top of page

ಚಿತ್ರದುರ್ಗ ಜಿಲ್ಲೆಯ : ಕಾಡುಗೊಲ್ಲರ ಸಂಪ್ರದಾಯ ನಂಬಿಕೆಗಳು

ಉಮೇಶ ಟಿ.

ಸಂಶೋಧನಾರ್ಥಿ, ಕನ್ನಡ ಭಾರತಿ

ಕುವೆಂಪು ವಿಶ್ವವಿದ್ಯಾಲಯ

ಜ್ಞಾನ ಸಹ್ಯಾದ್ರಿ, ಶಂಕರಘಟ್ಟ

7353229811


ಕಾಡುಗೊಲ್ಲರು ಕರ್ನಾಟಕದಾದ್ಯಂತ ಚೆದುರಿದಂತೆ ನೆಲಸಿದ್ದರೂ ಮಧ್ಯ ಕರ್ನಾಟಕದ ಬಯಲುಸೀಮೆಗಳಲ್ಲಿ, ಆಂಧ್ರಪ್ರದೇಶದ ಗಡಿಯುದ್ದಕ್ಕೂ ಹರಡಿರುವ ಚಿತ್ರದುರ್ಗ-ತುಮಕೂರು ಜಿಲ್ಲೆಗಳ ಮೊಳಕಾಲ್ಮೂರು, ಚಳ್ಳಕೆರೆ, ಹಿರಿಯೂರು, ಶಿರಾ ತಾಲ್ಲೂಕುಗಳಲ್ಲಿ ಅತಿದಟ್ಟವಾಗಿ ನೆಲೆಸಿದ್ದಾರೆ. ಕಾಡುಗೊಲ್ಲರು ಬದುಕುವ ಈ ನೆಲೆಗಳ ಉದ್ದಕ್ಕೂ ಆಂಧ್ರ ಮೂಲದ 'ಮ್ಯಾಸ ಬೇಡ' ಎಂಬ ಮತ್ತೊಂದು ಬುಡಕಟ್ಟಿನ ಜನರೂ ಬದುಕುತ್ತಿದ್ದಾರೆ. ಈ ಬುಡಕಟ್ಟುಗಳ ಜೊತೆಜೊತೆಗೇ ಹಾಸುಹೊಕ್ಕಾಗಿ ನೆಲಸಿರುವ ಕುಂಚಿಟಿಗ ಒಕ್ಕಲಿಗರೂ ಒಂದು ಕಾಲಕ್ಕೆ ಈ ಬುಡಕಟ್ಟು ಮೂಲಕ್ಕೆ ಸೇರಿದವರಾಗಿದ್ದು, ಇಂದು ಜಾತಿಯಾಗಿ ಪರಿವರ್ತನೆಗೊಂಡಿರುವುದು ಗಮನಾರ್ಹ. ಇವರೆಲ್ಲ ದ್ರಾವಿಡ ಮೂಲಕ್ಕೆ ಸೇರಿದವರು; ಪ್ರಧಾನವಾಗಿ ಶಿವಾರಾಧಕರು. ಆದರೆ ಇವರು ವಿಷ್ಣು ಆರಾಧನೆಯನ್ನೂ ಮಾಡುವುದರಿಂದ ಇವರಲ್ಲಿ ಶೈವ-ವೈಷ್ಣವಗಳ ದಿವ್ಯ ಸಂಗಮವನ್ನು ಕಾಣಬಹುದು. ಕಾಡುಗೊಲ್ಲರ ಪ್ರಮುಖ ಸಾಂಸ್ಕೃತಿಕ ನೆಲೆಗಳೆಲ್ಲ ಬಹುಪಾಲು ಚಿತ್ರದುರ್ಗ ಜಿಲ್ಲೆಯಲ್ಲೇ ಇರುವುದರಿಂದ, ಈ ಜಿಲ್ಲೆಗೆ ಎಲ್ಲಿಲ್ಲದ ಸಾಂಸ್ಕೃತಿಕ ಮಹತ್ವ ಪ್ರಾಪ್ತವಾಗಿದೆ. ಕಾಡುಗೊಲ್ಲರ ಪಂಚಲಿAಗಗಳಾದ ಚಿತ್ರಲಿಂಗ- ಚಿತ್ರಳ್ಳಿಯಲ್ಲಿ, ಕಾಟಂಲಿಂಗ-ಇಕ್ಕನೂರಿನಲ್ಲಿ, ಪಾತೇಲಿಂಗ-ಕೂಡ್ಲಳ್ಳಿಯಲ್ಲಿ, ಕ್ಯಾತೇಲಿಂಗ-ಚೆನ್ನಮ್ಮ ನಾಗತಿಹಳ್ಳಿಗಳಲ್ಲಿ ನೆಲಸಿವೆ. ರಾಮಲಿಂಗ ಮಾತ್ರ ರಾಮನಹಳ್ಳಿ, ಬೇಚರಕ್ ಆದ ನಂತರ ನೆಲೆಯಿಲ್ಲ ದಂತಾಗಿದೆ. ಮೂಲ ಕಟ್ಟೆಮನೆಗಳಾದ ಕರಿಯೋಬೇನಹಳ್ಳಿ-ತಾಳವಟ್ಟಿ, ರಾಮನಹಳ್ಳಿ(ಬೇಚರಕ್)ಗಳೂ ಇದೇ ಜಿಲ್ಲೆಯಲ್ಲಿವೆ.


