top of page

ಕೊಡಗಿನ ಗೌರಮ್ಮನವರ ಕಥೆಗಳ ತಾತ್ವಿಕ ಸ್ವರೂಪ

ಮಂಜುನಾಥ ಟಿ.

ಸಂಶೋಧನಾರ್ಥಿ

ಕನ್ನಡ ಭಾರತಿಕುವೆಂಪು ವಿಶ್ವವಿದ್ಯಾಲಯಜ್ಞಾನ ಸಹ್ಯಾದ್ರಿ,

ಶಂಕರಘಟ್ಟ manjumt94@gmail.com

mobile No: 6360657361


ಕನ್ನಡ ಸಾಹಿತ್ಯದಲ್ಲಿ `ಸಣ್ಣಕಥೆ'ಗೆ ಮಹತ್ವದ ಸ್ಥಾನವಿದೆ. ಅಪರಿಚಿತ ಸಂಗತಿಗಳನ್ನು ಕೇಳಿ ತಿಳಿಯುವ ಕುತೂಹಲ ಮನುಷ್ಯನಲ್ಲಿ ಬೆಳೆದಂದಿನಿಂದ ಕುತೂಹಲವನ್ನು ಕಾಯ್ದಿರಿಸಿಕೊಳ್ಳುವ ಪ್ರಯತ್ನದಿಂದಾಗಿ 'ಕಥೆ' ಹೇಳುವ ಪ್ರವೃತ್ತಿ ಬೆಳೆದಿರಬೇಕು. ಆದರೆ 'ಸಣ್ಣಕಥೆ' ಎಂಬುದು ಸ್ವರೂಪ ಹಾಗೂ ವಿನ್ಯಾಸದಲ್ಲಿ ಆಧುನಿಕವಾದುದು. ಅದು ಒಂದು ನಿರ್ದಿಷ್ಟ ಕಾಲ ಮತ್ತು ಸ್ಥಳಗಳಲ್ಲಿ ಪಾತ್ರಗಳ ಕ್ರಿಯೆ ಮತ್ತು ಪ್ರತಿಕ್ರಿಯೆಗಳ ಮೂಲಕ ಭಾವನೆಗಳನ್ನು ತೆರೆದಿಡುವಂಥದ್ದಾಗಿದೆ. ಅದು ದೇಶಿ ಸತ್ವವನ್ನು ಒಳಗೊಂಡಿದ್ದರೂ ಸ್ವರೂಪ ಹಾಗೂ ರಚನೆ ವಿಧಾನದಲ್ಲಿ ಎರವಲು ಲಕ್ಷಣಗಳನ್ನು ಮೈಗೂಡಿಸಿಕೊಂಡ ಪ್ರಕಾರವಾಗಿದೆ.


ಕನ್ನಡ ಸಣ್ಣಕಥೆಗೆ ಸುದೀರ್ಘವಾದ ಪರಂಪರೆಯಿದೆ. ಆ ಪ್ರಕಾರದ ಅಧ್ಯಯನವನ್ನು ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖ ಕಾಲಘಟ್ಟವಾದ ನವೋದಯದ ಸಂದರ್ಭದಲ್ಲಿಟ್ಟು ಪರಿಶೀಲಿಸುವ ಅಗತ್ಯವಿದೆ. ಏಕೆಂದರೆ ಆ ಅವಧಿ ಸಾಮಾಜಿಕ, ಸಾಂಸ್ಕೃತಿಕ ಸ್ಥಿತ್ಯಂತರದ ನೆಲೆಯುಳ್ಳದ್ದಾಗಿದೆ. ಆದ್ದರಿಂದ ಅಂದಿನ ಕಥೆಗಾರರ ಆಲೋಚನಾ ಕ್ರಮದಲ್ಲಿರುವ ವಿಭಿನ್ನ ದೃಷ್ಟಿಕೋನಗಳು ಗಮನಾರ್ಹವಾದುದು. ವೈಜ್ಞಾನಿಕ, ವೈಚಾರಿಕ, ಸಾಮಾಜಿಕವಾಗಿ, ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ಅನೇಕ ಮಹತ್ವದ ಬದಲಾವಣೆಗಳು ಸಂಭವಿಸಿದ ಕಾಲವಾಗಿದೆ. ಪಾಶ್ಚಾತ್ಯರ ಪ್ರಭಾವಗಳನ್ನು ಸ್ವೀಕರಿಸಿಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಟ ನಡೆಸಿ, ವೈವಿಧ್ಯಪೂರ್ಣವಾದ ಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಂಡಿತು. ಅವುಗಳಲ್ಲಿ ಮುಖ್ಯವಾಗಿ ಗಮನಿಸಬೇಕಾದುದು ಸಣ್ಣಕತೆಯ ಪ್ರಕಾರವಾಗಿದೆ. ಆರಂಭದಿಂದ ಇದುವರೆಗು ಅದು ಕಾಲಕಾಲಕ್ಕೆ ಅನೇಕ ಸವಾಲುಗಳನ್ನು ಎದುರಿಸಿ, ಆಧುನಿಕ ಸಾಹಿತ್ಯದ ಎಲ್ಲ ಪ್ರಮುಖ ಚಳುವಳಿಗಳಲ್ಲೂ ಕ್ರಿಯಾಶೀಲವಾಗಿ ಭಾಗವಹಿಸಿದೆ. ಆಯಾ ಕಾಲಘಟ್ಟದಲ್ಲಿ ಈ ಪ್ರಕಾರ ಹಲ ಕೆಲವು ಬದಲಾವಣೆಗಳನ್ನು ಅನುಭವಿಸಿ, ಮುಂದುವರೆದು ಹೊಸ ಹೊಸ ಪ್ರಯೋಗಗಳಿಗೆ ತನ್ನನ್ನು ತಾನು ತೆರೆದುಕೊಂಡು ತನ್ನ ಜೀವಂತಿಕೆಯನ್ನು ಕಾಯ್ದುಕೊಂಡು ಬಂದಿದೆ. ಆಧುನಿಕ ಜಗತ್ತಿಗೆ ಒಗ್ಗಿಕೊಂಡು ಬಂದಿರುವ ಇದು ಅತ್ಯಂತ ಜನಪ್ರಿಯ ಪ್ರಕಾರವಾಗಿದೆ. ಶತಮಾನದುದ್ದಕ್ಕೂ ಅವ್ಯಾಹತವಾಗಿ ಸಾಗಿಬಂದ ಈ ಪ್ರಕಾರವು ನವನವೋನ್ಮೇಷ ಶಾಲಿನಿಯಾಗಿ ಹೊಸ ದಿಕ್ಕು ದಿಶೆಗಳನ್ನು ಪಡೆಯುತ್ತ ಮುನ್ನಡೆದಿದೆ.


