top of page

ಚಾರ್ವಾಕ ದರ್ಶನ

ಗಗನ . ಜೆ

ಕನ್ನಡ ಎಂ. ಎ

ಕನ್ನಡ ಭಾರತಿ

ಕುವೆಂಪು ವಿಶ್ವವಿದ್ಯಾಲಯ


ನಮ್ಮ ದಾರ್ಶನಿಕರು ನಾಸ್ತಿಕ ದರ್ಶನಗಳಲ್ಲಿ ಚಾರ್ವಾಕ, ಬೌದ್ಧ ಮತ್ತು ಜೈನ ದರ್ಶನಗಳನ್ನು ಸೇರಿಸಿದ್ದಾರೆ. ಸಾಂಖ್ಯವೂ ಸರ್ವೆಶ್ವರನ ಅಸ್ತಿತ್ವವನ್ನು ಒಪ್ಪಿ ಕೊಳ್ಳುವುದಿಲ್ಲ. ಆದರೆ ಅದನ್ನು ನಾಸ್ತಿಕ ದರ್ಶನಗಳಲ್ಲಿ ಸೇರಿಸಿಲ್ಲ, ಏಕೆಂದರೆ ಸಾಂಖ್ಯರು ವೇದಪ್ರಾಮಾಣ್ಯವನ್ನು ನಿರಾಕರಿಸಿಲ್ಲ. ಆದುದರಿಂದ ವೇದಪ್ರಮಾಣವೇ ಆಸ್ತಿಕ-ನಾಸ್ತಿಕ ಭೇದವನ್ನು ಗುರುತಿಸಲು ಪ್ರಧಾನವಾದ ಅಳತೆಗೋಲಾಗಿದೆ ಎನ್ನ ಬಹುದು. ನಾಸ್ತಿಕದರ್ಶನಗಳಲ್ಲಿ ಚಾರ್ವಾಕದರ್ಶನ ಅತ್ಯಂತ ಪ್ರಾಚೀನವೂ ಪ್ರಧಾನವೂ ಆಗಿದೆ. ಇದನ್ನು ಅನೇಕರು ತಿರಸ್ಕರಿಸಿದರೂ, ಪೂರ್ವಪಕ್ಷ ಮಾಡುವ ಸಂದರ್ಭದಲ್ಲಾದರೂ ಹೆಸರಿಸಿರುವುದರಿಂದ ಈ ದರ್ಶನದ ಪ್ರಾಧಾನ್ಯ ತಿಳಿದು ಬರುತ್ತದೆ.


ಬೃಹಸ್ಪತಿ

ಬೃಹಸ್ಪತಿ ಚಾರ್ವಾಕಮತವನ್ನು ಸ್ಪಷ್ಟಪಡಿಸಿದವನೆಂದು ಹೇಳಲಾಗಿದೆ. ಬಾರ್ಹಸ್ಪತ್ಯ, ಲೋಕಾಯತ ಎಂಬ ಹೆಸರುಗಳು ಕೂಡ ಪ್ರಸಿದ್ಧವಾಗಿವೆ. ವೇದ ಮಂತ್ರಗಳಲ್ಲಿ ಬೃಹಸ್ಪತಿಗೆ ಅಂಗೀರಸ, ಲೌಕ್ಯಾ (ಲೋಕಾಯತನಾ) ಎಂಬ ಎರಡು ಹೆಸರುಗಳಿವೆ. ಇಂದ್ರನ ಸ್ನೇಹಿತನಾದ ಬೃಹಸ್ಪತಿ ನಾಸ್ತಿಕರಾದ ಕೆಲವರನ್ನು ಗೆಲ್ಲಲು ಸಹಾಯ ಮಾಡಿದನೆಂದು ಋಗ್ವದದಲ್ಲಿದೆ (೮-೯೬-೧೫). ರಾಕ್ಷಸರಿಗೆ ನಾಸ್ತಿಕ ವಿದ್ಯೆಯನ್ನು ಕಲಿಸುವ ಮೂಲಕ ಅವರನ್ನು ಬೃಹಸ್ಪತಿ ಕೆಡಿಸಿದನೆಂದು ಹೇಳಲಾಗಿದೆ.


