ನೆನಪಿನಂಗಳದ ಆ ಪುಟಗಳು
- poorna drishti
- Feb 4
- 4 min read
ಡಾ. ರಜನಿ ಸಿ ವಿ
ಸಹಾಯಕ ಪ್ರಾಧ್ಯಪಕರು
ಇಂಗ್ಲೀಷ್ ವಿಭಾಗ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊನ್ನಾಳಿ
ಆಮಟೆ ಎಸ್…………. ಆಮಟೆ ಎಸ್
ಗೋಧೂಳಿ ಸಮಯ ಆದಿತ್ಯ ಮನೆಗೊರಡಲು ಸಿದ್ಧನಾಗಿದ್ದ, ಮುಂಜಾನೆ ಗೂಡು ಬಿಟ್ಟ ಹಕ್ಕಿಗಳು ಪಶ್ಚಿಮಕ್ಕೆ ಮುಖ ಮಾಡಿದ್ದವು, ಮಕ್ಕಳನ್ನು ಮನೆಗೆ ಮರಳಿರೆಂದು ತಾಯಂದಿರು ಕೂಗು ಹಾಕುತ್ತಿದ್ದರು. ಇದ್ಯಾವುದರ ಪರಿವೇಯೇ ಇಲ್ಲದಂತೆ ಹೆಣ್ಣು ಮಕ್ಕಳಿಬ್ಬರು ತಮ್ಮ ಸೋಲು ಗೆಲುವಿನ ಆಟದಲ್ಲಿ ತಲ್ಲೀನರಾಗಿದ್ದರು. ಬಾಲ್ಕನಿಯಲ್ಲಿ ನಿಂತ ನನ್ನ ದೃಷ್ಟಿ ಆ ಹೆಣ್ಣು ಮಕ್ಕಳ ಮೇಲೆಯೇ ನೆಟ್ಟಿತ್ತು ಪ್ರಯತ್ನಿಸಿದರು ಅವರಿಂದ ದೃಷ್ಟಿ ಹೊರಳಿಸಲಾಗಲಿಲ್ಲ. ಮನೆ ಕೆಲಸದ ಕರೆಗೆ ಓ ಕೊಟ್ಟರು ಮನ ಪಟಲದಲ್ಲಿ ಮತ್ತೆ ಮತ್ತೆ ಆ ಹೆಣ್ಣು ಮಕ್ಕಳ ಛಾಯೆ ಮೂಡುತ್ತಿತ್ತು. ಹಾಗೆ ಹೀಗೆ ಎಲ್ಲಾ ಕೆಲಸವನ್ನು ಮುಗಿಸಿ ಮಂಚದಲ್ಲಿ ಒರಗಿದ ನನಗೆ ಕಿವಿಯಲ್ಲಿ ಯಾರದೋ ನಗು, ಕಂಗಳಲ್ಲಿ ಯಾರದೋಮುಖ, ಮನಸ್ಸಿನಲ್ಲಿ ಯಾರದೋ ಮಾಸಿದ ನೆನಪು, ಯಾರದೋ ಮಾತು ಕಿವಿಯಲ್ಲಿ ರಿಂಗಣಿಸಿದಂತಹ ಅನುಭವ. ದೇಹದ ದಣಿವಿಗೆ ಮನಸು ಕೂಡ ಕೈಜೋಡಿಸಿ ನಿದ್ದೆಗೆ ಜಾರಿದವಳಿಗೆ ಯಾರದೋ ಕೂಗು ಎಚ್ಚರಿಸಿದಂತಾಯಿತು.