ಅದೇ ಸಂದರ್ಭದಲ್ಲಿ ೧೯೩೦ರ ಸರಿ ಸುಮಾರಿನಲ್ಲಿ ಸಣ್ಣಕಥೆಯ ಕ್ಷೇತ್ರದಲ್ಲಿ ಮಹಿಳಾ ಲೇಖಕಿಯರು ಬರೆಯಲು ಆರಂಭಿಸಿದರು. ಶ್ಯಾಮಲಾ ಬೆಳಗಾಂವಕರ, ಕೊಡಗಿನ ಗೌರಮ್ಮ (ಶ್ರೀಮತಿ ಬಿ.ಟಿ.ಜಿ. ಕೃಷ್ಣ) ಹಾಗೂ ಸರಸ್ವತಿ ಬಾಯಿ ಮಾಜವಾಡೆ ಇವರನ್ನು ಈ ಪ್ರಕಾರದ ಆದ್ಯೆಯರು ಎಂದು ಗುರುತಿಸಬಹುದಾಗಿದೆ. ಇವರಿಗಿಂತ ಮೊದಲು ಸಣ್ಣಕಥೆಗಳನ್ನು- ಬರೆದ ಮಹಿಳಾ ಲೇಖಕಿಯರಿದ್ದಾರೆ. ಆದರೆ ಇವರಷ್ಟು ಮಹತ್ವದ ಪ್ರಯೋಗಗಳನ್ನು ಮಾಡಿದವರನ್ನು ಗುರುತಿಸಲು ಅಸಾಧ್ಯವಾಗಿದೆ. ಕಳೆದ ಆರು ದಶಕಗಳಲ್ಲಿ ಮಹಿಳಾ ಕಥಾಸಾಹಿತ್ಯಕ್ಕೂ ಒಂದು ಪರಂಪರೆ ನಿರ್ಮಿತವಾಗಿದೆ. ಈ ಪರಂಪರೆಯ ಮೊದಲ ಪೀಳಿಗೆಯಲ್ಲಿ ಗುರ್ತಿಸಿಕೊಳ್ಳುವ ಕೊಡಗಿನ ಗೌರಮ್ಮ, ಶ್ಯಾಮಲಾ ಬೆಳಗಾಂವಕರರವರು ಎದುರಿಸಿದ ಮುಖ್ಯ ಪ್ರಶ್ನೆಯ ಸ್ವರೂಪ ಸಾಮಾಜಿಕವಾದುದಾಗಿದೆ. ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀ ಒಬ್ಬ ವ್ಯಕ್ತಿಯಾಗಿ ಗುರುತಿಸಲ್ಪಡದೆ ಪತ್ನಿ, ವಿಧವೆ, ವೇಶ್ಯ ಹೀಗೆ ಪುರುಷನ ಸಂಬಂಧದಲ್ಲಿಯೇ ಗುರುತಿಸಲ್ಪಟ್ಟಿದ್ದರಿಂದ ಅವಳಿಗೆ ಸ್ವತಂತ್ರವಾದ ಅಸ್ತಿತ್ವವಾಗಲಿ, ಅದರ ಕಲ್ಪನೆಯಾಗಲಿ ಇರಲಿಲ್ಲ. ಮೊದಲನೆಯ ಪೀಳಿಗೆಯ ಲೇಖಕಿಯರ ಕತೆಗಳಲ್ಲಿ ಬರುವ ಸ್ತ್ರೀ ಪ್ರತಿಮೆಗಳೆಲ್ಲ ಈ ಅವಸ್ಥೆಯ ಸಂಕೇತಗಳಾಗಿ ಬರುತ್ತವೆ. ಈ ಸಂಕೇತಗಳನ್ನು ಭಾಷೆಯಲ್ಲಿ ಸೃಷ್ಟಿಸುವ ಕೃತಿಯ ಸ್ವರೂಪ ಮೂಲತ: ಪ್ರತಿಭಟನಾತ್ಮಕವಾದುದು. ತಾವು ಸಮಾಜದಲ್ಲಿ ಕಂಡು ಅನುಭವಿಸಿದ ಚಿತ್ರಗಳನ್ನೇ ಈ ಲೇಖಕಿಯರು ಕೊಡುತ್ತಿದ್ದುದರಿಂದ ವಾಸ್ತವದ ಅನುಸರಣೆ ಅವರಿಗೆ ಅವಶ್ಯವೆನಿಸಿತು. ಅಲ್ಲದೆ ಪರಂಪರೆಯ ಹೆಸರಿನಲ್ಲಿ ಸ್ತ್ರೀಯರನ್ನು ಹಿಂಸಿಸುತ್ತಿದ್ದ ದುಷ್ಟ ಪದ್ಧತಿಗಳತ್ತ ತಮ್ಮ ಗಮನವನ್ನು ಹರಿಸುವುದರ ಮೂಲಕ ರೂಢಿಬದ್ಧ ಜಾಡಿನಲ್ಲಿ ಸಾಗದೆ ಹೊಸ ಹಾದಿಯನ್ನು ಹಿಡಿಯಬಲ್ಲ ಸಾಧ್ಯತೆಗಳನ್ನು ಬಿತ್ತರಿಸುವುದು ಆರಂಭಿಕ ಕತೆಗಾರ್ತಿಯರ ಮುಖ್ಯ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ಕೊಡಗಿನ ಗೌರಮ್ಮನವರನ್ನು ಹಾಗೂ ಅವರ ಕಥೆಗಳನ್ನು ಗಮನಿಸಬಹುದಾಗಿದೆ.