ಚಾರ್ವಾಕ

ಚಾರ್ವಾಕನೆಂಬುದು ಒಬ್ಬ ರಾಕ್ಷಸನ ಹೆಸರೆಂದೂ, ಈತನಿಗೆ ಬೃಹಸ್ಪತಿ ತನ್ನ ಸಿದ್ಧಾಂತವನ್ನು ಕಲಿಸಿದನೆಂದೂ ಪ್ರಬೋಧಚಂದ್ರೋದಯ ನಾಟಕದಲ್ಲಿದೆ. ಮಹಾಭಾರತದ ಧರ್ಮರಾಜನ ಪಟ್ಟಾಭಿಷೇಕ ಸಂದರ್ಭದಲ್ಲಿ ಅವನನ್ನು ದೂಷಿಸಿ ಕೃಷ್ಣನಿಂದ ಅಸುನೀಗಿದ ಚಾರ್ವಾಕ ಪ್ರಸಿದ್ಧನಾಗಿದ್ದಾನೆ. ಚಾರ್ವಾಕ ಶಬ್ದಕ್ಕೆ 'ಚಾರುವಾಕ್’ ಎಂದು ಕೆಲವರು ಅರ್ಥ ಹೇಳಿದರೆ, 'ವಿನೋದಕರವಾದ ಪ್ರಸಂಗ' ಎಂಬ ಅರ್ಥವನ್ನು ಕೆಲವರು ಹೇಳುತ್ತಾರೆ, ಚಾರ್ವಾಕಮತ ಆ ಹೆಸರಿನ ವ್ಯಕ್ತಿಯ ಬೋಧೆಗಳ ಮೊತ್ತವೇ? ಅಥವಾ ಒಂದು ದರ್ಶನದ ಗುಣದಿಂದ ಬಂದ ಹೆಸರೇ ಎಂಬುದು ಸ್ಪಷ್ಟವಾಗಿಲ್ಲ.


ಪ್ರಾಚೀನತೆ

ಚಾರ್ವಾಕ ದರ್ಶನದ ಪ್ರಾಚೀನತೆಯನ್ನು ನಿರ್ಧರಿಸಲು ಸ್ಪಷ್ಟ ದಾಖಲೆಗಳಿಲ್ಲ.. ಬೃಹಸ್ಪತಿಯ ವಿಷಯ ಋಗ್ವೇದ ಕಾಲದಿಂದಲೂ ಉಲ್ಲೇಖಗೊಂಡಿರುವುದನ್ನು ಈಗಾಗಲೇ ಹೇಳಲಾಗಿದೆ. ಪಾಣಿನಿಯ ವ್ಯಾಕರಣದಲ್ಲಿ ಲೋಕಾಯತವೆಂಬು ಹೆಸರಿದೆ. ಚಾರ್ವಾಕನನ್ನು ಕುರಿತು ಮಹಾಭಾರತದಲ್ಲಿ ಉಲ್ಲೇಖವಿದೆ. ಮಾಧವಾಚಾರ್ಯರ ಸರ್ವದರ್ಶನಸಾರ ಸಂಗ್ರಹದಲ್ಲಿ ಪೂರ್ವಪಕ್ಷ ರೂಪವಾಗಿ ಕೆಲವು ಉದಾಹಹರಣೆಗಳು ಸಿಕ್ಕುತ್ತವಾದರೂ ಅವುಗಳ ಮೂಲ ತಿಳಿಯದು, ದರ್ಶನಗಳಲ್ಲಿ ಚಾರ್ವಾಕದರ್ಶನವೇ ಅತ್ಯಂತ ಪ್ರಾಚೀನವಾದುದೆಂದು ಕೆಲವರುವ ಹೇಳುತ್ತಾರೆ. ದರ್ಶನವೆಂಬ ಪದವನ್ನು ಹೆಚ್ಚಿಗೆ ಬಳಸಿದವರೆಂದರೆ ಚಾರ್ವಕರೇ ದರ್ಶನವೆಂದರೆ ಇವರ ಪ್ರಕಾರ ಪ್ರತ್ಯಕ್ಷವಾಗಿ ನೋಡುವುದೇ ಆಗಿದೆ. ಕ್ರಮವಾಗಿ ಈ ಪದ ಇಂದ್ರಿಯಗ್ರಾಹ್ಯವಾದ ಸಮಸ್ತ ವಸ್ತುಗಳನ್ನೂ ತಿಳಿಯುವುದೆಂಬ ಅರ್ಥವನ್ನು ಪಡೆಯಿತು. ಅನಂತರ ಕಾಲದಲ್ಲಿ ಇತರ ದಾರ್ಶನಿಕರು ಈ ಪದವನ್ನು ತತ್ತ್ವ ವಿಚಾರವೆಂಬ ವಿಪುಲವಾದ ಅರ್ಥದಲ್ಲಿ ಬಳಸಲು ಪ್ರಾರಂಭಿಸಿದರು.