ಬುಡಕಟ್ಟುಗಳು ಸಾಮಾನ್ಯವಾಗಿ ಅಲ್ಪಸಂಖ್ಯಾತವಾಗಿದ್ದು, ತಮ್ಮದೇ ಆದ ಬೇರೊಂದು ಭಾಷೆಯನ್ನು ಹೊಂದಿರುತ್ತವೆ. ಆದರೆ ಅಪವಾದವೆಂಬಂತೆ ಕಾಡುಗೊಲ್ಲರು ಲಕ್ಷಾಂತರ ಸಂಖ್ಯೆಯಲ್ಲಿದ್ದು, ದ್ರಾವಿಡ ಪ್ರಧಾನವಾದ ಕನ್ನಡ ಭಾಷೆಯನ್ನೇ ಮಾತನಾಡುತ್ತಾರೆ. ಸರ್ಕಾರಿ ಸವಲತ್ತಿನ ದೃಷ್ಟಿಯಿಂದ ಕಾಡುಗೊಲ್ಲರನ್ನು 'ಹಿಂದುಳಿದ ಬುಡಕಟ್ಟಿ'ಗೆ (ಬಿ. ಟಿ) ಸೇರಿಸಿದ್ದಾರೆ. ಆದರೆ ಈ ಹಿಂದೆ ಇವರನ್ನು 'ಅರೆ ಅಲೆಮಾರಿ ಬುಡಕಟ್ಟಿ'ಗೆ (ಎಸ್.ಎನ್.ಟಿ) ಸೇರಿಸಲಾಗಿತ್ತು. ಕೊಕ್ಕರೆಗೆ ಒಂದು ಕೆರೆಯಲ್ಲ ಗೊಲ್ಲರಿಗೆ ಒಂದು ಊರಲ್ಲ' ಎಂಬಂತೆ ಈ ಹಿಂದೆ ಅವರು ತಮ್ಮ ಗೋಸಂಪತ್ತಿನೊಂದಿಗೆ ಅರೆ ಅಲೆಮಾರಿಗಳಾಗಿ ತಿರುಗಾಡುತ್ತಿದ್ದರು. ಈಗಲೂ ಇವರಲ್ಲಿ ಹುಲ್ಲು-ನೀರಿಗಾಗಿ, ತಮ್ಮ 'ಜೀವಧನ'ದೊಂದಿಗೆ (ಕುರಿ ಮುಂತಾದ ಸಾಕುಪ್ರಾಣಿಗಳೊಂದಿಗೆ) ಮಲೆನಾಡಿನತ್ತ 'ಪಡುವ' (ಪಶ್ಚಿಮದತ್ತ) ವಲಸೆ ಹೋಗುವ ಸಂಪ್ರದಾಯವಿದ್ದರೂ ಮತ್ತೆ ಹಿಂತಿರುಗಿ ತಮ್ಮ 'ತಳಮನೆ'ಗೇ ಬರುತ್ತಾರೆ. ಈಗೀಗ ಕೃಷಿಗೇ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿರುವುದರಿಂದ ಅರೆ ಅಲೆಮಾರಿ ಬದುಕಿಗೆ ವಿದಾಯ ಹೇಳಿ ಅಲ್ಲಲ್ಲಿ ನೆಲೆ ನಿಂತಿದ್ದಾರೆ.