ಬೆಳಗ್ಗೆ ಕಾಲೇಜಿಗೆ ಹೋಗುವ ಆತುರದಲ್ಲಿ ಹಿಂದಿನ ದಿನದ ಯಾವುದೇ ಸೆಳೆತಗಳಿಗೆ ಓಗೊಡದೆ ಕೇವಲ ತರಗತಿಯಲ್ಲಿ ಚರ್ಚಿಸಬೇಕಾದ ಟಿಎಸ್ ಎಲಿಯಟ್ ಮತ್ತು ಅರ್ನಾಲ್ಡ್ ರನ್ನು ಮನಸ್ಸಿನಲ್ಲಿ ತುಂಬಿಕೊಂಡವಳಿಗೆ, ಮುಸ್ಸಂಜೆಯ ತಂಪು ಗಾಳಿ ನೆನಪಿನ ಪುಟಗಳಿಂದ ಆ ಮಾಸಿದ ಮುಖವನ್ನು ಮತ್ತಷ್ಟು ತಿಳಿಗೊಳಿಸಿದಾಗ ನೆನಪಾದವಳೇ ನನ್ನ ಬಾಲ್ಯದ ಗೆಳತಿ ಕಮಲು. ನನಗಿಂತ ವಯಸ್ಸಿನಲ್ಲಿ ಹಿರಿಯಳಾದರೂ ನನ್ನೆಲ್ಲಾ ಬಾಲ್ಯದ ತುಂಟಾಟಗಳಿಗೆ, ಆಟಗಳಿಗೆ ಜೊತೆಯಾದವಳು. ತನ್ನ ವಯಸ್ಸಿಗೆ ಮೀರಿದ ಜವಾಬ್ದಾರಿ ಹೊತ್ತು, ಶಾಲೆ ಬಿಟ್ಟು, ತನ್ನ ತಂಗಿ ತಮ್ಮನಿಗೆ ತಾಯದವಳು. ನನ್ನೆಲ್ಲಾ ಮಾತುಗಳಿಗೆ ಕಿವಿಯಾದವಳು. ತನ್ನ ಪುಟ್ಟ ಪ್ರಪಂಚವನ್ನು ನನ್ನಿಂದ ಹಿರಿದಾಗಿಸಿಕೊಂಡವಳು. ಚಿಕ್ಕವಯಸಿನಲ್ಲಿ ತಂದೆಯನ್ನು ಕಳಕೊಂಡ ಕಮಲು, ತಾಯಿಯ ಜವಾಬ್ದಾರಿಗೆ ಹೆಗಲಾದವಳು. ತಾಯಿ ಕುಟುಂಬದ ಪೋಷಣೆಗೆ ಹೊರಗೆ ದುಡಿದರ, ತಮ್ಮ ಮತ್ತು ತಂಗಿಯ ಲಾಲನೆ, ಪೋಷಣೆ ಮಾಡಿದವಳು, ಕಮಲು. ಶಾಲೆ ಬಿಟ್ಟು ಮನೆಯಲ್ಲಿ ಉಳಿದ ಕಮಲುಗೆ ನಾನೇ ಆಕಾಶವಾಣಿ ಮತ್ತು ದೂರದರ್ಶನ.
ನನ್ನೊಂದಿಗೆ ಕುಳಿತು ಹರಟೆ ಹೊಡೆಯುವುದೇ ಅವಳ ಬಹುದೊಡ್ಡ ಮನರಂಜನೆ. ಅವಳೊಂದಿಗೆ ಆಡುವುದೆಂದರೆ ಬಹು ಇಷ್ಟ, ನನಗೆ. ಅವಳೊಂದಿಗೆ ಮರಳಿನಲ್ಲಿ ಗುಬ್ಬಿ ಗೂಡು ಕಟ್ಟುವಾಗ ನನ್ನಂಗಿಗೆ ಹತ್ತಿದ ರಕ್ತದ ಕಲೆಯನ್ನು ಕಂಡು, ನನ್ನ ಅಮ್ಮನ ಬಳಿಗೆ ಕರೆ ತಂದು " ರಂಜು ದೊಡ್ಡೋಳಾಗವ್ಳೆ" ಎಂದು ಹಿರಿಯಕ್ಕನಂತೆ ನೋಡಿಕೊಂಡವಳು ಕಮಲು .