ ಹೊಳೆಯನ್ನು ಕಂಡರೆ ಆಕ್ರೋಶ, ಸಿಟ್ಟು ಅಸಮಧಾನ ಇಲ್ಲಿ ವ್ಯಕ್ತವಾಗುತ್ತದೆ. ಇಲ್ಲಿ ಗಮನಿಸಬಹುದಾದ ಮತ್ತೊಂದು ಅಂಶವೆಂದರೆ ಮನುಷ್ಯ ಮತ್ತು ಪ್ರಕೃತಿ ನಡುವೆ ನಡೆವ ಸಂಘರ್ಷ. ಸಾಮಾನ್ಯ ಮನುಷ್ಯನಿಗೆ ಉಳ್ಳವರ ಮೇಲಿನ ಕೋಪ, ಆಕ್ರೋಶ ಪ್ರಕೃತಿಯ ಮೇಲೆ ತೀರಿಸಿಕೊಳ್ಳುವ ಅವರ ಮನೋವ್ಯಥೆ ಇಲ್ಲಿ ಕಾಣಬಹುದು. ಚಿನ್ನಮ್ಮಳ ಅಸಹಾಯಕತೆ ನೋವು ಅವಮಾನಗಳ ವಿಭಿನ್ನ ಮಾದರಿಯ ಆಯಾಮಗಳನ್ನು ಕತೆಯುದ್ದಕ್ಕೂ ಅಲ್ಲಲ್ಲಿ ಕಾಣಬಹುದು. ಭೌತಿಕ, ಮಾನಸಿಕ, ಭಾವನಾತ್ಮಕ ರೂಪಕಗಳಾಗಿ ಕಂಡುಬರುತ್ತವೆ. ವರ್ಗ ಸಂಘರ್ಷ, ಜೀತ ಪದ್ಧತಿಯ ವಿವಿಧ ಮುಖಗಳನ್ನು ಆಧುನಿಕ ಕನ್ನಡ ಸಾಹಿತ್ಯದಲ್ಲಿ ವಿವಿಧ ಕೃತಿಗಳು ಹಿಡಿದಿಟ್ಟಿವೆ. ಅದರಲ್ಲೂ ಪ್ರಗತಿಶೀಲ ಮತ್ತು ದಲಿತ ಬಂಡಾಯೋತ್ತರ ಕಥೆಗಳಲ್ಲಿ ಜೀತ ಪದ್ದತಿ, ಶ್ರೇಣೀಕರಣ ಪದ್ದತಿಯಿಂದ ಆಗಬಹುದಾದ ಅನೇಕ ಸಾಮಾಜಿಕ ಪರಿಣಾಮ ಕುರಿತು ತಿಳಿಸಿವೆ. ಭೂಮಾಲೀಕ ವರ್ಗವು ಹೇಗೆ ತನ್ನ ಅಧಿಕಾರದ ಮೂಲಕ ಕೆಳವರ್ಗದ ಕೂಲಿಕಾರರನ್ನು ಶೋಷಿಸುತ್ತದೆ ಹಾಗೂ ತನಗೆ ತಿಳಿಯದಂತೆ ಆ ಶೋಷಣೆಗೆ ಅವರು ಸಿಲುಕಿಕೊಳ್ಳುವ, ಅದಕ್ಕೆ ಪೂರಕವಾಗುವಂತೆ ನಡೆಯಬೇಕು ಎನ್ನುವ ಹುನ್ನಾರುಗಳೇ ಕಥೆಯ ಪ್ರಮುಖ ಭಾಗ ಎಂದೇ ಹೇಳ ಬಹುದು.


ಕಥೆಯಲ್ಲಿ ಚಿನ್ನಮ್ಮ ಬಾಯಿಗೆ ಬಂದಂತೆ ಹೊಳೆಯ ಮನೆಯಾಳು ಬುದ್ಧಿಯನ್ನು ನಿಂದಿಸುತ್ತಿದ್ದರೂ ಯಾವುದೇ ಪ್ರತಿಕ್ರಿಯೆ ನೀಡದ ಹೊಳೆ ಆದರೆ ಧಣಿ ವೆಂಕಪ್ಪಯ್ಯ “ಮಳೆಗಾಲ ಬಂದರೆ ಸಾಕು ಈ ಬಿಕನಾಸಿ ಹೊಳೆ ಊರಿಡೀ ತನ್ನ ಸೆರಗನ್ನೇ ಹಾಸಿಬಿಡುತ್ತದೆ..., ಎಷ್ಟಗಲ ಸೆರಗು ಹಾಸಿಯಾದರೂ ಇನ್ನಷ್ಟು ದೂರಕ್ಕೆ ಹಾಸಬೇಕೆಂಬ ಚಟ ಇದಕ್ಕೆ” (ಪು. ೧೮) ಎಂದು ಹೊಳೆಯನ್ನು ನಿಂದಿಸುತ್ತಿರ ಬೇಕಾದರೆ ಅದಕ್ಕೆ ಪ್ರತಿಕ್ರಿಯೆಯಾಗಿ ಹೊಳೆಗೂ ಬಾಯೇನಾದರೂ ಇದ್ದಿದ್ದರೆ “ಎಲವೋ ಹುಲು ಮಾನವ ವೆಂಕಪ್ಪಯ್ಯ, ಸುತ್ತಲ ನಾಕೂರಲ್ಲಿರುವ ಯಾವನೇ ಶ್ಯಾನುಭೋಗ-ಉಗ್ರಾಣಿಯನ್ನಾದರೂ ಕರೆತಂದು ನನ್ನೆದುರು ಸರಪಳಿ ಎಳೆಸು. ಅವೆಲ್ಲವೂ ನನ್ನದಲ್ಲದಿದ್ದರೆ ಕೇಳು ಮತ್ತೆ...’ ಎಂದು ಮರು ಉತ್ತರ ಕೊಡುತ್ತಿತ್ತೇನೋ!” (ಪು. ೧೮)…ಇಲ್ಲಿ ಹೊಳೆಯು ಕೂಡ ಉಳ್ಳವರ ದೌರ್ಜನ್ಯದ ವಿರುದ್ಧ ಸಿಡಿದೇಳುವ ಮನೋಭಾವ ಕಾಣಬಹುದು. ಪ್ರಕೃತಿ ಎಂದಿಗೂ ಅಸಮಾನತೆಯನ್ನು ಒಪ್ಪುವುದಿಲ್ಲ, ಎಲ್ಲರ ಒಡಲನ್ನು ತಣಿಸುತ್ತದೆ ಎನ್ನುವುದು; ಹುಚ್ಚು ಹೊಳೆ ಬಂದಾಗ ಕುದುಪನಿಗೆ ದೊರೆಯುವ ವಸ್ತುಗಳ ಮೂಲಕ ತಿಳಿಯುತ್ತದೆ. ಮನುಷ್ಯನ ಅಧಿಕಾರದಿಂದಲೇ ಅಸಮಾನತೆಯು ಸೃಷ್ಟಿಯಾಗಿದ್ದು ಅದರ ವಿರುದ್ಧ ಪ್ರತಿಭಟನೆಯನ್ನು ತೋರಿಸುವಂತೆಯೇ ಹೊಳೆಯು ಹುಚ್ಚು ಹೊಳೆಯಾಗುತ್ತದೆ.


ಧಣಿ ವೆಂಕಪ್ಪಯ್ಯ ಬೇಸಿಗೆಯಲ್ಲಿ ಹೊಳೆ ಸೊರಗುವ ಕಾಲಕ್ಕೆ ತನ್ನ ಮೇಲುಸ್ತುವಾರಿಯಲ್ಲಿ ನದಿ ಸೆರಗನ್ನು ಒಂದಷ್ಟು ಅತ್ಲಾಗೆ ದೂಡುವಂತೆ ಹೊಳೆಯ ಸೆರಗಿಗೂ ತೋಟಕ್ಕೂ ನಡುವೆ ಗಟ್ಟಿ, ಅಡಿಪಂಚಾAಗ ಹಾಕಿಸಿ ದರೆ ಎಬ್ಬಿಸಿ ಎತ್ತರಿಸುವುದಿದೆ. ಈ ಬಿರಿಬೇಸಿಗೆಯಲ್ಲಿ ನಿತ್ರಾಣ ಸ್ಥಿತಿಯಲ್ಲಿರುವ ಹೊಳೆಯಂತೂ ತನ್ನ ನಿಶ್ಯಕ್ತ ಸ್ಥಿತಿಯಲ್ಲಿ ಧಣಿಗಳ ಆ ಕೃತ್ಯವನ್ನು ಕಂಡೂ ಕಾಣದಂತಿದ್ದು ‘ಗದ್ದೆಯಲ್ಲಿ ಬಿತ್ತುವುದನ್ನು ಮರಳದಿನ್ನೆ ಮೇಲೆ ಬಿತ್ತಿದೆಯಲ್ಲವ ಮಾರಾಯ….?’ ಎಂದು ಧಣಿಯವರ ಪೆದ್ದುತನದ ಬಗ್ಗೆ ಮನಸ್ಸಲ್ಲೇ ನಗುತ್ತಾ ಆ ದರೆಯನ್ನು ಕೆಡವಲು ಹೊಂಚುಹಾಕುತ್ತಿರುತ್ತದೆ. ಅನಾದಿ ಕಾಲದಿಂದಲೂ ಅಲ್ಲೇ ಇರುವ ಹೊಳೆಗೇನು ತಿಳಿದಿಲ್ಲವೆ. ಇವ ಧನಿಕ ಮಹಾಶಯ ತನ್ನ ಸೆರಗನ್ನೇ ಒತ್ತರಿಸಿಕೊಂಡು ತೋಟಮಾಡಿದ್ದಾನೆ ಎನ್ನುವ ಸತ್ಯ. ಅಂತು ಮಳೆಗಾಲ ಕಾಲಿಟ್ಟು, ಅಟಿ ತಿಂಗಳ ನಾಲ್ಕು ಜಡಿಮಳೆ ಹೊಡೆದರೆ ಸಾಕು ದಣಿಗಳು ಕಟ್ಟಿದ ದರೆ ಬುಡದಿಂದಲೇ ಲಯ. ಹೊಳೆ ತಟ್ಟನೆ ಧಣಿಯವರ ತೋಟದೊಳಗೆ ನುಗ್ಗಿ ಅದನ್ನಿಡೀ ಕಡಲು ಮಾಡಿ ಸೇಡು ತೀರಿಸಿಕೊಳ್ಳುತ್ತಿತ್ತು. “ಹೊಳೆಯು ಹೇಗೆ ತನ್ನ ಅನಂತ ಬಾಹುಗಳಿಂದ ಎಲ್ಲವನ್ನು ಕಬಳಿಸುತ್ತದೆಯೋ ಹಾಗೆ ಧಣಿಯು ಅನಂತ ಅಧಿಕಾರ ಬಾಹುಗಳು ಎಲ್ಲವನ್ನು, ಎಲ್ಲರನ್ನೂ ಕಬಳಿಸುತ್ತದೆ” (ಪು. )…ಎನ್ನುವುದು ಪಠ್ಯದಲ್ಲಿ ಸೋದಹರಣವಾಗಿ ಕಾಣಬಹುದು.