ಕಾಡುಗೊಲ್ಲರು ನಾಗರಿಕ ಜನವಸತಿಯೊಂದಿಗೆ ಬೆರೆತು ಬಾಳುವವರಲ್ಲ. ಗ್ರಾಮದಿಂದ ದೂರದಲ್ಲಿ ಪ್ರತ್ಯೇಕವಾಗಿ ತಮ್ಮದೇ ಜನಗಳ ಗುಂಪಿನಲ್ಲಿ ಹಟ್ಟಿಗಳನ್ನು ಹಾಕಿಕೊಂಡು ಜೀವಿಸುವುದು ಇವರ ವಿಧಾನ. ಹಟ್ಟಿಯ ಸುತ್ತ ಬಲವಾದ ಕಳ್ಳಿ ಮತ್ತು ಕಳ್ಳೆ ಬೇಲಿಯನ್ನು ನಿರ್ಮಿಸಿಕೊಳ್ಳುವುದು ಇವರ ವೈಶಿಷ್ಟö್ಯ ಪರಮ ಪವಿತ್ರವಾದ ಗೋವಿನ ಕಾಯಕ ಮಾಡುತ್ತಿದ್ದುದರಿಂದ ಬೇರೆಯವರೊಂದಿಗೆ ಬೆರೆತರೆ ಎಲ್ಲಿ ತಮ್ಮ ಪಾವಿತ್ರ‍್ಯ ಹಾಳಾಗಿಬಿಡುತ್ತದೋ, ಎಲ್ಲಿ ತಮಗೆ ಸೂತಕ ಸುತ್ತಿಕೊಂಡುಬಿಡುತ್ತದೋ ಎಂದು ಹೆದರಿ, ತಮ್ಮ ಸತ್ಯಶುದ್ಧಿಯನ್ನು ಕಾಪಾಡಿಕೊಳ್ಳಲು ಊರು ಬಿಟ್ಟು ದೂರ ಬಂದವರು-ಇಂದಿಗೂ ಊರಿಗೆ ದೂರವಾಗೇ ಬದುಕುತ್ತಿದ್ದಾರೆ. ಇವರು ದೂರದ ದೆಹಲಿಯಿಂದ ವಲಸೆ ಬಂದುದೂ ತಮ್ಮ ಬುಡಕಟ್ಟು ಪಾವಿತ್ರ‍್ಯವನ್ನು ರಕ್ಷಿಸಿಕೊಳ್ಳುವ ಕಾರಣದಿಂದಲೇ ಎಂದು ಹೇಳುತ್ತಾರೆ. ಎಲ್ಲಿ ತಮ್ಮ ‘ಹಾಲಿನಂತಹ ಕುಲ ಮುಸಲ್ಮಾನರಿಂದ ನೀರಾಗಿ ಬಿಡುತ್ತದೋ' ಎಂದು ಹೆದರಿ ದೇಶಾಂತರ ಬಂದ ಐತಿಹ್ಯದ ಹಿಂದೆ ತಮ್ಮ ಕುಲದ ಶೌಚದ ಕತೆಯೇ ಅಡಗಿದೆ ಎಂದು ಭಾವಿಸುತ್ತಾರೆ. ಹೀಗಾಗಿ ಎತ್ತಪ್ಪ-ಜುಂಜಪ್ಪನಂಥವರೂ ಕೂಡ ಎಂದೂ ಊರು ಹೊಕ್ಕವರಲ್ಲ! ಊರು ಹೊಕ್ಕರೆ ತಮ್ಮ 'ಸತೈವು' ಕೆಡುತ್ತದೆ ಎಂದು ಭಾವಿಸಿದ್ದರು.