ಕೊಡಗಿನ ಗೌರಮ್ಮನವರು ಕನ್ನಡ ನವೋದಯ ಕಾಲದಲ್ಲಿ ಕನ್ನಡಿಗರಲ್ಲಿ ತುಂಬು ಭರವಸೆ ಮೂಡಿಸಿದ ಶ್ರೇಷ್ಠ ಕತೆಗಾರ್ತಿಯಾಗಿದ್ದಾರೆ. ಇವರ ಕಥೆಗಳಿಗೆ ಸಾಮಾಜಿಕ ಮಹತ್ವವಿದೆ. ಸಮಾಜದಲ್ಲಿ ಅನಿಷ್ಟ ಪದ್ದತಿಗಳಾದ ಬಾಲ್ಯ ವಿವಾಹ, ಅಸಮ್ಮತ ವಿವಾಹ, ವಿಧವಾ ಸಮಸ್ಯೆಗಳು, ವರದಕ್ಷಿಣೆ ಕಿರುಕುಳ, ಜಾತಿ ತಾರತಮ್ಯತೆ ಮೊದಲಾದ ಅಂಶಗಳೇ ಇವರ ಕಥೆಗಳ ವಸ್ತುವಾಗಿದೆ. ಇದರ ಜೊತೆಗೆ ಈ ಎಲ್ಲಾ ಸಮಸ್ಯೆಗಳಿಗೆ ಒಳಗಾಗುವವಳು ಹೆಣ್ಣಾಗಿದ್ದಾಳೆ. ಗೌರಮ್ಮನವರ 'ಪುನರ್ವಿವಾಹ' ಕಥೆಯಲ್ಲಿ ವಿಧುರನೊಬ್ಬ ಬಾಲವಿಧವೆಯೊಬ್ಬಳನ್ನು ಮದುವೆಯಾಗಲು ಪ್ರಯತ್ನಿಸಿ ಅವಳು ಬಾಲವಿಧವೆಯೆಂಬುದು ತಿಳಿದ ಕೂಡಲೆ ಅವಳನ್ನು ಅಮಂಗಳವೆಂಬ ಕಾರಣಕ್ಕೆ ತಿರಸ್ಕರಿಸುತ್ತಾನೆ. ಕೊನೆಗೆ ಅವಳ ದಿಟ್ಟ ನಡೆಯಿಂದ ಮನಃಪರಿವರ್ತನೆಯಾಗಿ ವಿಧವಾ ಸೇವೆಗೆ ತನ್ನ ಜೀವನವನ್ನು ಮೀಸಲಾಗಿಡುವಂತೆ ಮಾಡುವ ರಾಜಿಯಂತಹ ಪಾತ್ರಗಳನ್ನು ಗಮನಿಸಬಹುದಾಗಿದೆ.