ಚಿನ್ನಮ್ಮ ನವಮಾಸಗಳ ಕಳೆದರೂ ಅವಳ ದುಡಿತಕ್ಕೆ ಪಡಿಯಿಲ್ಲದೆ ಜೊತೆಯಲ್ಲಿ ಕಳ್ಳತನದ ಅಪವಾದ ಒಂದೆಡೆ ಅಸಹಾಯಕತೆಯಿಂದ ನೊಂದು ಬೆಂದು ಆಕೆಯ ದೇಹ ಮತ್ತು ಮನಸ್ಸು ಆಕೆಯ ಹಿಡಿತದಲ್ಲಿಲ್ಲ. ಇದನ್ನು ಕಂಡಾಗ ಅಂತಃಕರಣ ಬಿಚ್ಚಿಕೊಳ್ಳುತ್ತದೆ. ಶಾಂಭವಿ ಹೊಳೆ ಚಿನ್ನಮ್ಮ ಮತ್ತು ಕುದುಪರ ಬಡ ಕುಟುಂಬದ ಮೇಲೆ ಕಳ್ಳತನದ ಅಪವಾದ ಹೊರಿಸಿದೆ ಆದರೆ ಹೊಳೆಯೇನು ಬೇಕುಬೇಕೆಂದೆ ಕುಟುಂಬದ ಮೇಲೆ ಈ ರೀತಿಯ ಕಳ್ಳತನದ ಅಪವಾದ ತಂದು ಹಾಕಿದೆಯೇ ಇಲ್ಲ. ಹೊಳೆಗೂ ಕೂಡ ಆ ಬಡ ಕುಟುಂಬದ ಮೇಲೆ ಅದೆಷ್ಟು ಪ್ರೀತಿ ಕಾಳಜಿಯಿಲ್ಲ. ಇಲ್ಲವಾದರೆ ತಾನು ಹರಿದು ಬರುವಾಗಲೆಲ್ಲ ಊರಿಂದ ತೋಟಗಳಿಂದ ತೆಂಗಿನಕಾಯಿ ಪಾತ್ರೆ ಪಗಡೆ ಏಣಿ ದೋಣಿ ರೀಪು ಪಕ್ಕಾಸು ಎಲ್ಲವನ್ನು ಅವರ ಒಡಲಿಗೆ ತಂದು ಹಾಕುತ್ತಿತ್ತು. ಹೊಳೆಯು ಕಥೆಯ ಉದ್ದಕ್ಕೂ ಸಂಕೇತವಾಗಿ ರೂಪುಗೊಂಡಿದ್ದು ಪ್ರಕೃತಿ ಮತ್ತು ಮನುಷ್ಯನ ಸಂಬಂಧವನ್ನು ಘಟ್ಟಿಗೊಳಿಸುವಂತೆ ಕಾಣುತ್ತದೆ. ನಾಗವೇಣಿ ಅವರು ಕರಾವಳಿ ತೀರದ ಬಡವರ ತವಕ-ತಲ್ಲಣಗಳು ಬದುಕಿನ ವಿವಿಧ ಮಜಲುಗಳನ್ನು ಇಲ್ಲಿ ತೆರೆದಿಡುತ್ತಾರೆ.