ಕಾಲ ಆಧುನಿಕಗೊಂಡಂತೆ ಕೆಲವು ದೇವರುಗಳು ಕಳೆಗುಡಿಯನ್ನು ಬಿಟ್ಟು ಅತ್ಯಾಧುನಿಕವಾದ ಕಲ್ಲಿನ ಗುಡಿಗಳಿಗೆ ಸ್ಥಳಂತರಗೊಂಡಿದ್ದರೆ, ‘ಕಳ್ಳೆಪ್ರಿಯ' ಕೆಲವು ದೇವರುಗಳು ಇನ್ನೂ ಗುಡಿಸಲುಗಳಲ್ಲೇ, ಗುಬ್ಬಗಳಲ್ಲೇ ಇವೆ. ಅತ್ಯಾಧುನಿಕವಾದ ಕಟ್ಟಡಗಳಿಗಿಂತ ಹುಲ್ಲಿನ ಗುಡಿ, ಗುಬ್ಬಗಳೇ ಅತ್ಯಂತ ಕಲಾತ್ಮಕವಾಗಿ ಕಾಣುತ್ತವೆ. ವೃತ್ತಾಕಾರದ ನೆಲಗುಡಿಗಳಿಂದ ಹಿಡಿದು, ಸ್ಟೆಪ್ ಕಟ್ ಮಾಡಿದ ರೀತಿಯ ಹುಲ್ಲುಗುಡಿಗಳವರೆಗೂ ಅವುಗಳು ವೈವಿಧ್ಯಮಯವಾಗಿ ಇರುವುದನ್ನು ಗಮನಿಸಬಹುದು. ಕೆಲವು ಗೊಲ್ಲ ದೇವರುಗಳಿಗೆ ಕಳ್ಳೆ ಅದೆಷ್ಟು ಪ್ರಿಯವೆಂಬುದನ್ನು ನೋಡಬೇಕೆಂದರೆ ಕ್ಯಾತೇಲಿಂಗನ ಜಾತ್ರೆಗೆ ಹೋಗಬೇಕು. ಇದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಸಮೀಪದ ಚನ್ನಮ್ಮನಾಗತಿಹಳ್ಳಿ ಬಳಿಯ ಪರ‍್ಲಳ್ಳಿ ವಸತಿ ದಿಬ್ಬದ ಬಳಿ ನಡೆಯುತ್ತದೆ. ದೇವರು ಚನ್ನಮ್ಮನಾಗತಿಹಳ್ಳಿಯ ಮೂಲ ನೆಲೆಯಿಂದ ಬಂದು ಇಲ್ಲಿ ವಸತಿ ಮಾಡಿರುತ್ತದೆ. ದೇವರ ಸುತ್ತ 'ಬೆರಗು' (ಹಸಿರು ಗುಡಿಸಲು) ಹಾಕಿರುತ್ತಾರೆ. ಈ ಹಸಿರು ಬೆರಗನ್ನು ಕಾರೆಕಳ್ಳಿ, ಬಾರೆಕಳ್ಳಿ, ಜಾಲಿಕಳ್ಳಿಯಿಂದ ಮುಚ್ಚಿ ತುದಿಯಲ್ಲಿ ಒಂದು ಕಂಚಿನ ಕಳಶ ಸಿಕ್ಕಿಸಿರುತ್ತಾರೆ. ದೇವರು ಬೆರಗು ಕಳ್ಳೆಯ ಅಡಿಯಲ್ಲೇ ಇರುತ್ತದೆ! ಜನ ಬರಿ ಕಾಲಲ್ಲಿ ಈ ಕಳ್ಳೆ-ಮುಳ್ಳಿನ ರಾಶಿ ತುಳಿದುಕೊಂಡು ಹತ್ತಿ ಕಳಶ ಕಿತ್ತು ತರುವ ಕ್ರಿಯೆ ರೋಮಾಂಚಕಾರಿಯಾದುದು!