ಇವರ ಕಥೆಗಳಲ್ಲಿ ಆಧುನಿಕತೆ ಹಾಗೂ ಪರಂಪರೆ ಎರಡೂ ಒಟ್ಟೊಟ್ಟಿಗೆ ಬಂದಿದೆ. ಇವರ ಹಲವು ಕಥೆಗಳು ವಾಸ್ತವವಾಗಿ ಮಾರ್ಗದ ಲಕ್ಷಣವನ್ನು ಒಳಗೊಂಡಿದ್ದುದಾಗಿದೆ. ಉದಾಹರಣೆಗೆ 'ಮರದ ಬೊಂಬೆ' ಕಥೆಯನ್ನು ಗುರುತಿಸಬಹುದಾಗಿದೆ. ಹಾಗೆಯೇ 'ವಾಣಿಯ ಸಮಸ್ಯೆ' ಕಥೆಯಲ್ಲಿನ ಇಂದುವಿನ ಪಾತ್ರದ ಮೂಲಕ ವಿಧವಾ ಸಮಸ್ಯೆಯ ಚಿತ್ರಣವನ್ನು ಕಣ್ಣ ಮುಂದೆ ತರಿಸುತ್ತದೆ. ಅಲ್ಲದೆ ಮಧ್ಯಮ ವರ್ಗದ ಕೌಟುಂಬಿಕ ವಾತಾವರಣದ ಚಿತ್ರಣಗಳು, ಹಾಗೂ ಅದರ ನಡುವೆ ಮಾನವನ ವರ್ತನೆಗಳು, ನಡವಳಿಕೆಗಳು ಪ್ರಧಾನವಾಗಿ ಕಂಡುಬರುತ್ತವೆ. ಹಾಗೆಯೇ ಗೌರಮ್ಮನವರ ಬಹುತೇಕ ಕಥೆಗಳಲ್ಲಿ ಸ್ತ್ರೀ ಪಾತ್ರಗಳ ದಟ್ಟಣೆಯಿದೆ ಸ್ತ್ರೀ ಸಂವೇದನೆ ಬಹುಮುಖ್ಯವಾದುದಾಗಿದೆ. ಇವರ ಕಥೆಗಳನ್ನು ಗಮನಿಸಿದಾಗ ಗೌರಮ್ಮನವರು ಮಹಿಳಾ ಪಕ್ಷಪಾತಿಯೋ ಎನಿಸುವಷ್ಟು ಸ್ತ್ರೀ ಪಾತ್ರಗಳು ಅವರ ಕತೆಗಳಲ್ಲಿವೆ. ಜೊತೆಗೆ ಸ್ತ್ರೀ ದೃಷ್ಟಿಕೋನದ ಜೀವಂತಿಕೆಯಿದೆ. ಸಾಮಾಜಿಕ ವ್ಯವಸ್ಥೆಯೊಳಗೆ ನೊಂದ ಮಹಿಳೆಯರ ಬಗ್ಗೆ ಕುರುಣೆಗಿಂತಲೂ ಸಮಾಜಿಕ ಜವಾಬ್ದಾರಿಯ ದೃಷ್ಟಿಕೋನವನ್ನು ಕಾಣುತ್ತೇವೆ. ಹೆಣ್ಣನ್ನು ಈ ಸಮಾಜ ಹೇಗೆ ನಡೆಸಿಕೊಂಡು ಬಂದಿದೆ ಎನ್ನುವುದು ಇವರ ಕಥೆಗಳಲ್ಲಿ ಮತ್ತೆ ಮತ್ತೆ ಏಳುವ ಪ್ರಶ್ನೆಯಾಗಿದೆ. ಪರಂಪರೆಯಿಂದ ನಂಬಿಕೊಂಡು ಬಂದ ಸಂಪ್ರದಾಯವನ್ನು ಪ್ರಶ್ನಿಸುವ ಸುಧಾರಕ ಬುದ್ದಿಯಿದೆ. ಉದಾತ್ತವಾದ ಜೀವನ ದೃಷ್ಟಿಯನ್ನು ಅವರ ಕಥೆಗಳಲ್ಲಿ ಕಾಣುತ್ತೇವೆ. ಉದಾಹರಣೆಗೆ ಅವರ 'ಪುನರ್ವಿವಾಹ', ಮೊದಲಾದವು. ಹಾಗೆಯೇ ಗಂಡು ಹೆಣ್ಣು ಪ್ರೀತಿ ಪ್ರೇಮದ ಸೆಳೆತದಲ್ಲಿ ಸಿಕ್ಕು ಅನುಭವಿಸುವ ವೇದನೆ, ನೋವು, ಹತಾಶೆ, ಆಂತರಿಕ ತುಮುಲಗಳನ್ನು ನೈಜವಾಗಿ ಚಿತ್ರಿಸಿದ್ದಾರೆ. ಕೌಟುಂಬಿಕ ಸಂಬಂಧದಲ್ಲಿನ ಒಡಕುಗಳು, ಭಿನ್ನಾಭಿಪ್ರಾಯವನ್ನು ಕಥೆಗಳಲ್ಲಿ ಬಿಂಬಿಸುವ ಪ್ರಯತ್ನ ಮಾಡಿದ್ದಾರೆ.