ಬಾಲಕ ಗುಡ್ಡ ಧಣಿ ಮನೆಯ ಮುಸುರೆ ಪಾತ್ರೆಗಳನ್ನು ತಂದು ಹೊಳೆಯ ದಡದಲ್ಲಿ ಆಟವಾಡುತ್ತಾ ಇದ್ದನು. ಆ ತೋಟದ ಅಂಚು ಆ ಮಳೆಗಾಲದಲ್ಲಿ ತುಳುವ ಹಲಸಿನಂತೆ ಮೆತ್ತಗಾಗಿದೆ ಎಂಬುದು ಆ ಬಾಲಕನಿಗೆ ಹೇಗೆ ತಿಳಿದಿತ್ತು. ಅವನ ಜೊತೆಯಲ್ಲಿ ದಣಿ ಮನೆಯ ಎಲ್ಲಾ ಪಾತ್ರೆಗಳು ಹೊಳೆಯ ಪಾಲದವು. ಈ ವಿಷಯ ತಿಳಿದ ಕುದುಪ ಅಲ್ಲಿಗೆ ಓಡಿ ಬಂದು ಎಷ್ಟೇ ಪ್ರಯತ್ನಿಸಿದರು ಸಿಕ್ಕಷ್ಟು ಪಾತ್ರಗಳು ಸಿಕ್ಕವು. ಆದರೆ ಆ ದಣಿಯ ಹೆಂಡತಿಯ ತಂದೆ ತನ್ನ ಮದುವೆಯಲ್ಲಿ ತನ್ನಪ್ಪ ಕೊಟ್ಟ ಆ ಬೆಳ್ಳಿಲೋಟ ಕಾಣುತ್ತಲೆ ಇಲ್ಲ. ಎಷ್ಟೇ ಹುಡುಕಿದರು ಕೂಡ, ಕುದುಪ ಗುಡ್ಡರಿಬ್ಬರೂ ಆಗ ತಾನೆ ಅಲ್ಲಿಗೆ ಬಂದ ಚಿನ್ನಮ್ಮನ ಜೊತೆ ಸೇರಿ ಕಣ್ಣೀರ ಮಳೆ ಸುರಿಸಿದರು. ಆ ಹೊಳೆಯಿಂದ ಬಂದ ಉತ್ತರ ಒಂದೇ ಬೆಳ್ಳಿ ಲೋಟ ಇಲ್ಲ. ಈ ವಿಷಯ ತಿಳಿದ ಧಣಿ ಗುಡ್ಡನಿಂದ ಸತ್ಯ ತಿಳಿಯಲು ಮನೆಯ ಅಂಗಳದ ಹೊಂಗೆಯ ಮರಕ್ಕೆ ಬಿಗಿದು ಕೊತ್ತಳಿಗೆಯಲ್ಲಿ ಬಡಿದೆ ಬಡಿದರು ಆ ಕಂದನ ಚೀರಾಟ ನರಳಾಟ ನೋಡಲಾಗದೆ ಧಣಿ ವೆಂಕಪ್ಪಯ್ಯ ಅಮಾನವೀಯತೆಯಿಂದ ನಡೆದುಕೊಳ್ಳುವುದನ್ನು ಚಿನ್ನಮ್ಮ ಪ್ರತಿರೋಧಿಸುವುದನ್ನು ನಾವಿಲ್ಲಿ ಕಾಣಬಹುದು “ನಮ್ಮ ಊರ ಕೋಡ್ದುಬ್ಬು ದೈವದ ಆಣೆಯಿದೆ... ಇನ್ನು ನನ್ನ ಮಗನ ಮೇಲೆ ಕೈ ಮಾಡಿದ್ದಲ್ಲಿ...’’ (ಪು. ೨೧)… ಎಂದು ತನ್ನ ಅಸಹಾಯಕ ಆಕ್ರೋಶ ವ್ಯಕ್ತಪಡಿಸುತ್ತಾಳೆ. ಕೊನೆಗೂ ಧಣಿಮನೆಯಲ್ಲಿ ವರ್ಷಾನುಗಟ್ಟಲೆ ಯಾವುದೇ ಪಡೆಯಿಲ್ಲದೆ ದುಡಿದು ತೀರಿಸುತ್ತೇನೆಂಬ ಕರಾರಿನನ್ವಯ ಗುಡ್ಡ ಬಂಧಮುಕ್ತನಾದನು. ನಡೆದ ನಿಜ ಸ್ಥಿತಿ ವಿವರಿಸಿದರೂ ಅವರು ಒಪ್ಪಲೊಲ್ಲರು. ಅಂದರೆ ಉಳ್ಳವರು ಎಂದಾದರೂ ಒಕ್ಕಲ ಮಕ್ಕಳನ್ನು ನಂಬಿದ್ದುಂಟೆ? ತಾವು ಮಾಡದ ತಪ್ಪಿಗೆ ಕಳ್ಳತನದ ಅಪವಾದ ಬೇರೆ ಜೊತೆಗೆ ಚಿನ್ನಮ್ಮನ ದುಡಿತಕ್ಕೆ ಯಾವುದೇ ಪಡಿಯಿಲ್ಲ.