ಕಾಡುಗೊಲ್ಲ ಹೆಂಗಸರಲ್ಲಿ ಗಂಡ ಸತ್ತರೆ ಅವರಿಗೆ ವೈಧವ್ಯದ ಚಿಂತೆ ಕಾಡುವುದೇ ಇಲ್ಲ! ಅವರು ಹೂವು, ಬಳೆ, ಕುಂಕುಮ ಎಲ್ಲವನ್ನೂ ಬಳಸುತ್ತಾರೆ! ಕಾಡುಗೊಲ್ಲ ಸ್ತ್ರೀಯರು ತಮ್ಮನ್ನು ಗೋಪಿಕೆಯರೆಂದೂ, ಕೃಷ್ಣನೇ ತಮ್ಮ ಗಂಡನೆಂದು ಭಾವಿಸುವುದರಿಂದ ಈ ಲೋಕದ ಗಂಡರ ಚಿಂತೆ ಅವರಿಗಿಲ್ಲ. ಕೈಯಲ್ಲಿ ಕೃಷ್ಣನ ಕಡಗ ಇರುವವರೆಗೂ ತಮ್ಮನ್ನು ಮುತ್ತ್ಐದೆಯರೆಂದೇ ಅವರು ತಿಳಿಯುತ್ತಾರೆ. ಹೀಗೆ ಅವರ ನಂಬಿಕೆ- ಅದೇನೇ ಇರಲಿ, ಅವರ ಚಿಂತನೆ ಮಾತ್ರ ಅದ್ಭುತವಾದದ್ದು, ಪ್ರಗತಿಪರವಾದದ್ದು, ಅತ್ಯಂತ ಸಂಪ್ರದಾಯಸ್ಥರಾದ ಇವರ ನಡವಳಿಕೆಗಳು ಅತ್ಯಂತ ಅಸಂಪ್ರದಾಯಕವಾಗಿರುವುದೊಂದು ಆಶ್ಚರ್ಯವೇ ಸರಿ. ಇವರು ಬ್ರಾಹ್ಮಣರನ್ನು ತಮ್ಮ ಮದುವೆಗಳಿಗೆ ಕರೆಯುವುದಿಲ್ಲ! ತಮ್ಮ ಜನಾಂಗದ ಪೂಜಾರಿಗಳೇ ಈ ಕೆಲಸ ಮಾಡಿಬಿಡುತ್ತಾರೆ. ಯಾವ ತಿಥಿ-ನಕ್ಷತ್ರ-ಪಂಚಾಂಗಗಳನ್ನೂ ನೋಡುವುದಿಲ್ಲ! ಆಷಾಢ ಮಾಸದಲ್ಲಿ 'ಜಾತಿ'ಯ ಜನಗಳು ಮದುವೆಯನ್ನು ಮಾಡುವುದಿಲ್ಲ. ಆದರೆ ಕಾಡುಗೊಲ್ಲರಿಗೆ ಇದಾವುದೂ ಬಾಧಿಸುವುದೇ ಇಲ್ಲ. ಅವರಿಗೆ ಆಷಾಢ ಮಾಸವೇ ಒಳ್ಳೆಯ ಕಾಲ. ಬೇರೆ ಜಾತಿಗಳಲ್ಲೆಲ್ಲಾ 'ಬಸವಿ' ಬಿಡುವ ಅನಿಷ್ಟ ಸಂಪ್ರದಾಯವಿದ್ದರೆ ಇವರಲ್ಲಿ ಅದು ಇಲ್ಲವೇ ಇಲ್ಲ. ಕಾಡುಗೊಲ್ಲರು ಕೆಲವು ನಡವಳಿಕೆಗಳಲ್ಲಿ ಅತ್ಯಾಧುನಿಕ ಚಿಂತನೆಯನ್ನು ತೋರುವಂತೆ ಕಾಣುತ್ತಾರೆ, ಆದರೆ ಹಟ್ಟಿ ಪ್ರವೇಶದಂತಹ ಕೆಲವು ವಿಷಯಗಳಲ್ಲಿ ಕರ್ಮಠರಂತೆ ವರ್ತಿಸುತ್ತಾರೆ. ‘ಸೂತಕ'ದ ವಿಚಾರದಲ್ಲಿ ಕಾಡುಗೊಲ್ಲರು ಹೆಚ್ಚುಕಡಿಮೆ ಬ್ರಾಹ್ಮಣರನ್ನೇ ಹೋಲುತ್ತಾರೆ.