ಎಲ್ಲ ದರ್ಶನಗಳಿಗೂ ಬೀಜಗಳು ವೇದಗಳಲ್ಲೇ ಕಾಣುವುದರಿಂದ ಚಾರ್ವಾಕ ದರ್ಶನ ಎಲ್ಲ ದರ್ಶನಗಳಿಗಿಂತ ಪ್ರಾಚೀನವಾದುದೆನ್ನುವ ಅಭಿಪ್ರಾಯವನ್ನು ಕೆಲವರದ ಒಪ್ಪುವುದಿಲ್ಲ. ದರ್ಶನಗಳಿಗೆ ಸಂಬAಧಿಸಿದ ಸೂತ್ರ.ಗ್ರಂಥಗಳು ಅನಂತರ ಕಾಲದಲ್ಲಿ ಬೆಳಕಿಗೆ ಬಂದರೂ, ಅವುಗಳಿಗೆ ಸಂಬAಧಿಸಿದ ಸಂಪ್ರದಾಯಗಳು ಮಾತ್ರ ಬಹಳಾ ಹಿಂದಿನಿAದಲೇ ಇದ್ದುವೆಂಬುದರಲ್ಲಿ ಸಂದೇಹವಿಲ್ಲ. ಇತರ ದಾರ್ಶನಿಕರೆಲ್ಲರೂ ಚಾರ್ವಾಕ ದರ್ಶನವನ್ನು ಉದಾಹರಿಸಿ ಖಂಡಿಸಿರುವುದರಿAದ ಅದು ಪ್ರಾಚೀನ ಮತವೆಂದು ಹೇಳಲು ಅಡ್ಡಿಯಿಲ್ಲ.