ಈ ಘಟನೆ ನಡೆದು ನವಮಾಸಗಳು ಉರುಳಿವೆ ಬೆಂಕಿಯುಗುಳುವ ವೈಶಾಖ ಮಾಸ ಕಾಲಿಟ್ಟಿದೆ. ಚಿನ್ನಮ್ಮ ಧಣಿ ಮನೆಯ ಮುಸುರೆ ಪಾತ್ರೆಗಳನ್ನು ತೋಟದಂಚಿನಲ್ಲಿ ಕೂತು ಮುಸುರೆ ಪಾತ್ರೆ ತಿಕ್ಕುತ್ತಾ ಹೊಳೆಯ ಮನೆಹಾಳು ಬುದ್ಧಿಯನ್ನು ನಿಂದಿಸುತ್ತಿದ್ದಾಳೆ, ಅಷ್ಟರಲ್ಲೇ ಧಣಿಗಳು ಕುದುಪನ ಜೊತೆಗೂಡಿ ಆ ದಿನದ ಕೆಲಸ ಕಾರ್ಯಗಳ ಬಗ್ಗೆ ಮಾತೆತ್ತಿದ್ದಾರೆ. ಕುದುಪ ಸೊಂಟದಲ್ಲಿನ ಕರಿದಾರಕ್ಕೆ ಕೋಮಣದ ತುಂಡನ್ನು ಸಿಲುಕಿಸಿ ತಲೆಗೊಂದು ಎಲೆವಸ್ತ್ರ ಬಿಗಿದು ಧಣಿಗಳಿಂದ ಉದುರುವ ಮಾತುಗಳನ್ನು ಹೆಕ್ಕಿಕೊಳ್ಳುವ ಬಂಗಿಯಲ್ಲಿ ನಿಂತಿದ್ದಾನೆ. ನಮಗೆ ಇಲ್ಲಿ ಕಾಣುವ ಅಂಶವೆಂದರೆ ಸಂಸ್ಕೃತಿಯು ಇಡೀ ಸಮಾಜವು ಒಪ್ಪಿಕೊಳ್ಳುವಂತಹ ಕೆಲವು ರಚನೆಗಳನ್ನು ರೂಪಿಸಿರುತ್ತದೆ. ಆ ರಚನೆಗಳಿಗೆ ಅನುಸಾರವಾಗಿಯೇ ಪ್ರತಿಯೊಂದು ಸಮಾಜವು ನಡೆದುಕೊಳ್ಳಬೇಕು ಎನ್ನುವ ಹಾಗೆ ಇಡೀ ಸಮಾಜವನ್ನು ರೂಪಿಸುವುದು ಸಾಂಸ್ಕೃತಿಕ ಯಾಜಮಾನ್ಯದಿಂದ ಮಾತ್ರ ಸಾಧ್ಯ ಎನ್ನುವುದನ್ನು ಕಾಣಬಹುದಾಗಿದೆ. ಇಂತಹ ‘ಸಾಂಸ್ಕೃತಿಕ ಯಾಜಮಾನ್ಯದ’ ಮೂಲಕ ಪ್ರತಿಯೊಬ್ಬರು ನಿಯಂತ್ರಣಕ್ಕೆ ಒಳಪಡಿಸಿಕೊಂಡು ತನೆಗೆ ಬೇಕಾದಂತೆ ಅದನ್ನು ರೂಪಿಸುವ ಒಂದು ವರ್ಗ ಪ್ರತಿಯೊಂದು ಸಮಾಜದಲ್ಲು ಇರುತ್ತದೆ ಎನ್ನುವುದಕ್ಕೆ ಈ ಕಥೆಯ ಧಣಿ ವೆಂಕಪ್ಪಯ್ಯನ ಪಾತ್ರ ಉದಾಹರಣೆಯಾಗಿದೆ.


ಧಣಿಗಳು ಕುದುಪನಿಗೆ ಆ ದಿನದ ಕೆಲಸಕಾರ್ಯದ ಬಗ್ಗೆ ಸೂಚನೆ ನೀಡುತ್ತಿದ್ದರು. ಧಣಿಗಳ ಮಾತು ಚಿನ್ನಮ್ಮನ ಕಿವಿಗೂ ತಲುಪುತ್ತಿದೆ. ಆದರೆ ಅದು ತನಗಲ್ಲ ತನ್ನ ಕಿವಿ ಬೀಳಿನ ಬುಗುಡಿಗೆ ಎಂಬಂತೆ ತಾನು ಧಣಿಗಳ ಮನೆಯ ಮುಸುರೆ ಪಾತ್ರೆ ತಿಕ್ಕುತ್ತಾ ಹೊಳೆಯ ಬಗ್ಗೆಯೇ ತಲೆ ಕೆಡಿಸಿಕೊಳ್ಳುತ್ತಿದ್ದಳು. ಧಣಿ ವೆಂಕಪ್ಪಯ್ಯನ ಬಗ್ಗೆ ತಾತ್ಸಾರ ಮನೋಭಾವ ಮೂಡಿದೆ ಎಂಬುದು ಕೂಡ ಪ್ರತಿರೋಧದ ನೆಲೆಯಾಗಿದೆ. ಸುಡುವ ಸೂರ್ಯನಡಿ ಹೂಳೆತ್ತುತ್ತಾ ಕರಟುತ್ತಿರುವಾಗ ನೆರಳಲ್ಲಿ ಕೂತು ಧಣಿ ನೀಡುವ ಸೂಚನೆಗಳು ಚಿನ್ನಮ್ಮನ ಸಿಟ್ಟುನುರಿಗೆ ಮತ್ತಷ್ಟು ತುಪ್ಪ ಸುರಿದಂತಾಗುತ್ತಿತ್ತು. ಧಣಿಯ ಶೋಷಣೆ ತಾಳಲಾರದೆ ಸೂರ್ಯನನ್ನು, ಧಣಿಯನ್ನು ಮನದಲ್ಲೇ ಶಪಿಸುವ ಅವಳ ಮನೋವ್ಯಥೆ ಕಾಣಬಹುದು. ಕುದುಪ ಸುಸ್ತಾದ, ಒಂದರೆಕ್ಷಣ ಅಲ್ಲೇ ನೀರೊಳಗೆ ಕುಸಿದು ಕುಳಿತ. ನೆರಳಲಿದ್ದ ಧಣಿಗಳಿಗೆ ಸಿಟ್ಟಿನಿಂದ ಪಿತ್ತವೇರಿದಂತಾಯ್ತು. ‘‘ಎದ್ದೇಳೋ ಮರ‍್ಕಾಸಿನವ... ಪಡಿ ಅಳೆಯುವಾಗ ಪಾವಕ್ಕಿ ಕಮ್ಮಿ ಮಾಡಿದರೆ ಸುಮ್ಮನೆ ರ‍್ತಿಯೇನೋ ನೀನು?’’ (ಪು. ೨೨)… ಎಂದು ಸಿಡುಕಿದರು. ಮತ್ತೆ ಕುದುಪ ತನ್ನ ಮೈಯಲ್ಲಿನ ಶಕ್ತಿಯನ್ನೆಲ್ಲಾ ಕ್ರೋಡಿಕರಿಸಿ ಕೆಲಸಕ್ಕೆ ತೊಡಗಿದ. ಶತಶತಮಾನಗಳಿಂದಲೂ ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷದಲ್ಲಿ ಗೆಲ್ಲುತ್ತ ಬಂದವರು ಉಳ್ಳವರೇ. ಅವರ ಹಣ-ಅಧಿಕಾರ ಎಂತಹ ಪ್ರತಿರೋಧವನ್ನೂ ಹತ್ತಿಕ್ಕಬಲ್ಲ ತಾಕತ್ತುಳ್ಳದ್ದು.