ಕಾಡುಗೊಲ್ಲರ ಕೆಲವು ಸಂಪ್ರದಾಯಗಳಲ್ಲಿ ಮಾಸಿಕ ಸೂತಕ ('ಮುಟ್ಟು', ರಜೋಚಕ್ರ) ಕುರಿತು ಕಾಡುಗೊಲ್ಲ ಬುಡಕಟ್ಟಿನಲ್ಲಿರುವ ಒಂದು ವಿಶಿಷ್ಟ ಸಂಪ್ರದಾಯ. ಕಳ್ಳೆಬೇಲಿಯ ಹಟ್ಟಿಯೊಳಗಿರುವ ಕಾಡುಗೊಲ್ಲ ಹೆಂಗಸರು, ಮಾಸಿಕ 'ಮುಟ್ಟು' (ಸೂತಕ) ಆಗುತ್ತಲೇ ಹಟ್ಟಿಯಿಂದ ಹೊರಗಡೆ ಬಂದು ಬಿಡುತ್ತಾರೆ. ಹಟ್ಟಿಯ ಹೊರಗಡೆ ಇಂತಹ ಉದ್ದೇಶಕ್ಕಾಗಿಯೇ ನಿರ್ಮಿಸಿರುವ ನೆಲಗುಡಿಸಿಲುಗಳಲ್ಲಿ ಕಾಲ ಕಳೆಯುತ್ತಾರೆ. ಹೀಗೆ ಮುಟ್ಟಾದ ಅನೇಕ ಹೆಂಗಸರ ‘ಮಂದೆ' (ಗುಂಪು) ಇಲ್ಲಿ ಇರುತ್ತದೆ. ಇವರೊಂದಿಗೆ ಹೆರಿಗೆಗಾಗಿ ಹಟ್ಟಿಯಿಂದ ಹೊರಗಡೆ ಬಂದವರೂ ಇರುತ್ತಾರೆ. (ಮಾಸಿಕ ಮುಟ್ಟಿನ ಜನ ಸಾಮಾನ್ಯವಾಗಿ ಒಂದು ವಾರದ ತನಕ ಹಟ್ಟಿಯಿಂದ ಹೊರಗೆ ಇರಬೇಕಾಗುತ್ತದೆ. ಆದರೆ ೭ ದಿನ ಹಟ್ಟಿಯಿಂದ ಹೊರಗೆ ಇರಲು ಸಾಧ್ಯವಾಗದಂತವರು ಮೂರು ದಿನ ಕಳೆದ ನಂತರ ಹಟ್ಟಿಯೊಳಕ್ಕೆ ಬರಬಹುದು. ಇಂಥವರು ಹಟ್ಟಿಯಿಂದ ಹೊರಗೆ ಹೋಗುವಾಗ ಒಂದು ಸ್ನಾನ ಮಾಡಿದ್ದರೆ, ಹಟ್ಟಿಯೊಳಕ್ಕೆ ಪ್ರವೇಶಿಸುವಾಗ ಎರಡನೆ ಸ್ನಾನವನ್ನು ಹಟ್ಟಿಯ ಉದಿಯಲ್ಲೇ ಮಾಡುತ್ತಾರೆ. ಆದರೆ ಹಟ್ಟಿಯೊಳಕ್ಕೂ ಬಂದ ಮೇಲೆ ರಕ್ತಸ್ರಾವ ನಿಂತಿಲ್ಲದಿದ್ದರೆ ಅವರ ಮನೆಯೊಳಗಡೆಗೆ ಹೋಗುವಂತಿಲ್ಲ, ಆದರೆ ಹಟ್ಟಿಯೊಳಗೆ (ಗುಡಿಸಿಲುಗಳ ಸಮೂಹ) ಇರಬಹುದು. ರಕ್ತಸ್ರಾವ ನಿಲ್ಲುವವರೆಗಿನ ಈ ಸ್ಥಿತಿಯನ್ನು 'ಎಳನೀರಿನಲ್ಲಿದಾರೆ' ಎಂದು ಕಾಡುಗೊಲ್ಲರು ಹೇಳುತ್ತಾರೆ. ‘ಎಳೆನೀರು' ಎಂಬ ಹೆಸರೇ ಆ ಸ್ಥಿತಿಯ ಎಳಸುತನವನ್ನು ಸೂಚಿಸುತ್ತದೆ. ಹಟ್ಟಿಯೊಳಗಿನ ದೇವರ ಪಾವಿತ್ರ‍್ಯ, ಶುಚಿತ್ವಕ್ಕೆ ಹೆಚ್ಚಿನ ಗೆಮನಕೊಟ್ಟು ಹಟ್ಟಿಯಿಂದ ಹೊರಗೆ ಬರುವ ಇವರು ತಮ್ಮ ಶುಚಿತ್ವದ ವಿಷಯದಲ್ಲಿ ಅತ್ಯಂತ ನಿರ್ಲಕ್ಷ್ಯದಿಂದ ಇರುವ ಪ್ರವೃತ್ತಿಯೇ ಇದೊಂದು ಅರ್ಥಹೀನ ಸಂಪ್ರದಾಯವೆಂದು ಹೇಳುತ್ತದೆ. ಬ್ರಾಹ್ಮಣರ ರೀತಿಯಲ್ಲಿ ‘ಅಂಟು-ಮುಂಟಿ'ನ ಬಗ್ಗೆ ಸಮಾನ ಸಂಪ್ರದಾಯ ಹೊಂದಿರುವ ಈ ಕಾಡುಗೊಲ್ಲ ಬುಡಕಟ್ಟು 'ವಿಧವಾ ಸಂಪ್ರದಾಯ' ಅನುಸರಿಸದೆ ತಮ್ಮನ್ನ 'ನಿತ್ಯ ಮುತ್ತ್ಐದೆಯರೆಂದೇ, ಕೃಷ್ಣನ ಗೋಪಿಕಾ ಸ್ತ್ರೀಯರೆಂದು ಭಾವಿಸುವ ಪ್ರಗತಿಪರ ನಿಲುವನ್ನು ಹೊಂದಿರುವ ಇವರು ಮುಟ್ಟಿನ ವಿಚಾರದಲ್ಲಿ ಸಂಪ್ರದಾಯವಾದಿಗಳಾಗಿರುವುದು ಆಶ್ಚರ್ಯ.