ಹೈ ಸ್ಕೂಲ್ ಮೆಟ್ಟಿಲೇರಿದ ನಾನು ಶಾಲೆಗೆ ಬಸ್ಸಿನಲ್ಲಿ ಹೋಗಿ ಬರುವಾಗ ನಡೆದ ವಿಷಯಗಳನ್ನು ಕಮಲುಗೆ ಹೇಳುವುದೇ ನನ್ನ ದಿನಚರಿ. ನನ್ನೆಲ್ಲಾ ಮಾತುಗಳನ್ನು ಕಿವಿ ದುಂಬಿಸಿಕೊಂಡಾಗ ಅವಳ ಅರಳುವ ಕಣ್ಣುಗಳನ್ನು ನೋಡುವುದೇ ನನಗೆ ಖುಷಿ. ನನ್ನಿಂದ ತನ್ನ ಆಸೆಗಳಿಗೆ ರೆಕ್ಕೆ ಮೂಡಿಸಿಕೊಂಡವಳು ಕಮಲು. ಜೀವನದ ಬಂಡಿ ನೂಕಲು ಊರು ಬಿಟ್ಟ ನನ್ನ ತಂದೆ ತಾಯಿಯೊಂದಿಗೆ ಬೇರೆ ಊರಿಗೆ ಬಂದು ನೆಲೆಸಿದ ನಾನು, ಗುರಿ, ಸಾಧನೆ, ಸ್ಪರ್ಧೆ ಎಂಬ ಜಗತ್ತಿನಲ್ಲಿ ನನ್ನನ್ನೇ ನಾನು ಕಳೆದುಕೊಂಡಾಗ, ನನಗೆ ತಿಳಿಯಲಿಲ್ಲ ಯಾವ ಕ್ಷಣದಲ್ಲಿ ಕಮಲು ನನ್ನಿಂದ ದೂರವಾದಳೆಂದು. ಓದು, ಕೆಲಸ, ಮದುವೆ ತದ ನಂತರ ಮಗುವಿನ ಜವಾಬ್ದಾರಿಯಲ್ಲಿ ಬಿಡುವಿಲ್ಲದ ಜೀವನ ಪಯಣದಲ್ಲಿ ಹದಿನೈದು ವರುಷಗಳು ಹಾಗೆ ನಿಶ್ಯಬ್ದವಾಗಿ ಸರಿದು ಹೋಗಿದ್ದವು.
ಆ ಮಕ್ಕಳ ಆಟ ನನ್ನಲ್ಲಿ ಹುದುಗಿ ಹೋದ ಕಮಲುನ ಮತ್ತೆ ಹೊರ ತಂದಿತ್ತು. ಆಕೆಯನ್ನು ನೋಡುವ, ಮಾತನಾಡುವ ಆಸೆ ಮನದ ಮೂಲೆಯಲ್ಲಿ ಚಿಗುರೊಡೆದಿತ್ತು. ನನ್ನ ತಾಯಿಗೆ ಫೋನ್ ಮಾಡಿ ಕಮಲುನ ಬಗ್ಗೆ ವಿಚಾರಿಸಿದಾಗ ನನ್ನ ಕುತೂಹಲ ತಣಿಯುವ ವಿಚಾರವೇನು ನನಗೆ ತಿಳಿಯಲಿಲ್ಲ.ನನ್ನ ಪುಸ್ತಕದ ರಾಶಿಯಲ್ಲಿ ಎಲ್ಲಾದರೂ ಅವಳ ಕುರುಹು ಸಿಗಬಹುದೇ ಎಂದು ಒಂದು ಭಾನುವಾರವೆಲ್ಲ ಹುಡುಕಿದರು ಯಾವುದೇ ಉಪಯೋಗವಾಗಲಿಲ್ಲ. ಪತ್ರ ಬರೆಯಬಹುದೆಂಬ ಆಲೋಚನೆಗೂ ಯಾವುದೇ ಸಹಕಾರ ಸಿಗದಾದಾಗ ಮನಸ್ಸಿಗೆ ಹೊಳೆದದ್ದು ಈ ಬಾರಿಯ ಬೇಸಿಗೆ ರಜೆಯಲ್ಲಿ ಮುದ್ದಾಂ ಊರಿಗೆ ಹೋಗಿ ಕಮಲೂನ ಭೇಟಿಯಾಗುವುದೆಂದು. ದಿನಗಳು ಉರುಳಿದಂತೆ ಕಮಲೂನ ನೋಡುವ ಆಸೆ ಹೆಚ್ಚಾಗುತ್ತಿತ್ತು. ಹಲವು ತಿಂಗಳುಗಳು ಕಾದ ನಂತರ ಬೇಸಿಗೆ ರಜೆ ಬಂದೇ ಬಿಟ್ಟಿತು. ಮನೆ ಹಾಗೂ ಮಗಳ ಜವಾಬ್ದಾರಿಯನ್ನು ಪತಿರಾಯನಿಗೆ ಒಪ್ಪಿಸಿ ಊರಿನ ಬಸ್ಸು ಹತ್ತಿದೆ. ಬೆಳಗಿನ ಜಾವ 6:00ಗೆ ಬಸ್ಸು ಹತ್ತಿ ಮೂರು ಬಸ್ಸುಗಳನ್ನು ಬದಲಾವಣೆ ಮಾಡಿದವಳಿಗೆ ಮತ್ತೊಂದು ಬಸು ಹತ್ತಿ ಊರಿಗೆ ಹೋಗುವ ನಿತ್ರಾಣವಿಲ್ಲದೆ ನನ್ನ ಪಯಣವನ್ನು ನಡು ಮಧ್ಯದಲ್ಲಿ ನಿಲ್ಲಿಸಿ ನನ್ನ ಆತುರತೆಯನ್ನು ಸ್ವಲ್ಪ ಬದಿಗೊತ್ತಿ ರಾತ್ರಿ ಸಮಯವಾದ್ದರಿಂದ ನನ್ನ ಚಿಕ್ಕಮ್ಮನ ಮನೆಯಲ್ಲಿ ಉಳಿದು ಮಾರನೇ ದಿನ ಬೆಳಗ್ಗೆ ನನ್ನ ಊರಿಗೆ ಪ್ರಯಾಣ ಬೆಳೆಸಿದೆ.
ಮಲೆನಾಡಿನ ತಪ್ಪಲಿನಲ್ಲಿದ್ದ ನನ್ನ ಚಿಕ್ಕ ಊರು ಆಧುನಿಕ ನಾಗರಿಕತೆಗೆ ಈಗಿನ್ನು ಹೊರಳಿತ್ತು. ಓದು, ಕೆಲಸ ಎಂದು ಯುವಕ ಯುವತಿಯರೆಲ್ಲ ಊರು ಬಿಟ್ಟು ಪಟ್ಟಣದ ದಾರಿ ಹಿಡಿದು ಎಷ್ಟೋ ವರ್ಷಗಳಾಗಿದ್ದವು. ಈಗ ಊರಿನಲ್ಲಿ ಹಿರಿ ತಲೆಮಾರಿನವರಷ್ಟೇ ಇದ್ದರು. ನನ್ನ ವಯಸ್ಸಿನವರೆಲ್ಲ ಊರಿಗೆ ಬರುವುದು ಹಬ್ಬಗಳಿಗೆ ಇಲ್ಲವೇ ಮದುವೆ ಮುಂಜಿ ಗಳಿಗಷ್ಟೇ. ನನ್ನ ಮನೆಯಿದ್ದ ರಸ್ತೆಗೆ ಹೋಗಬೇಕೆಂದು ಹೊರಟರೆ ಚಿಕ್ಕ ಮನೆಗಳು ಹಾಗೂ ಗುಡಿಸಲು ಗಳಿದ್ದ ಜಾಗಗಳಲ್ಲಿ ಆರ್‌ಸಿಸಿ ಮನೆಗಳಿದ್ದು ಮನೆಯ ಬೀದಿಯನ್ನು ಗುರುತು ಹಚ್ಚಲಾಗಲಿಲ್ಲ. ಯಾರಾದರೂ ಪರಿಚಯ ದವರು ಕಾಣಬಹುದೆಂದು ಹನುಮಂತ ದೇವರ ಗುಡಿಗೆ ಹೋದರೆ ಬಾಗಿಲು ಮುಚ್ಚಿತ್ತು. ನಾನು ಓದಿದ ಪ್ರಾಥಮಿಕ ಶಾಲೆಗೆ ಹೋಗೋಣವೆಂದುಕೊಂಡರೆ ಬೇಸಿಗೆ ರಜೆಯಲ್ಲಿ ಶಾಲೆಯಲ್ಲಿ ಯಾರು ಇರುವುದಿಲ್ಲವೆಂದು ತಿಳಿದರೂ ನನ್ನ ಮನಸ್ಸು ಆ ಕಡೆಗೆ ಹೆಜ್ಜೆ ಹಾಕುವಂತೆ ಮಾಡಿತು. ಶಾಲಾ ಕಟ್ಟಡ ಬದಲಾಗಿ ಇನ್ನು ಚಂದವಾಗಿ ಕಾಣುತ್ತಿತ್ತು.