ಚಿನ್ನಮ್ಮನಿಗಂತೂ ಪಡಿಯಿಲ್ಲದ ಈ ದುಡಿತದ ಬಗ್ಗೆ ಇನ್ನಿಲ್ಲದಂತಹ ಅಸಮಧಾನವಿದೆ. ಒಂದೆಡೆ ಕಳ್ಳತನದ ಅಪವಾದ, ಮತ್ತೊಂದೆಡೆ ಕಠಿಣ ಶ್ರಮದ ದುಡಿತಕ್ಕೂ ಬೆವರಿಗೂ ಪ್ರತಿಫಲವಿಲ್ಲ. ಗ್ರಾಮೀಣ ಭಾಗದಲ್ಲಿ ಜೀತ ಪದ್ಧತಿಗೆ ಒಳಗಾದ ಗ್ರಾಮೀಣ ಸಂವೇದನೆಯುಳ್ಳ ಸಮುದಾಯವೊಂದರ ರೂಪಕವಾಗಿ ಕುದುಪ-ಚಿನ್ನಮ್ಮರು ಕಾಣುತ್ತಾರೆ. ಜಾತಿ ಹಾಗೂ ವರ್ಗಶ್ರೇಣೀಕರಣದ ನೆಲೆಗಳು ಅದು ಉಂಟು ಮಾಡಿದ ಪರಿಣಾಮವನ್ನು ಈ ಕಥೆ ತೆರೆದಿಡುತ್ತದೆ. ಸಾಂಸ್ಕೃತಿಕ ಯಾಜಮಾನ್ಯ ಎನ್ನುವುದು ಸಮಾಜದಲ್ಲಿನ ಪ್ರಭಲ ವರ್ಗ, ಜಾತಿ ಮತ್ತು ಪ್ರಭಲ ಲಿಂಗಗಳೇ ರೂಪಿಸಿರುವುದನ್ನು ಪರಂಪರೆಯುದ್ದಕ್ಕೂ ಕಾಣಬಹುದಾಗಿದೆ. ಮೇಲ್ವರ್ಗ ಅಥವಾ ಪ್ರಭಲ ವರ್ಗಗಳು ತನಗೆ ಬೇಕಾದಂತೆ ನೀತಿ, ನಿಯಮಗಳನ್ನು ಸಮಾಜದ ಸಂಸ್ಕೃತಿಯ ಭಾಗವಾಗಿ ರೂಪಿಸಿಕೊಂಡು, ಪ್ರತಿಯೊಬ್ಬರೂ ಅದಕ್ಕನುಸಾರವಾಗಿ ನಡೆಯುವಂತೆ ಹೇರಿಕೆಗಳನ್ನು ಇಲ್ಲವೇ ತಾವು ಹೇಳಿದ್ದು ಶ್ರೇಷ್ಟ ಮಿಕ್ಕವು ಕೀಳು ಎಂದು ಹೇಳುವ ಮೂಲಕ ಮಿಕ್ಕ ಬಹುಸಂಖ್ಯಾತರನ್ನು ಅನ್ಯವಾಗಿಸುವ ಪ್ರಕ್ರಿಯೆಯನ್ನು ಸಾಂಸ್ಕೃತಿಕ ಯಾಜಮಾನ್ಯ ಎಂದು ಕರೆಯಲಾಗುತ್ತದೆ.