ಚಾರ್ವಾಕದರ್ಶನ ಪರಿಣಾಮ

ಚಾರ್ವಾಕದರ್ಶನ ನಾಲ್ಕು ಹಂತಗಳಲ್ಲಿ ಪರಿಣಾಮ ಹೊಂದಿತೆAದು ಹೇಳಬಹುದು.೧. ಬಾರ್ಹಸ್ಪತ್ಯದ ಹಂತ, ಬೃಹಸ್ಪತಿ ಇದರ ಪ್ರವರ್ತಕ. ೨.ಲೋಕಾಯತಹಂತ, ಅಜಿತ ಕೇಶಕಂಬಳೆ ಇದರ ಪ್ರವರ್ತಕ. ೩.ಚಾರ್ವಾಕದ ಹಂತ, ಚಾರ್ವಾಕ ಇದರ ಪ್ರವರ್ತಕ. ೪.ನಾಸ್ತಿಕದ ಹಂತ. ಪುರಂದರ ಇದರ ಪ್ರವರ್ತಕ. ಈ ನಾಲ್ಕು ಹಂತಗಳಲ್ಲಿ ನಡೆದು ಬಂದ ನಾಸ್ತಿಕ ದರ್ಶನವನ್ನು ಮೇಲಿನ ನಾಲ್ಕು ಹೆಸರುಗಳಿಂದಲೂ ಕರೆಯುವುದುಂಟು. ಆದರೆ ಕಾಲಾನುಕ್ರಮವಾಗಿ ನೋಡಿದಾಗ ಈ ನಾಲ್ಕರಲ್ಲಿ ವ್ಯತ್ಯಾಸ ಕಂಡುಬರುತ್ತದೆ.


ಚಾರ್ವಾಕ ಸಿದ್ಧಾಂತ

ಪೃಥ್ವಿ, ಅಪ್, ತೇಜಸ್ಸು, ವಾಯು ಎಂಬವುಗಳ ಪರಮಾಣುಗಳಿಂದ ಜಗತ್ತು ಹುಟ್ಟುತ್ತದೆ. ಇದಕ್ಕೆ ಸ್ವಭಾವ ನಿಮಿತ್ತ ಕಾರಣ, ಪೃಥಿವ್ಯಾದಿ ಚತುಷ್ಪಯದ ಅಣುಗಳ ಸಂಯೋಗದಿಂದಲೇ ಶರೀರ ಹುಟ್ಟುತ್ತದೆ. ಚೈತನ್ಯ ಹೇಗೆ ಜನಿಸುವುದೆಂಬ ಅನುಮಾನ ಬರಬಹುದು. ಅಡಿಕೆ, ಎಲೆ, ಸುಣ್ಣ ಸೇರಿ ಅವುಗಳಲ್ಲಿ ಅದುವರೆಗೂ ಇಲ್ಲದ ಕೆಂಪುಬಣ್ಣ ಬರುತ್ತದೆ. ಹೀಗೆ ಪೃಥಿವ್ಯಾದಿ ಜಡಪದಾರ್ಥಗಳಿಂದಲೇ ಚೈತನ್ಯ ಹುಟ್ಟುವುದು, ಇದು ಹೇಗೆ ಆಗುತ್ತದೆಂದರೆ ಆ ಪ್ರಕೃತಿ ಪದಾರ್ಥಗಳ ಸ್ವಭಾವವೇ ಕಾರಣ. ಚಾರ್ವಾಕ ಮತದವರಿಗೆ ಪ್ರತ್ಯಕ್ಷವೇ ಪ್ರಮಾಣ, ಚೈತನ್ಯದಿಂದ ಕೂಡಿದ ದೇಹವೆ ಆತ್ಮ, ಆತ್ಮ ಎಂಬುದು ಬೇರೆಯಾಗಿ ಇಲ್ಲ. 'ಪುರುಷೇಣ ಅರ್ಥ್ಯತ ಇತಿ ಪುರು ಪಾರ್ಥಃ' ಎಂಬ ವ್ಯುತ್ಪತ್ತಿಯಿಂದ ನಿರತಿಶಯವಾದ ದುಃಖಸಂಬಂಧವಿಲ್ಲದ ಸುಖವನ್ನೇ ಪುರುಷ ಕೋರುತ್ತಾನೆ. ಪ್ರಾಪ್ತದುಃಖವನ್ನು ಹೇಗಾದರೂ ಪರಿಹರಿಸಿ ಕೊಂಡು ಸುಖವನ್ನು ಅನುಭವಿಸಬೇಕೆಂದು ಚಾರ್ವಾಕರು ಹೇಳುತ್ತಾರೆ. ಹೇಗೆಂದರೆ, ನಮಗೆ ಅಕ್ಕಿ ಬೇಕಾದಾಗ ಸಿಕ್ಕುವುದು ಹೊಟ್ಟು, ಧೂಳು, ಮಣ್ಣು, ಕಲ್ಲು ಸೇರಿರುವ ಬತ್ತ ಮಾತ್ರ. ಅದರಲ್ಲಿ ಅಕ್ಕಿಯನ್ನು ಬೇರೆ ಮಡಿ ಉಳಿದ ವಸ್ತುಗಳನ್ನು ಬಿಡು ವಂತೆಯೇ, ಸುಖದ ಜೊತೆಗೆ ಅನಿವಾರ್ಯವಾಗಿ ಬಂದ ದುಃಖಗಳನ್ನು ಪರಿಹರಿಸಿ ಕೊಂಡು ಸುಖವನ್ನು ಆಯ್ದುಕೊಳ್ಳಬೇಕು, ಚಾರ್ವಾಕ ಮತಸ್ಥರ ಪ್ರಕಾರ ಈ ಲೋಕದ ಪ್ರಭುವೇ ಈಶ್ವರ, ಈತನಿ ಗಿಂತ ಬೇರೆಯಾಗಿ ಈಶ್ವರನಿಲ್ಲ, ದೇಹನಾಶವಾಗುವುದೇ ಮೋಕ್ಷ. ಸುಖಾನುಭವ ರೂಪವಾದ ಕಾಮ, ಅದಕ್ಕೆ ಅನುಕೂಲವಾದ ಅರ್ಥ ಎಂಬ ಎರಡೇ ಪುರುಷಾರ್ಥಗಳು ಮೋಕ್ಷ ಪುರುಷಾರ್ಥವಲ್ಲ.


ಪ್ರಮಾಣಗಳು

ಚಾರ್ವಾಕಮತಕ್ಕೆ ಪ್ರತ್ಯಕ್ಷ ಪ್ರಮಾಣವೊಂದನ್ನು ಬಿಟ್ಟರೆ ಬೇರೆ ಪ್ರಮಾಣಗಳಿಲ್ಲ. ಲೋಕದಲ್ಲಿ ಹೊಗೆಯನ್ನು ನೋಡಿದಾಗ ಅಗ್ನಿಯಿದೆಯೆಂದು ಅನುಮಾನಿಸುವರು. ಕಾಲುವೆಯ ಬಳಿ ಹಣ್ಣುಗಳಿವೆಯೆಂದರೆ ಅವನ್ನು ತರಲು ಯತ್ನಿಸುವರು. ಇಂತಹ ಅನುಮಾನ ಪ್ರಮಾಣವನ್ನು ಚಾರ್ವಾಕರು ಅಂಗೀಕರಿಸುವುದಿಲ್ಲ. ಕಣ್ಣಿಗೆ ಕಾಣದಿರುವುದರಿಂದ ಇವರಿಗೆ ಆಕಾಶವೆಂಬ ದ್ರವ್ಯವಿಲ್ಲ, ನಾವು ಪ್ರತ್ಯಕ್ಷವಾಗಿ ಕಣ್ಣಿನಿಂದ ನೋಡದ, ಕಿವಿಯಿಂದ ಕೇಳದ ಪದಾರ್ಥವಿಲ್ಲ. ಕೆಲವು ವಸ್ತುಗಳು ದೂರದಲ್ಲಿರುವುದರಿಂದ, ಕೆಲವು ಮರೆಯಲ್ಲಿರುವುದರಿಂದ, ಚಕ್ಷುರಾದಿ ಇಂದ್ರಿಯಗಳು ದುರ್ಬಲವಾದುದರಿಂದ, ಸಮಾನ ಧರ್ಮದ ವಸ್ತುಗಳು ಬೆರೆತಿರುವುದರಿಂದ, ಅಧಿಕ ತೇಜಸ್ಸಿನ ಇತರ ವಸ್ತುವಿನ ಪ್ರಭಾವದಿಂದ, ತುಂಬ ಸೂಕ್ಷö್ಮವಾಗಿರುವುದರಿಂದ ಪ್ರತ್ಯಕ್ಷವಾಗಿದ್ದರೂ ವಸ್ತು ಕಾಣಿಸದಿರಬಹುದು. 'ಅದು ಇಲ್ಲವೇ ಇಲ್ಲ ಎಂದು ಹೇಳುವುದು ತಪ್ಪು' ಎಂದು ಚಾರ್ವಾಕೇತರರು ಟೀಕಿಸುತ್ತಾರೆ. ಕಣ್ಣಿಗೆ ಕಾಡಿಗೆ ತುಂಬ ಸಮೀಪದಲ್ಲಿದ್ದರೂ ಕಾಣಿಸುವುದಿಲ್ಲ. ಗಗನದಲ್ಲಿ ತುಂಬ ದೂರದ ಹಕ್ಕಿಗಳು ಕಾಣಿಸುವುದಿಲ್ಲ. ಧಾನ್ಯರಾಶಿಯಲ್ಲಿ ಧಾನ್ಯವೆಲ್ಲ ಒಟ್ಟಿಗೆ ಕಾಣಿಸುತ್ತದೆಯ ಹೊರತು ಒಂದೊಂದು ಬೇರಬೇರೆಯಾಗಿ ಕಾಣಿಸುವುದಿಲ್ಲ. ಮಧ್ಯಾಹ್ನ ಕಾಲದಲ್ಲಿ ಗಗನದಲ್ಲಿ ತಾರೆಗಳಿದ್ದರೂ ಕಣ್ಣಿಗೆ ಕಾಣಿಸುವುದಿಲ್ಲ. ಬ್ಯಾಕ್ಟಿರಿಯದಂತಹವು ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಯಂತ್ರೋಪಕರಣಗಳ ಮೂಲಕ ಅವುಗಳ ಅಸ್ತಿತ್ವವನ್ನು ಗುರುತಿಸಬಹುದು. ಈ ವಸ್ತುಗಳೆಲ್ಲ ಇಲ್ಲವೆನ್ನುವುದು ಸರಿಯಲ್ಲ.