ಶಾಲೆಯಿಂದ ಒಂದಿಷ್ಟು ದೂರದಲ್ಲಿ ಮನೆಯ ಮುಂದಿನ ತುಳಸಿ ಕಟ್ಟೆಗೆ ಯಾರೊ ಪೂಜೆ ಮಾಡುತ್ತಿರುವುದನ್ನು ಗಮನಿಸಿದ ನಾನು ಅವರನ್ನೇ ತದೇಕಚಿತ್ತದಿಂದ ನೋಡುತ್ತಾ ಇದ್ದಾಗ, ಆ ವ್ಯಕ್ತಿಯನ್ನು ಎಲ್ಲೋ ನೋಡಿದಂತಹ ಅನುಭವ, ಪರಿಚಯವಿರುವ ನಿಲುವು ಹಾಗೂ ಮುಖ, ಹತ್ತಿರ ಹೋಗಿ ಮಾತನಾಡಿದರೆ ತಿಳಿಯಿತು ಅವರೇ ನಮ್ಮ ಶಾಸ್ತ್ರಿ ಸರ್. ವಯೋ ನಿವೃತ್ತಿಯ ನಂತರ ಅದೇ ಊರಿನಲ್ಲಿ ಕುಟುಂಬ ಸಮೇತರಾಗಿ ನೆಲೆಸಿದ್ದಾರೆಂದು ತಿಳಿಯಿತು. ನಮ್ಮ ಮನೆ ಇದ್ದ ಬೀದಿ ಗೆ ಯಾವ ದಾರಿಯಲ್ಲಿ ಹೋಗುವುದೆಂದು ವಿಚಾರಿಸಿ ಅಲ್ಲಿಗೆ ಹೊರಟಾಗ, ನಮ್ಮ ಮನೆಯ ಕುರುಹುಗಳೆ ಇರಲಿಲ್ಲ. ಆ ಬೀದಿಯಲ್ಲಿ ಕಮಲೂನ ಬಗ್ಗೆ ವಿಚಾರಿಸಿದರೆ ಯಾರಿಗೂ ಅವಳ ಸುಳಿವು ಇರಲಿಲ್ಲ. ಯಾರೋ ಒಬ್ಬರು ಹೇಳಿದ್ದು ಸಾಕಮ್ಮ ಹಾಗೂ ಕಮಲು ಊರು ಬಿಟ್ಟು ಹೋದರೆಂದು. ನನ್ನ ಆತುರತೆಗೆ ತಣ್ಣೀರು ಚೆಲ್ಲಿದಂತಹ ವರ್ತಮಾನಗಳು ಬಿಟ್ಟರೆ ಬೇರೆ ಯಾವುದೇ ಪ್ರಯೋಜನವಾಗಲಿಲ್ಲ.