ನವಮಾಸಗಳ ನಂತರ ಕುದುಪ ತುಂಬಿದ ಹೂಳಿನಲ್ಲಿ ಬೆಳ್ಳಿಲೋಟವನ್ನು ಕಂಡಾಗ ಸದ್ದಿಲ್ಲದೆ ಬಂದ ಧಣಿಗಳು ನೆರಳಲ್ಲೇ ನಿಂತು ತನ್ನೆದುರು ನಡೆಯುತ್ತಿದ್ದ ‘ವ್ಯಾಪಾರ’ವನ್ನು ಕಿರುಗಣ್ಣಿನಿಂದ ಗಮನಿಸುತ್ತಿದ್ದಂತೆ ಅವರ ಎದೆ ಬಡಿತದ ಲಯ ತಪ್ಪತೊಡಗಿತು. ಅವರ ಒಡಲ ಸಮಸ್ತ ವ್ಯವಹಾರಗಳು ಒಂದರೆಗಳಿಗೆ ಸ್ತಬ್ಧಗೊಂಡಂತಾಯ್ತು! ಬೆಳ್ಳಿಲೋಟ ಕಂಡಾಗ ಧಣಿಯಲ್ಲಿ ಆತಂಕ, ಗಾಬರಿ, ಭಯ ಉಂಟಾಯಿತು ಏಕೆಂದರೆ ಆ ಬೆಳ್ಳಿಲೋಟದಿಂದಾಗಿ ಪಡಿಯಕ್ಕಿ ಉಳಿದಿತ್ತು, ಮುಗ್ಧ ಬಾಲಕ ಗುಡ್ಡನನ್ನು ಹೊಂಗಾರೆ ಮರಕ್ಕೆ ಕಟ್ಟಿ ಚರ್ಮ ಸುಲಿಯುವಂತೆ ಹೊಡೆದದ್ದ, ಬಿರು ಬೇಸಿಗೆಯಲ್ಲಿ ಕುದುಪ ಚಿನ್ನಮ್ಮ ರಿಂದ ದುಡಿಸಿದ್ದು, ಬಾಯಿಗೆ ಬಂದಂತೆ ಬೈದು ಅವಮಾನ ಗೊಳಿಸಿದ್ದು!, ಈ ಬೆಳ್ಳಿಲೋಟ ಕಾರಣದಿಂದಾಗಿ ಆ ಬಡ ಕುಟುಂಬದ ಮೇಲೆ ನಡೆಸಿದ ಅಮಾನವೀಯ ದಾಳಿ ಎಲ್ಲವೂ ನೆನಪಾಗಿ ಎದೆ ಬಡಿತದ ಲಯ ತಪ್ಪತೊಡಗಿತು. ಚಿನ್ನಮ್ಮ ತನ್ನ ಕೈಯಲ್ಲಿದ್ದ ಲೋಟ ತಿರುಗಿಸುತ್ತಿದ್ದಂತೆ ಅವರನ್ನೇ ಆಕೆ ತಿರುಗಿಸಿದಂತಾಯ್ತು. ಧಣಿಗಳಿಗೆ ಕಾಣುವಂತೇ ಎತ್ತರಿಸಿ ಹಿಡಿದು ನೋಡಿಯೇ ನೋಡಿದಳು. ‘ಲೋಟದ ಚಂದವನ್ನು ಆಕೆ ಮತ್ತೆ ಮತ್ತೆ ತಿರುಗಿಸಿ ನೋಡುತ್ತಿದ್ದಂತೆ. ಆಕೆಯ ಒಡಲಲ್ಲೂ ಅದೆಷ್ಟೊ ಭಾವನೆಗಳು ಗಿರಕಿ ಹೊಡೆಯತೊಡಗಿದ್ದವು. ಇದೇ ಲೋಟವಲ್ಲವೆ ತನ್ನ ಬೆವರಿನ ಬೆಲೆ ಕಳೆದದ್ದು. ಕಳ್ಳತನದ ಕಿರೀಟವನ್ನು ತನ್ನ ಮುರುಕಲ ಗುಡಿಸಲ ಚಾವಣಿಗೆ ಜೋಡಿಸಿದ್ದು! ಥೂ! ಬೆಳ್ಳಿಯದ್ದಾದರೇನಂತೆ. ಬುದ್ಧಿ ಮಣ್ಣಿಗಿಂತಲೂ ಬುರ್ನಾಸು, ಮರ‍್ಕಾಸಿನದ್ದು! ಪಟ್ಟದ ಮೇಲಿನ ಕತ್ತಿಗೆ ಚಟ್ಟದಲ್ಲಿರುವವನ ಮೇಲೆ ದಿಟ್ಟಿ ಎಂದಿಗೂ ಸಲ್ಲ’ ಎನ್ನುವ ಮಾತು ಸಾಂಸ್ಕೃತಿಕ ಯಾಜಮಾನ್ಯದ ಧ್ವನಿಯಾಗಿದೆ.