ಇವರ ಕಥೆಗಳಲ್ಲಿ ಜಾತಿ-ಪಂಥಗಳ ಹೆಸರಿನಲ್ಲಿ ನಡೆಸುತ್ತ ಬಂದಿರುವ ಅನ್ಯಾಯಗಳು, ಕಂದಾಚಾರಗಳನ್ನು ತೋರಿಸುತ್ತಾ ಬಂದಿದ್ದಾರೆ. ಇವರ 'ಹೋಗಿಯೇ ಬಿಟ್ಟಿದ್ದ', 'ಮುನ್ನಾದಿನ ಕಥೆಗಳಲ್ಲಿ ಜಾತಿ ಧರ್ಮಕ್ಕಿಂತ ಮಾನವೀಯ ಮೌಲ್ಯ, ನಿಷ್ಕಲ್ಮಶವಾದ ಪ್ರೀತಿ ದೊಡ್ಡದು ಎಂಬುದನ್ನು ತಿಳಿಯಬಹುದಾಗಿದೆ. ಅದೇ ರೀತಿ ಇವರ ಕಥೆಯಲ್ಲಿ ವೇಶೈಯರ ಬದುಕಿನ ಹಲವು ಸಮಸ್ಯೆಗಳನ್ನು 'ಮನುವಿನ ರಾಣಿ' ಯಲ್ಲಿ ಹೇಳುವಲ್ಲಿ ಸಫಲರಾಗಿದ್ದಾರೆ. ಕೊಡಗಿನ ಗೌರಮ್ಮನವರ ಕಥೆಗಳಲ್ಲಿ ಪ್ರೀತಿ, ಪ್ರೇಮ, ಸಮಾಜದ ಕಪಿಮುಷ್ಟಿಯಲ್ಲಿ ಸಿಲುಕಿದ ಗಂಡು ಹೆಣ್ಣುಗಳ ಭಾವನೆ, ಅಸಹಾಯಕತೆಗಳನ್ನು ಪ್ರಕಟಿಸುತ್ತವೆ. 'ನನ್ನ ಮದುವೆ', 'ಅದೃಷ್ಟದ ಆಟ', ಮುಂತಾದ ಕತೆಗಳನ್ನು ಗಮನಿಸಬಹುದಾಗಿದೆ. 'ವಾಣಿಯ ಸಮಸ್ಯೆ'


ಕತೆಯಲ್ಲಿ ಬಾಲ ವಿಧವೆಯ ಭಾವನಾ ಪ್ರಪಂಚವನ್ನು ಗಂಡು ಹೆಣ್ಣಿನ ಆಕರ್ಷಣೆಯ ಸಹಜ ಪ್ರವೃತ್ತಿಯ ತೀವ್ರತೆಯನ್ನು, ನೀತಿ-ಅನೀತಿಯ ಪ್ರಶ್ನೆ, ಆಸೆ-ನಿರಾಶೆಯ ಸಂಕಟವನ್ನು ಶೋಧಿಸುವ ವಿಶಿಷ್ಟ ಪ್ರಯತ್ನವನ್ನು ಕಾಣಬಹುದಾಗಿದೆ. ಹಾಗೆಯೇ ಗಂಡು-ಹೆಣ್ಣಿನ ಭಾವನಾತ್ಮಕ ಸಂಬಂಧಗಳನ್ನು ವಿರೂಪಗೊಳಿಸುವ ನೇತ್ಯಾತ್ಮಕ ಸಂಗತಿಗಳನ್ನು ಹಲವಾರು ಕತೆಗಳಲ್ಲಿ ಚಿತ್ರಿಸಿದ ಗೌರಮ್ಮನವರು ಪ್ರೀತಿ-ಪ್ರೇಮದ ಮಾರ್ದವತೆ ಮತ್ತು ಪರವಶತೆಯನ್ನು ಅಷ್ಟೇ ತೀವ್ರವಾಗಿ ಚಿತ್ರಿಸಿದ್ದಾರೆ.


ನವೋದಯ ಸಂದರ್ಭದಲ್ಲಿ ಬಂದ ಗೌರಮ್ಮನವರು ತಮ್ಮ ಕೃತಿಗಳಲ್ಲಿ ಸ್ತ್ರೀಯ ಸ್ಥಾನಮಾನಗಳ ಮಾನಾಪಮಾನಗಳ, ನೋವು-ನಲಿವುಗಳ ಕುರಿತು, ವಿವಾಹ ಪೂರ್ವ, ವಿವಾಹ ನಂತರದ ಲೈಂಗಿಕ ಸಂಬಂಧಗಳಿಂದ ಉಂಟಾದ ಸಮಸ್ಯೆಗಳ ಕುರಿತು, ಬಾಲ್ಯವಿವಾಹ, ವಿಧವಾ ವಿವಾಹ, ವರದಕ್ಷಿಣೆಯಂತಹ ಸಮಸ್ಯೆಗಳ ಕುರಿತು ಹಾಗೂ ಸ್ತ್ರೀ ಶಿಕ್ಷಣದ ಅಗತ್ಯದ ಕುರಿತು ವಿವೇಚಿಸಿದ್ದಾರೆ. ಶೈಕ್ಷಣಿಕ ಸೌಲಭ್ಯ, ಸಾಮಾಜಿಕ ಸ್ವಾತಂತ್ರ‍್ಯ ಇಲ್ಲದ ಅಂದಿನ ಸಂದರ್ಭದಲ್ಲಿ ಗೌರಮ್ಮನವರು ಸ್ತ್ರೀ ಜಗತ್ತಿನ ಸಮಸ್ಯೆಗಳನ್ನು ವಸ್ತುನಿಷ್ಟವಾಗಿ ಮತ್ತು ಅನುಭವಾತ್ಮಕವಾಗಿ ಸರಳವಾದ ಶೈಲಿಯಲ್ಲಿ ಆತ್ಮೀಯವಾಗಿ ಚಿತ್ರಿಸಿದ್ದಾರೆ. ಇದೊಂದು ಅಂದಿನ ಕಾಲದ ಸಂದರ್ಭಕ್ಕೆ ಆಶಾದಾಯಕವಾದ ಬೆಳವಣಿಗೆಯಾಗಿದೆ.