ಏನು ಮಾಡುವುದೆಂದು ತಿಳಿಯದೆ, ಬಸ್ ಬಿಟ್ಟು ಹೋದ ಜಾಗಕ್ಕೆ ಬಂದರೆ ಯಾರೋ ವಯಸ್ಸಾದ ಮಹಿಳೆಯನ್ನು ಕಂಡು ಗುರುತು ಹಚ್ಚಿ ದಂತಹ ಅನುಭವ. ಎಲೆ ಅಡಿಕೆ ತಿಂದು ಕೆಂಪಾದ ತುಟಿಗಳು, ಕಪ್ಪು ಬಿಳಿ ಮಿಶ್ರಿತ ಕೂದಲು, ಎತ್ತಿ ಕಟ್ಟಿದ ಸೀರೆ, ಕೈಯಲ್ಲಿ ಕುಡ್ಲು, ಆಕೆ ದೊಡ್ಡಮ್ಮನಿರಬೇಕೆಂಬ ಅನುಮಾನ. ಊರಿನ ಮಕ್ಕಳಿಗೆಲ್ಲ ದೊಡ್ಡಮ್ಮನೆ ಆಕೆ. ನಮ್ಮ ಊರಿನ ಬಾಲ ವಿಧವೆ. ಗಂಡ ತೀರಿ ಹೋದ ಮೇಲೆ, ತವರಿಗೆ ಬಂದಾಕೆ. ತಾನು ತವರಿನಲ್ಲಿ ಭಾರವಾಗಬಾರದೆಂದು ಎಲ್ಲರ ಮನೆಯಲ್ಲಿ ಮನೆ ಕೆಲಸ ಮಾಡಿ ಕೊಡುತ್ತಾ, ಅವರು ಕೊಟ್ಟ ಪುಡಿಗಾಸಿನಿಂದ ಜೀವನ ಸಾಗಿಸುತ್ತಿದ್ದಳು. ಹಬ್ಬ ಹರಿದಿನಗಳಲ್ಲಿ ಅವಳಿಲ್ಲದೆ ಹಬ್ಬದೂಟ ಸಿದ್ಧವಾಗುತ್ತಿರಲಿಲ್ಲ. ಮದುವೆ ಮನೆಗಳಿಂದ ಅವಳಿಗೆ ಬುಲಾವ್ ಹೋಗುತ್ತಿತ್ತು. ಎಲ್ಲೇ ಕೆಲಸಕ್ಕೆ ಹೋದರು ತನ್ನ ಮನೆಯೆಂದು ಭಾವಿಸಿಯೇ ಕೆಲಸ ಮಾಡುತ್ತಿದ್ದಳು. ಮಕ್ಕಳಿಗೆ ಅವಳೆಂದರೆ ಸಲುಗೆ, ಪ್ರೀತಿ. ಅವಳನ್ನು ಕಂಡ ನನಗೆ ಮರುಭೂಮಿಯಲ್ಲಿ ಒಯಾಸಿಸ್ ದೊರಕಿದ ಸಂಭ್ರಮ. ಆಕೆಯ ಬಳಿ ಹೊರಟಾಗ ಆಕೆಗೂ ಸಂಭ್ರಮ ನನ್ನಲ್ಲಿ ನನ್ನ ತಾಯಿಯನ್ನು ಕಂಡಂತಹ ಅನುಭವ.
ನನ್ನ ತಾಯಿಯೊಂದಿಗೆ ದೂರವಾಣಿಯಲ್ಲಿ ಕುಶಲೋಪರಿಯ ಮಾತು ಮಾತಾಡಿ ನನ್ನೊಂದಿಗೆ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳಲು ಪ್ರಾರಂಭ ಮಾಡಿದಳು. ಇದೆ ಸರಿಯಾದ ಸಂದರ್ಭವೆಂದು ಕಮಲುನ ಬಗ್ಗೆ ವಿಚಾರಿಸಿದಾಗ ಕಣ್ಣು ಕೆಂಪು ಮಾಡಿ ಬೈಗುಳಗಳ ಸುರಿಮಳೆ ಸುರಿಸಿದಳು ಸುರಿಮಳೆಯಲ್ಲಿ ನನ್ನ ಬೊಗಸೆ ಗೆ ಬಂದದ್ದು, ವಯೋ ಸಹಜ ಆಕರ್ಷಣೆಗೆ ಒಳಗಾಗಿ ಸೈಕಲ್ ರಿಪೇರಿ ಸಲೀಮ್ ನೊಂದಿಗೆ ಊರು ಬಿಟ್ಟು ಹೋದಳೆಂದು. ಸಾಕಮ್ಮ ತನ್ನ ಮಿಕ್ಕ ಮಕ್ಕಳನ್ನು ಕರೆದುಕೊಂಡು ಬೇರೆ ಊರಿಗೆ ಹೋದಳೆಂದು. ದೊಡ್ಡಮ್ಮನಿಗೆ ಕಮಲು ನೆನಪಿದಿದ್ದು ಕೇವಲ ಜಾತಿ ಕೆಡೆಸಿದ ರಂಡೆಯಂತೆ.