ಈ ಬೆಳ್ಳಿಲೋಟದಿಂದಾಗಿ ತನ್ನ ಕುಟುಂಬ ಇದುವರೆಗೆ ಉಂಡ ನೋವು, ಅವಮಾನ, ಪಟ್ಟಪಾಡು ಪರಿತಾಪಗಳೆಲ್ಲ ಚಿನ್ನಮ್ಮನ ಆ ಸಂಕಟವುಂಡ ಜೀವಕ್ಕೆ ಏನನ್ನಿಸಿತೋ ಆ ಕ್ಷಣ! ಬೆಳ್ಳಿಲೋಟ ಹಿಂದಿರುಗಿಸುವುದರಿಂದ ಪಟ್ಟ ಪಾಡು ನೋವು ಅವಮಾನ ಬೆವರಿನ ಬೆಲೆ ಮತ್ತೆ ಹಿಂದಿರುಗಲೂ ಸಾಧ್ಯವೇ? ಎಂದು ಚಿನ್ನಮ್ಮ ತಟ್ಟನೆ ಪೂರ್ವಾಭಿಮುಖವಾಗಿ ನಡೆದಳು ಆ ಹೊಳೆಯಲ್ಲೆ ಹತ್ತು ಹೆಜ್ಜೆ ಹಾಕಿ ಹನ್ನೊಂದನೇ ಹೆಜ್ಜೆಯಡಿ ನಿಂತವಳು. ಅತ್ತ ದೂರದಲ್ಲಿದ್ದ ಹೊಳೆಯ ಆಳ ಮಡುವತ್ತ ಬೆಳ್ಳಿಲೋಟವನ್ನು ಎಸೆದೆ ಬಿಟ್ಟಳು! ಈ ಮೂಲಕ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಾಳೆ. ಬೆಳ್ಳಿಲೋಟ ಆಳದ ಮಡುವಲ್ಲಿ ಮುಳುಗಿಹೋಯ್ತು. ತನ್ನ ಗುಡಿಸಲ ಛಾವಣಿಯ ಮೇಲಿನ ಕಳ್ಳತನದ ಅಪವಾದ ತೊಲಗಿತು ಎಂದು ಚಿನ್ನಮ್ಮ ಹೊಳೆಯ ನೀರಲ್ಲೊಮ್ಮೆ ಸಂಪೂರ್ಣ ಮುಳುಗಿ ಮತ್ತೆ ಎದ್ದು ನಿಂತಳು. ಚಿನ್ನಮ್ಮನಂತಹ ಹಸಿದವರು ಅನ್ನಕ್ಕಿಂತ ಮುಖ್ಯವಾಗಿ ತಮ್ಮ ಆತ್ಮಗೌರಕ್ಕಾಗಿ ಸಿಡಿದೆದ್ದವರು. ಈ ಮೂಲಕ ನೆರಳಲ್ಲಿದ್ದ ಧಣಿಯವರು ತಾನು ಹೊದ್ದುಕೊಂಡಿದ್ದ ವಲ್ಲಿಯಿಂದ ಮುಖಕ್ಕೆ ಗಾಳಿ ಬೀಸಿಕೊಂಡರು ಹೊರತು ಚಿನ್ನಮ್ಮ ಬೆಳ್ಳಿಲೋಟವನ್ನು ಹೊಳೆಗೆ ಎಸೆದಾಗ ಧಣಿ ವೆಂಕಪ್ಪಯ್ಯ ಅದನ್ನು ಕಂಡರೂ ಕೂಡ ತಡೆಯಲಾರದವನಾಗುತ್ತಾನೆ. ಕುದುಪನ ಸಂಸಾರ ತಮ್ಮೊಡೆಯನ ಪಾದದಡಿಯಲಿ ಸಿಲುಕಿ ನಲುಗುತ್ತಿರುವಾಗಲೂ ಚಿನ್ನಮ್ಮನ ಬಂಡಾಯದ ಧ್ವನಿ ವೆಂಕಪಯ್ಯನನ್ನು ಒಂದರೆ ಘಳಿಗೆ ನಡುಗಿಸಿಬಿಡುತ್ತದೆ. ಬಡವನ ಕೋಪ ದವಡೆಗೆ ಮೂಲವಾಗಿದ್ದರೂ ತನ್ನೊಳಗಿನಸಿಟ್ಟು, ಆಕ್ರೋಶ, ಅಸಹಾಯಕತೆಗಳನ್ನೆಲ್ಲಾ ಒಟ್ಟುಗೂಡಿಸಿಕೊಂಡ ಮೂರ್ತ ರೂಪದಂತೆ ಚಿನ್ನಮ್ಮ ಬೆಳ್ಳಿಲೋಟವನ್ನು ನದಿಗೆ ಎಸೆದು, ತನ್ನೊಳಗಿನ ತನಿಗೆ ನ್ಯಾಯ ಕೊಡಿಸುವುದರೊಟ್ಟಿಗೆ ವೆಂಕಪ್ಪಯ್ಯನ ಅಹಂಗೆ ಬಹುದೊಡ್ಡ ಪೆಟ್ಟನ್ನೇ ಕೊಟ್ಟಿದ್ದಾಳೆ.

ಧಣಿಗಳ ಬೆಳ್ಳಿಲೋಟ ಕತೆಯಲ್ಲಿ ಕ್ರಾಂತಿಯಿಲ್ಲ, ಧಣಿಯ ವಿರುದ್ಧ ನೇರವಾದ ಪ್ರತಿಭಟನೆಯೂ ಇಲ್ಲ, ತಮ್ಮ ಅಸಹಾಯಕತೆಯ ಮೂಲಕವೇ ಪ್ರತಿಭಟನೆಯನ್ನು ತೋರಿಸುವುದು ಗುರುತಿಸಬಹುದಾಗಿದೆ.


ಪರಾಮರ್ಶನ ಗ್ರಂಥ

೧. ನಾಗವೇಣಿ. ಎಚ್. ಮೀಯುವ ಆಟ. ಲೋಹಿಯಾ ಪ್ರಕಾಶನ, ಬಳ್ಳಾರಿ, ೨೦೦೫.

Comments


bottom of page