ಕೊಡಗಿನ ಗೌರಮ್ಮನವರು ನವೋದಯ ಕಾಲದ ಸಂದರ್ಭದಲ್ಲಿ ಕಥೆಗಳನ್ನು ರಚಿಸಿದರೂ ಕೂಡ ಇವರ ಕೆಲವು ಕಥೆಗಳು ಪ್ರಗತಿಶೀಲ ಸಾಹಿತ್ಯದ ಮನೋಧರ್ಮವನ್ನು ಪ್ರತಿಬಿಂಬಿಸುತ್ತವೆ. ಕೆಲವೊಂದು ಕತೆಗಳಲ್ಲಿ ಸ್ತ್ರೀ ಕೇಂದ್ರಿತ ಪಾತ್ರಗಳನ್ನು ವೈಚಾರಿಕ ನೆಲೆಯಲ್ಲಿ ಚಿತ್ರಿಸಿದ್ದಾರೆ. ಸ್ತ್ರೀ ಸಮಸ್ಯೆಗಳನ್ನು ಮಾನವೀಯ ನೆಲೆಯಲ್ಲಿ ಚರ್ಚಿಸಿದ್ದಾರೆ. ಇವರು ಪುರುಷ ಪ್ರಧಾನ ವ್ಯವಸ್ಥೆಯ ರೀತಿ-ನೀತಿಗಳನ್ನು ಸೈದ್ದಾಂತಿಕವಾಗಿ ಆಲೋಚಿಸಿದ್ದಾರೆ. ಮಹಿಳಾ ಶೋಷಣೆಯ ಒಳನೋಟಗಳನ್ನು ತಮ್ಮ ಕೃತಿಗಳಲ್ಲಿ ಸ್ಪಷ್ಟವಾಗಿ ಬಿಚ್ಚಿಟ್ಟಿದ್ದಾರೆ. ಇವರ ಸಾಹಿತ್ಯದಲ್ಲಿ ಸ್ತ್ರೀ ಸ್ವತಂತ್ರತೆ, ಸಮಾನತೆ, ಸಾಂಪ್ರದಾಯಿಕ ಮೌಲ್ಯಗಳ ಸ್ವೀಕರಣೆಯ ಆಶಯಗಳು ಹಾಗೂ ಸಾಮಾಜಿಕ ಕಾಳಜಿಯನ್ನು ಕಾಣುತ್ತೇವೆ. ಬದುಕಿನ ಸಾಮರಸ್ಯದ ಹಂಬಲ, ಜೀವನಪ್ರೀತಿ, ಮಾನವೀಯತೆ ಇವರ ಕೃತಿಗಳ ಆಶಯವಾಗಿದೆ. ಹಾಗೆಯೇ ದೇಶೀ ನೆಲೆಯ ಪ್ರೇರಣೆ ಮತ್ತು ಪಾಶ್ಚಾತ್ಯ ಸಾಹಿತ್ಯದ ಪ್ರಭಾವಗಳನ್ನು ಒಳಗೊಂಡಂತೆ ಬದಲಾಗುವ ಕಥನ ವಿನ್ಯಾಸಗಳನ್ನು ಗಮನಿಸಲಾಗುವುದು.


ಗಾಂಧಿಯುಗದ ಸ್ವಾತಂತ್ರ‍್ಯ ಚಳುವಳಿ, ದೇಶಪ್ರೇಮ, ನಾಡು ನುಡಿಯ ಅಭಿಮಾನ, ಸಾಮಾಜಿಕ ಚಿಂತನೆ, ಆತೋದ್ಧಾರ, ಪ್ರಕೃತಿ ವರ್ಣನೆ, ಆಧ್ಯಾತ್ಮನೀತಿ, ಪ್ರೀತಿ-ಪ್ರೇಮ ಇವು ಸಹಜವಾಗಿಯೇ ನವೋದಯ ಕಥೆಗಳ ಮೂಲ ನೆಲೆಯಾಗಿರುವುದನ್ನು ನಾವು ಕಾಣಬಹುದು. ಆತ್ಮಗೌರವ, ಆಶಾವಾದ, ಆದರ್ಶವಾದ, ಜಾತ್ಯಾತೀತ ಮೌಲ್ಯಗಳು, ವಿಶ್ವಧರ್ಮ, ವಿಶ್ವ ಭ್ರಾತೃತ್ವ, ಆಧ್ಯಾತ್ಮ ಅನುಭಾವ ಇವುಗಳ ಸಮ್ಮಿಲನ ಮನೋಧರ್ಮ ನವೋದಯ ಕಥೆಗಳಲ್ಲಿ ಬಿಂಬಿತವಾಗಿದೆ. ನವೋದಯ ಕಾಲಘಟ್ಟದಲ್ಲಿ ನಮ್ಮ ಸಮಾಜ ಹಾಗೂ ಸಂಸ್ಕೃತಿಗಳು ಒಂದು ಸ್ಥಿತ್ಯಂತರದ ಅವಸ್ಥೆಯಲ್ಲಿದ್ದವು. ರಾಷ್ಟ್ರೀಯ ಚಳುವಳಿ ಕನ್ನಡ ನಾಡು-ನುಡಿಗಳ ಬಗೆಗಿನ ಎಚ್ಚರ, ಅಭಿಮಾನ, ಹಳೆಯ ಕಂದಾಚಾರಗಳ ಬಗ್ಗೆ ತೋರಿದ ಪುನರಾಲೋಚನ ಈ ಮೊದಲಾದ ಸಂಗತಿಗಳು ಗೌರಮ್ಮನವರ ಕಥೆಗಳಲ್ಲಿ ಕಂಡುಬಂದವು.