ಇಂದ್ರಿಯಗಳಿಗೆ ಪ್ರತ್ಯಕ್ಷವಾಗಿ ಗೋಚರಿಸುವುದಿಲ್ಲವೆಂಬ ಕಾರಣದಿಂದ ಆತ್ಮವಿಲ್ಲ ಎಂಬ ವಾದವನ್ನು ಆಸ್ತಿಕ ಮತಗಳು ಯಾವುವೂ ಅಂಗೀಕರಿಸುವುದಿಲ್ಲ. ಹಿಮಾಲಯವನ್ನು ನಾವು ನೋಡಿರುವುದಿಲ್ಲ. ಆದರೆ ಭಾರತದ ಉತ್ತರದಲ್ಲಿ ಮಾನದಂಡದಂತೆ ಹಿಮಾಲಯವಿದೆ ಎನ್ನುವ ಅನುಭವಜ್ಞರ ಮಾತುಗಳನ್ನು ನಾವು ನಂಬುತ್ತೇವೆ. ಹೀಗೆಯೇ ಸಂಪ್ರದಾಯಜ್ಞರು ಶಬ್ದಾದಿ ಇತರ ಪ್ರಮಾಣಗಳನ್ನೂ ನಂಬಿದ್ದಾರೆ. ನಂಬಿಕೆ ಒಂದೊಂದು ಸಲ ಸುಳ್ಳಾಗಬಹುದು. ಆದರೆ ಇದೇ ಕಾರಣದಿಂದ ಅಸ್ತಿತ್ವವನ್ನೇ ನಿರಾಕರಿಸಬಾರದೆಂದು ಭಾರತೀಯ ದಾರ್ಶನಿಕರಲ್ಲಿ ಹಲವರು ಹೇಳುತ್ತಾರೆ.


