‘ಬೆಳ್ಳಿಮೋಡ’ ಸಿನಿಮಾ : ಒಂದು ಹೊಸ ಪ್ರಯೋಗ
- poorna drishti
- Sep 15
- 5 min read
ಡಾ. ಸುಶ್ಮಿತಾ. ವೈ
ಆ/o ಯೋಗೇಂದ್ರ
ಸುಳುಗೋಡು, ನಗರ ಅಂಚೆ
ಹೊಸನಗರ ತಾಲೂಕು, ಶಿವಮೊಗ್ಗ ಜಿಲ್ಲೆ ೫೭೭೪೨೫
೧೯೬೭ರಲ್ಲಿ ತೆರೆಕಂಡ ‘ಬೆಳ್ಳಿಮೋಡ’ ಸಿನಿಮಾವು ತ್ರಿವೇಣಿ ಅವರ ‘ಬೆಳ್ಳಿಮೋಡ’ ಕಾದಂಬರಿಯನ್ನು ಆಧರಿಸಿ ರಚನೆಗೊಂಡಿದ್ದು, ಇದಕ್ಕೆ ಪುಟ್ಟಣ್ಣ ಕಣಗಾಲರು ಚಿತ್ರಕತೆ ರಚಿಸಿ, ನಿರ್ದೇಶನ ನೀಡಿದ್ದಾರೆ. ಇದು ಹಲವು ಕಾರಣಕ್ಕೆ ಮಹತ್ವಪೂರ್ಣವಾದ ಸಿನಿಮಾವಾಗಿದೆ. ಸಾಹಿತ್ಯ ಕೃತಿಯಾದ ಕಾದಂಬರಿಯನ್ನು ತಮ್ಮ ಮೊದಲ ಚಿತ್ರದಲ್ಲಿಯೇ ಬೆಳ್ಳಿತೆರೆಗೆ ಅಳವಡಿಸಿದ್ದು ಒಂದು ಹೆಗ್ಗಳಿಕೆಯಾದರೆ ಅದೇ ಸಿನಿಮಾ ಅಂದು ಅವರನ್ನು ಅತ್ಯುತ್ತಮ ನಿರ್ದೇಶಕನ ಪಟ್ಟಕ್ಕೆ ಏರಿಸಿದ್ದನ್ನು ಗಮನಿಸಬಹುದು. ಹೊಸ ಅಲೆಗೆ ಕಾರಣವಾದ ‘ಬೆಳ್ಳಿಮೋಡ’ ಸಿನಿಮಾ ಮುಂದೆ ಕಾದಂಬರಿ ಆಧಾರಿತ ಸಿನಿಮಾಗಳ ಸಂಖ್ಯೆ ಹೆಚ್ಚಲು ಸಹ ಕಾರಣವಾದಂತಾಯಿತು.
ತಮ್ಮ ಮೊದಲ ಚಿತ್ರವಾಗಬೇಕಿದ್ದ ‘ಸಾವಿರ ಮೆಟ್ಟಿಲು’ ಅರ್ಧಕ್ಕೆ ನಿಂತು ಹೋದರೂ ಧೃತಿಗೆಡದೆ ಬೆಳ್ಳಿಮೋಡದ ಮೂಲಕ ಸಾಧಿಸಿ, ಹೊಸ ಅಲೆಗೆ ನಾಂದಿ ಹಾಡಿದವರು ಕಣಗಾಲರು ಎನ್ನುವುದು ಗಮನಾರ್ಹವಾದುದು. “..ಬೆಳ್ಳಿಮೋಡ ಚಿತ್ರವನ್ನು ನಿರ್ದೇಶಿಸುವ ಅವಕಾಶ ಒದಗಿ ಬಂತು. ಬಹಳ ಆಸೆಹೊತ್ತು ಕಷ್ಟಪಟ್ಟು ಆ ಚಿತ್ರ ಮುಗಿಸಿದ್ದರು. ಚಿತ್ರ ಅತ್ಯಂತ ಮನೋಜ್ಞವಾಗಿ ಮೂಡಿ ಬಂದಿದ್ದರೂ, ಕನ್ನಡ ಸಿನಿಮಾ ತವರಾದ ಬೆಂಗಳೂರಿನ ಗಾಂಧಿನಗರದಲ್ಲಿ ಅದಕ್ಕೆ ಬೆಲೆ ಇರಲಿಲ್ಲ. ಕೇವಲ ಹಿಂದಿ, ತಮಿಳು ತೆಲುಗು ಚಿತ್ರಗಳಿಗೆ ಮಾರುಹೋಗಿದ್ದ ಗಾಂಧಿನಗರದ ವಿತರಕರು ‘ಬೆಳ್ಳಿಮೋಡ’ ಚಿತ್ರವನ್ನು ಬಿಡುಗಡೆ ಮಾಡಲು ತಿರಸ್ಕರಿಸಿದರು. ‘ಬೆಳ್ಳಿಮೋಡ’ ಡಬ್ಬ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡಿಯಾಡಿ ಗಾಂಧಿನಗರವನ್ನು ಸುತ್ತಿ ಸುಸ್ತಾಯಿತು. ಚಿತ್ರ ಚೆನ್ನಾಗಿಲ್ಲವೆಂದರು, ಅದಕ್ಕೆ ಹಾಕಿದ ಹಣ ವಾಪಸ್ ಬರುವುದಿಲ್ಲವೆಂದರು. ಕೊನೆಗೆ ಚಿತ್ರ ಹಾಗೂ ಹೀಗೂ ಬಿಡುಗಡೆಯಾಗಿ ಅತ್ಯಂತ ಜನಪ್ರಿಯವಾಯಿತು”೧. ಹೀಗೆ ಅನೇಕ ತೊಡಕುಗಳ ನಡುವೆಯೂ ‘ಬೆಳ್ಳಿಮೋಡ’ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗದ ಹೊಸ ಅಲೆಗೆ ಕಾರಣರಾದವರು ಪುಟ್ಟಣ್ಣ ಕಣಗಾಲರು ಎನ್ನುವುದು ಗಮನಾರ್ಹ.
ನಾಯಕ ಪ್ರಧಾನವಾಗಿದ್ದ ಸಿನಿಮಾಗಳು ನಾಯಕಿ ಕೇಂದ್ರಿತವಾಗಿ ರೂಪುಗೊಂಡು ಸಿನಿಮಾ ಪರಂಪರೆಯನ್ನು ಹೊಸದಿಕ್ಕಿನತ್ತ ಕೊಂಡೊಯ್ಯುವ ಯೋಚನೆ ಬೆಳೆದದ್ದು ಬೆಳ್ಳಿಮೋಡ ಸಿನಿಮಾದ ಯಶಸ್ಸಿನ ನಂತರ ಎನ್ನಬಹುದು. ಅದರ ರುವಾರಿಗಳು ಪುಟ್ಟಣ್ಣ ಕಣಗಾಲರು. ಆದರೆ ನಾಯಕಿ ಪ್ರಧಾನವಾಗಿ ಸಿನಿಮಾ ರೂಪಿಸುವ ಉದ್ದೇಶ ಪುಟ್ಟಣ್ಣ ಕಣಗಾಲರಿಗೆ ಇರಲಿಲ್ಲ. ಅವರು ಅವರ ಸಿನಿಮಾಗಳನ್ನು ನಾಯಕಿ ಪ್ರಧಾನ ಎಂದು ಗುರುತಿಸುವುದನ್ನು ಒಪ್ಪುವುದೂ ಇಲ್ಲ. ಆದರೆ ಅವರ ಬಹುತೇಕ ಸಿನಿಮಾಗಳು ಮಹಿಳಾ ಪ್ರಧಾನವೇ ಆಗಿರುವುದು ಗಮನಾರ್ಹ. ಈ ವಿಷಯ ಕುರಿತಂತೆ ಅವರ ಉತ್ತರ ಸ್ಪಷ್ಟವಾಗಿಲ್ಲ. ಆದರೆ ಅವರ ಬಹುತೇಕ ಸಿನಿಮಾಗಳಲ್ಲಿ ಅವರ ಮಹಿಳಾ ಪ್ರಾಧಾನ್ಯತೆಯ ದೃಷ್ಟಿಕೋನ ಎದ್ದು ಕಾಣುತ್ತದೆ. ಅವರು ಹೆಚ್ಚು ಸಾಹಿತ್ಯಾಧಾರಿತ ಕಥೆಯನ್ನು ತೆಗೆದುಕೊಳ್ಳುವಾಗ ಸಾಹಿತ್ಯದ ಮಹಿಳಾ ಪ್ರಾಧಾನ್ಯತೆ ಅಲ್ಲಿಯೂ ಮೂಡಿರಬಹುದಾದ ಸಾಧ್ಯತೆಗಳೂ ಇವೆ. ಅಲ್ಲದೇ ಅವರ ಸಮಕಾಲೀನ ಸಿನಿಮಾರಂಗದಲ್ಲಿ ನಿರ್ದೇಶಕನಿಗಿಂತ ನಾಯಕನಿಗೆ ಹೆಚ್ಚು ಮಹತ್ವವಿದ್ದುದ್ದನ್ನು ಕಣಗಾಲರು ಇಷ್ಟಪಡುತ್ತಿರಲಿಲ್ಲ. ಈ ನಿಟ್ಟಿನಲ್ಲಿ ನಾಯಕನ ಪಾತ್ರವನ್ನು