ದೊಡ್ಡಮ್ಮನೊಂದಿಗೆ ಮಾತನಾಡುತ್ತಿದ್ದಾಗ ಆಕೆಯ ಗೆಳತಿ ನಮ್ಮ ಮಾತಿನಲ್ಲಿ ಮಾತು ಕೂಡಿಸಿದಾಗ ತಿಳಿದದ್ದು ಪಕ್ಕದೂರಿನ ಜಾತ್ರೆಯಲ್ಲಿ ಆಕೆಗೆ ಕಮಲು ಕಂಡಿದ್ದಳೆಂದು. ಆದರೆ ಅವಳನ್ನು ನೋಡುವ ಮಾತನಾಡುವ ಯಾವುದೇ ದಾರಿ ನನಗೆ ತಿಳಿಯಲಿಲ್ಲ. ನಮ್ಮ ಮಾತುಗಳ ಮಧ್ಯೆ ಬಸ್ಸು ಬಂದು ನಿಂತಿತ್ತು. ಬಸ್ಸು ಪೂರ್ತಿಯಾಗಿ ತುಂಬುವವರೆಗೂ ಚಾಲಕ ಬಸ್ಸನ್ನು ಬಿಡುವುದಿಲ್ಲ. ಒಬ್ಬೊಬ್ಬರೇ ಬಂದು ಬಸ್ಸನ್ನು ಹತ್ತುತ್ತಿದ್ದರು. ಅವರಲ್ಲಿ ಕಮಲು ಕಾಣಬಹುದೇ ಎಂದು ಬಂದವರನೆಲ್ಲ ದಿಟ್ಟಿಸಿ ನೋಡುತ್ತಿದ್ದೆ. ಯಾರಿಗೋ ಸಂತೆಯಲ್ಲಿ, ಮತ್ಯಾರಿಗೂ ಜಾತ್ರೆಯಲ್ಲಿ ಕಂಡ ಕಮಲು ನನಗೆ ಇಲ್ಲಿ ಕಾಣಬಹುದೇ ಎಂಬತವಕದಿಂದ ಹುಡುಕಿದರು ಕಾಣಲಿಲ್ಲ. ಬಂದ ದಾರಿಗೆ ಸುಂಕವಿಲ್ಲವೆಂಬಂತೆ, ಮನಸು ಭಾರ ಮಾಡಿಕೊಂಡು ಊರಿಗೆ ಮರು ಪ್ರಯಾಣ ಬೆಳೆಸಿದ ನನಗೆ ಒಂದೇ ಪ್ರಶ್ನೆ ಕಾಡುತ್ತಿತ್ತು. ಕಮಲುನ ಭೇಟಿಯಾಗುವ ದಾರಿ ಯಾವುದೆಂದು? ಇದೊಂದೇ ಪ್ರಶ್ನೆ ನನ್ನ ಎದೆ ಮೇಲೆ ಮಣಬಾರದಂತೆ ಕೂತಿತ್ತು. ಬಸ್ಸು ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು. ನಿರಾಸೆ ಮನದಲ್ಲಿ ಮನೆ ಮಾಡಿದ್ದರೂ, ಕಿಟಕಿಯಿಂದ ತೂರಿ ಬಂದ ತಂಪು ಗಾಳಿ ನನ್ನ ನಿದ್ದೆಗೆ ಜಾರಿಸಿತು.ನೆನಪಿನಂಗಳದ ಆ ಪುಟಗಳು
ಡಾ. ರಜನಿ ಸಿ ವಿ
ಸಹಾಯಕ ಪ್ರಾಧ್ಯಪಕರು
ಇಂಗ್ಲೀಷ್ ವಿಭಾಗ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊನ್ನಾಳಿ
Comments