ಚಾರ್ವಾಕರು ಪುಣ್ಯಪಾಪಗಳನ್ನು ಲೆಕ್ಕಿಸದಿದ್ದರೂ ದಂಡನೀತಿ, ವ್ಯಾಪಾರ ಪೌಕರ್ಯ ಮುಂತಾದ ಪದ್ಧತಿಗಳನ್ನು ಪ್ರೋತ್ಸಾಹಿಸಿದರು. ಬೃಹಸ್ಪತಿ ಅರ್ಥಶಾಸ್ತçವನ್ನು ರಚಿಸಿದನೆಂದು ವಾತ್ಸಾಯನ ಕಾಮಸೂತ್ರಗಳಲ್ಲಿದೆ (೧-೧-೧೭). ಚಾರ್ವಾಕರ ಪ್ರಕಾರ ಅರ್ಥವೆಂದರೆ ಸಂಪತ್ತು. ಸುಖಜೀವನಕ್ಕೆ ಅದು ಅಗತ್ಯವಾದುದರಿಂದ ದೇಶದಲ್ಲಿ ಸರ್ವಸಂಪತ್ಸವೃದ್ಧಿಯಾಗಬೇಕು. ಇವರ ಪ್ರೋತ್ಸಾಹದಿಂದ ಅರುವತ್ತು ನಾಲ್ಕು ಕಲೆಗಳು ಅಭಿವೃದ್ಧಿಯಾದುವು. ಆದರೆ ಪರಮಶ್ರೇಷ್ಠವಾದ ಆನಂದಕ್ಕೆ ಬದಲಾಗಿ ಸಂಪತ್ತು ಮತ್ತು ಸುಖೇಚ್ಛೆ ಜನರನ್ನು ಕೆಟ್ಟ ಮಾರ್ಗಕ್ಕೆ ಎಳೆದವು. ಹೀಗೆ ಚಾರ್ವಾಕರ ಸಿದ್ದಾಂತ ಅಧೋಗತಿ ಪಾಲಾಯಿತು. ಬೌದ್ಧರು, ಜೈನರು ಕೂಡ ಚಾರ್ವಾಕರನ್ನು ಟೀಕಿಸಿ ಓಡಿಸಿದರು. ಎಲ್ಲ ದಾರ್ಶನಿಕರಿಂದಲೂ ಚಾರ್ವಾಕರು ಹಿಂಸೆಯನ್ನು ಅನುಭವಿಸಬೇಕಾಯಿತು. ಇಷ್ಟಾದರೂ ಚಾರ್ವಾಕದರ್ಶನದ ಉಳಿಕೆಗಳು ಇನ್ನೂ ಇರುವುದು ಅದರ ಬಲವನ್ನು ಸೂಚಿಸುತ್ತದೆ.


ಪರಾಮರ್ಶನ ಗ್ರಂಥಗಳು

೧.ಭಾರತೀಯ ತತ್ವಶಾಸ್ತ್ರದ ಆರು ವ್ಯವಸ್ಥೆಗಳು - ಮ್ಯಾಕ್ಸ್ ಮುಲ್ಲರ್, ೧೯೧೬,

೨. ಭಾರತದ ಸಾಂಸ್ಕೃತಿಕ ಪರಂಪರೆ - ರಾಮಕೃಷ್ಣ ಮಿಷನ್

೩. ‘ಚರಕ ಸಂಹಿತ' (ತೆಲುಗು ಲಿಪಿ), ವಾವಿಲ್ಲ ರಾಮಸ್ವಾಮಿಶಾಸ್ತ್ರಿ ಅಂಡ್ ಸನ್ಸ್, ಮದ್ರಾಸು.೧೯೪೧

೪. ಸರ್ವದರ್ಶನಸಾರ ಸಂಗ್ರಹ. ಮಾಧವಾಚಾರ್ಯ.

Comments


bottom of page