ಗಂಡು-ಹೆಣ್ಣಿನ, ಪ್ರೀತಿ-ಪ್ರಣಯದ ಪ್ರಬಲ ಆಕರ್ಷಣೆಯನ್ನು ವಿಷಮ ದಾಂಪತ್ಯ, ವೈವಾಹಿಕ ಸಮಸ್ಯೆ, ಯುಗಯುಗಗಳಿಂದ ಹೆಣ್ಣಿನ ಬದುಕನ್ನು ವಿರೂಪಗೊಳಿಸುತ್ತ ಬಂದಿರುವ ಪುರುಷನಿಷ್ಠ ವ್ಯವಸ್ಥೆ ಗಂಡಿನ ಮೋಸ ಸ್ವಾರ್ಥಗಳನ್ನು ಚಿತ್ರಿಸುವ ಗೌರಮ್ಮನವರ ಕತೆಗಳಲಿ ಸ್ತ್ರೀ ಸಂವೇದನೆಯ ವಿಶಿಷ್ಟ ಚಹರೆಗಳಿವೆ. ಸ್ತ್ರೀಯರಿಗಾಗಿ ಧರ್ಮ-ಶಾಸ್ತ್ರಗಳು ನಿರ್ಮಿಸಿದ ಅಮಾನವೀಯ-ಪಕ್ಷಪಾತದ ನೀತಿ ನಿಯಮಗಳ ಪೊಳ್ಳುತನವನ್ನು ಸಮಾಜವು ಮರುಚಿಂತನೆಗೊಳಪಡಿಸಬೇಕು. ಅಜ್ಞಾನ ಸ್ವಾರ್ಥಪ್ರೇರಿತ ವ್ಯವಸ್ಥೆಯ ದುಃಖ ರೂಪದಿಂದ ಹೆಣ್ಣಿನ ಬದುಕು ಮುಕ್ತವಾಗಬೇಕು. ಹಾಗೆಯೇ ಸಹಜ ಬದುಕಿನ ಅವಕಾಶಗಳಿಂದ ಬದುಕು ಬಂಧುರಗೊಳ್ಳಬೇಕೆಂಬ ನಿರೀಕ್ಷೆ ಎದ್ದು ಕಾಣುತ್ತವೆ. ಅವರ ಕತೆಗಳಲ್ಲಿ ವಿವೇಚನಾರಹಿತ ಸ್ವಾರ್ಥಕೇಂದ್ರಿತ ನಿರ್ಣಯಗಳು, ಸ್ತ್ರೀ ವಿರೋಧಿ ಆಚಾರ-ವಿಚಾರಗಳು, ಸಮಾಜ ಮತ್ತು ಕುಟುಂಬದ ಸ್ವಾಸ್ಥ್ಯವನ್ನು ಹಾಳುಗೆಡವಬಾರದೆನ್ನುವ ನೈತಿಕ ಎಚ್ಚರ, ಸಾಮಾಜಿಕ ಕಾಳಜಿ ಇದೆ.