ವೈಭವೀಕರಿಸುವಲ್ಲಿ ಅವರಿಗೆ ಕೆಲವು ವೈಯುಕ್ತಿಕ ತಕರಾರುಗಳಿದ್ದವು. ಈ ಅಂಶವೂ ಅವರ ನಿರ್ದೇಶನದ ಮೇಲೆ ಪ್ರಭಾವ ಬೀರಿರಬಹುದು. ಈ ಮಾತು ಅವರ ಎಲ್ಲಾ ಸಿನಿಮಾಗಳಿಗೂ ಅನ್ವಯಿಸುವುದಿಲ್ಲ, ಬಹುತೇಕ ಸಿನಿಮಾಗಳಲ್ಲಿ ಇದನ್ನು ಗಮನಿಸಬಹುದು. ಅದೇನೇ ಕಾರಣಗಳಿದ್ದರೂ ‘ಬೆಳ್ಳಿಮೋಡ’ ಸಿನಿಮಾದಲ್ಲಿ ಇಂದಿರಾ ಪಾತ್ರದ ಮೂಲಕ ನಾಯಕಿ ಕೇಂದ್ರಿತ ಸಿನಿಮಾವೊಂದು ಸೃಷ್ಟಿಯಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ನಾಯಕಿ ಕೇಂದ್ರಿತ ಸಿನಿಮಾ ಆದ ಕಾರಣಕ್ಕೆ ಅದು ಅನೇಕ ಕಡೆ ತಿರಸ್ಕೃತಗೊಂಡು ತೆರೆ ಕಾಣಲು ತಡವಾಗಿ ಕೊನೆಗೂ ಬಿಡುಗಡೆಗೊಂಡು ಜನಮನ್ನಣೆ ಗಳಿಸಿತು. ಆ ಪ್ರಯೋಗದ ಯಶಸ್ಸಿನ ನಂತರದಲ್ಲಿ ಈ ಪರಂಪರೆಯನ್ನು ಮುಂದುವರೆಸಿಕೊAಡು ಅನೇಕ ಸಿನಿಮಾಗಳು ತೆರೆ ಕಂಡವು.
‘ಬೆಳ್ಳಿಮೋಡ’ ಸಿನಿಮಾ ಕಾದಂಬರಿಯ ವಸ್ತುವಿನಂತೆ ಆಸ್ತಿ ಹಕ್ಕಿನ ಪ್ರಶ್ನೆಯನ್ನು ಮುಖ್ಯವಾಗಿರಿಸಿ ಕೊಂಡಿದೆ. ಅಲ್ಲದೇ ಬೆಳ್ಳಿಮೋಡ ಸಿನಿಮಾ ಮತ್ತು ಕಾದಂಬರಿಗೆ ಹಲವು ಸಾಮ್ಯತೆಗಳಿವೆ. ಕಾದಂಬರಿ ಮತ್ತು ಸಿನಿಮಾದ ವಸ್ತು ಸಾಮ್ಯತೆಯ ಜೊತೆಗೆ ಕಾದಂಬರಿಯ ಅನೇಕ ಸಂಭಾಷಣೆಗಳನ್ನು ಚಿತ್ರಕಥೆಯ ರಚನೆಯಲ್ಲಿ ಇದ್ದ ಹಾಗೆ ಬಳಸಿಕೊಂಡಿರುವುದು ಕಾಣುತ್ತದೆ. ಆದರೆ ಸಿನಿಮಾದಲ್ಲಿ ಇಂದಿರಾ ಪಾತ್ರವನ್ನೇ ಹೆಣ್ಣಿನ ವಿಶಿಷ್ಟ ಧ್ವನಿಯಾಗಿ ಬಳಸಿಕೊಂಡಿದ್ದು ಸಿನಿಮಾದ ವೈಶಿಷ್ಟö್ಯತೆಗೆ ಕಾರಣವಾಗಿದೆ. ಹೆಣ್ಣಿನ ಅಭಿವ್ಯಕ್ತಿ ಸ್ವಾತಂತ್ರö್ಯವನ್ನು, ಕೌಟುಂಬಿಕ ಮತ್ತು ವೈವಾಹಿಕ ಹಕ್ಕು, ಸ್ವಾತಂತ್ರö್ಯ, ಸಮಾನತೆಯ ಸ್ಥಾನಮಾನಗಳನ್ನು ಪ್ರತಿಪಾದಿಸುವ ಉದ್ದೇಶವನ್ನೇ ಸಿನಿಮಾ ಮುಖ್ಯಧಾರೆಯಲ್ಲಿ ಮೂಡಿಸಿದೆ. ಪಾತ್ರಗಳ ಸಂಭಾಷಣೆಗಳಲ್ಲಿ ಈ ಅಂಶ ಎದ್ದು ಕಾಣುತ್ತದೆ.