ಪರಾಮರ್ಶನ ಗ್ರಂಥ

ಡಾ. ಮೀರಾಸಾಬಿಹಳ್ಳಿ ಶಿವಣ್ಣ-ದುರುಗ ಸೀಮೆ ಜಾನಪದ-೨೦೧೧

ಡಾ. ಮೀರಾಸಾಬಿಹಳ್ಳಿ ಶಿವಣ್ಣ -ಮ್ಯಾಸ ಮಂಡಲ-೨೦೦೩

ಕೇಶವ ಶರ್ಮಾ ಕೆ(ಡಾ)-ಸ್ತ್ರೀವಾದಿ ಆಖ್ಯಾನ-ಸಾರಾ ಎಂಟರ್ ಪ್ರೈಸಸ್, ಮೈಸೂರು-೨೦೦೫

ಡಾ. ಮೀರಾಸಾಬಿಹಳ್ಳಿ ಶಿವಣ್ಣ-ಕಾಡುಗೊಲ್ಲ ಬುಡಕಟ್ಟು ವೀರರು -೨೦೦೫

ಗೀತಾ ಪ್ರಸಾದ್ -ಆಧುನಿಕ ಮಹಿಳಾ ಅಭಿವ್ಯಕ್ತಿ ಧಾತ್ರಿ ಪುಸ್ತಕ ಪ್ರಕಾಶನ-೨೦೦೯

Comments


bottom of page