ಗೌರಮ್ಮನವರ ಕಥೆಗಳಲ್ಲಿ ಭ್ರಮೆ, ಕನಸು, ವಿಹಾರ, ಅಂತರಿಕ್ಷದಲ್ಲಿ ತೇಲುವ ಸುಖ ಮುಂತಾದ ಅವಾಸ್ತವತೆಗಳಿಲ್ಲ. ಹೆಚ್ಚಿನ ಕಥೆಗಳಲ್ಲಿ ಪ್ರೀತಿ-ಪ್ರೇಮ, ಗಂಡು-ಹೆಣ್ಣಿನ ಒಲವು ಇವು ಪ್ರಧಾನವಾಗಿವೆ. ಆದರೂ ವಾಸ್ತವತೆಯ ನೆಲೆಗಟ್ಟಿನ ಮೇಲೆ ರಚನೆಗೊಂಡ ಕೃತಿಗಳಾಗಿವೆ. ಎಲ್ಲಕ್ಕಿಂತ ಮೆಚ್ಚುಗೆಯಾಗುವ ಗುಣವೆಂದರೆ ನೀತಿ-ನ್ಯಾಯಗಳ ಪರವಾಗಿರುವ ಅವರ ಕಾಳಜಿಯಾಗಿದೆ. ಸಮಾಜದಲ್ಲಿ ಹೆಣ್ಣಿಗೊಂದು ನ್ಯಾಯ, ಗಂಡಿಗೊಂದು ನ್ಯಾಯ ಇರುವ ಬಗ್ಗೆ ಅವರು ಆ ಕಾಲದಲ್ಲಿ ಆಲೋಚಿಸಿದ್ದಾರೆ ಸ್ತ್ರೀ ಶಿಕ್ಷಣ, ಆರ್ಥಿಕ ಸ್ವಾವಲಂಬನೆ, ಮಾನವತೆ, ಸ್ತ್ರೀವಾದ, ಜಾತಿ-ಮತಗಳನ್ನೂ ಮೀರಿದ ಮಾನವನ ಅಗತ್ಯಗಳು, ಗಂಡು ಹೆಣ್ಣಿನ ನೈತಿಕ ಪ್ರೇಮ-ಇತ್ಯಾದಿಗೆ ಸಂಬಂಧಿಸಿದ ಅಂಶಗಳು ಅವರ ಕಥೆಗಳಲ್ಲಿವೆ ಹೀಗೆ ಕೊಡಗಿನ ಗೌರಮ್ಮನವರ ಕತೆಗಳಲ್ಲಿ ಕಟುತ್ವವಿದ್ದರೂ ರೊಚ್ಚಿಲ್ಲ. ಸೋದ್ದೇಶ ಲೇಖನದ ಸೂಚನೆಯಿದ್ದರೂ ಅವಾಸ್ತವ ಅರ್ಭಟೆಯಿಲ್ಲ: ಕಲೆಯ ನೈಜವನ್ನು ಮರೆಮಾಚಿಲ್ಲ. ಎಲ್ಲೆಲ್ಲಿಯೂ ಹೆಣ್ಣಿನ ಹೃದಯದ ಸಾಕ್ಷಿಯನ್ನು ಸಾರುವ ಈ ಕಥಾ ಗುಚ್ಛವು ಶ್ರೀನಿವಾಸ, ಆನಂದರ ಕತೆಗಳನ್ನು ಓದಿದ ವಾಚಕರಿಗೆ ಮನೋವಿಶ್ಲೇಷಣಾತ್ಮಕ ಕತೆಗಳ ಮಾದರಿಯಾಗಿ ಹೃದಯಂಗಮವಾಗುವುದೆಂದು ನಾನು ನಂಬಿದ್ದೇನೆ.’’ ಎಂದು 'ಕಂಬನಿ'ಗೆ ಬರೆದ ಮುನ್ನುಡಿಯಲ್ಲಿ ದ.ರಾ.ಬೇಂದ್ರೆಯವರು ತಿಳಿಸಿರುವ ಅಭಿಪ್ರಾಯವು ಸರ್ವಸಮ್ಮತವಾಗುವಂಥದ್ದಾಗಿದೆ.


ಪರಾಮರ್ಶನ ಗ್ರಂಥ

೧. ಅಕ್ಕಮಹಾದೇವಿ (ಡಾ) ಮಹಿಳಾ ಸಾಹಿತ್ಯ-ಚೇತನ್ ಬುಕ್ ಹೌಸ್-೨೦೧೧

೨. ಕರೀಗೌಡ ಬೀಚನಹಳ್ಳಿ-ಶತಮಾನದ ಸಣ್ಣಕಥೆಗಳ ಸಮೀಕ್ಷೆ-ಕರ್ನಾಟಕ ಸಾಹಿತ್ಯ ಅಕಾಡಮಿ, ಬೆಂಗಳೂರು-೨೦೦೩

೩. ಕೇಶವ ಶರ್ಮಾ ಕೆ(ಡಾ)-ಸ್ತ್ರೀವಾದಿ ಆಖ್ಯಾನ-ಸಾರಾ ಎಂಟರ್ ಪ್ರೈಸಸ್, ಮೈಸೂರು-೨೦೦೫

೪.ಕೀರ್ತಿನಾಥ ಕುರ್ತುಕೋಟಿ-ಯುಗಧರ್ಮ ಮತ್ತು ಸಾಹಿತ್ಯ ದರ್ಶನ-ಕುರ್ತುಕೋಟಿ ಮೆಮೋರಿಯಾ ಟ್ರಸ್ಟ್, ಧಾರವಾಡ-೨೦೦೯

೫. ಗೀತಾ ಪ್ರಸಾದ್ -ಆಧುನಿಕ ಮಹಿಳಾ ಅಭಿವ್ಯಕ್ತಿ ಧಾತ್ರಿ ಪುಸ್ತಕ ಪ್ರಕಾಶನ-೨೦೦೯

೬. ಧರಣೀದೇವಿ ಮಾಲಗತ್ತಿ-ಸ್ತ್ರೀವಾದ ಮತ್ತು ಭಾರತೀಯತೆ-ಚೇತನ್ ಬುಕ್ ಹೌಸ್, ಮೈಸೂರು-೧೯೯೯

೭. ನಾರಾಯಣಸ್ವಾಮಿ ಕೆ.ಎಸ್ -ಗಾಂಧಿ ಪ್ರಭಾವ ಸೌರಭ-ಕನ್ನಡ ಪುಸ್ತಕ ಪ್ರಾಧಿಕಾರ-೧೯೯೫

೮. ನಯನ ತಾರಾ ಪ್ರಕಾಶ್ಚಂದ್ರ ಶ.ಗ- ಕೊಡಗಿನ ಗೌರಮ್ಮನ ಕಥೆಗಳಲ್ಲಿ ಪರಿವರ್ತನೆಯ ಚಿಂತನೆಗಳು- ಕನ್ನಡ ಸಾಹಿತ್ಯ ಪರಿಷತ್-೨೦೧೪

೯. ಪ್ರಸಾದ ಸ್ವಾಮಿ ಎಸ್ (ಡಾ) ಸಣ್ಣಕಥೆ ಸ್ವರೂಪ, ವಿನ್ಯಾಸ-ಕಣ್ವ ಪಬ್ಲಿಕೇಶನ್ಸ್.

Comments


bottom of page