ಸಿನಿಮಾದ ಚಿತ್ರಕಥೆಯು ಕಾದಂಬರಿಯ ಘಟನೆ, ಪಾತ್ರಗಳು, ಸನ್ನಿವೇಶಗಳನ್ನೇ ಬಹುವಾಗಿ ಆಶ್ರಯಿಸಿದೆ. ಆದರೆ ಅವುಗಳ ನಿರ್ವಹಣೆಯಲ್ಲಿ ನಿರ್ದೇಶಕರು ಸಂಕ್ಷಿಪ್ತತೆ ಹಾಗೂ ಕೆಲವು ಬದಲಾವಣೆ ತಂದುಕೊAಡಿದ್ದಾರೆ. ಸಿನಿಮಾ ಆರಂಭಗೊಳ್ಳುವುದು ಮೋಹನನ ಆಗಮನದಿಂದ. ಅಮೆರಿಕಾದಲ್ಲಿ ಉನ್ನತ ಶಿಕ್ಷಣ ಪಡೆಯಲು ಕಾಫಿ ತೋಟದ ಮಾಲೀಕರಾದ ಸದಾಶಿವರಾಯರ ಬಳಿ ಸಹಾಯ ಕೇಳಲು ಬಂದಿರುತ್ತಾನೆ. ಬಂದ ಮೋಹನನನ್ನು ತಮ್ಮ ಹಣದಲ್ಲೇ ಓದಿಸಿ ಮಗಳನ್ನು ಕೊಟ್ಟು ಮದುವೆ ಮಾಡುವ ಯೋಚನೆ ಸದಾಶಿವರಾಯರ ತಾಯಿಯದ್ದು. ಈ ನಡುವೆ ಇಂದಿರಾ ಮೋಹನನಿಂದ ಆಕರ್ಷಿತಳೂ ಆಗುತ್ತಾಳೆ. ಅಮೆರಿಕಾದಿಂದ ಶಿಕ್ಷಣ ಪಡೆದು ಬಂದ ಮೇಲೆ ಇಂದಿರಾ ಮತ್ತು ಮೋಹನನ ಮದುವೆ ಎಂದು ಹಿರಿಯರೆಲ್ಲರೂ ನಿರ್ಧರಿಸುತ್ತಾರೆ. ತಂದೆ, ತಾಯಿ, ‘ಬೆಳ್ಳಿಮೋಡ’ ಕಾಫಿ ತೋಟ ಇವೇ ಇಷ್ಟು ಅವಳ ಪ್ರಪಂಚವಾಗಿದ್ದದ್ದು ಮುಂದೆ ಅವಳ ಬದುಕಿಗೆ ಮೋಹನನ ಆಗಮನ ಹೊಸ ಕನಸುಗಳನ್ನು ಹೆಣೆಯುವಂತೆ ಮಾಡುತ್ತದೆ. ಅವನಿಗಿಂತ ಪ್ರಿಯವಾದ ಸಂಗತಿ ಈ ಜಗತ್ತಿನಲ್ಲಿ ಅವಳಿಗೆ ಇಲ್ಲವಾಗುತ್ತದೆ. ಆದರೆ ಮುಂದೆ ಇಂದಿರಾಳಿಗೆ ತಮ್ಮನಾಗಿ ‘ಗಿರಿ’ ಹುಟ್ಟುವುದು ಕತೆಯ ಹೊಸ ತಿರುವಿಗೆ ಕಾರಣವಾಗುತ್ತದೆ. ಮೋಹನ ಆಸ್ತಿಗಾಗಿ ಇಂದಿರಾಳನ್ನು ಮದುವೆಯಾಗಲು ಒಪ್ಪಿದ್ದ ಎನ್ನುವ ಸತ್ಯ ತಿಳಿದಾಗ ಆಕೆಯ ಕನಸುಗಳು ಭಗ್ನವಾಗುತ್ತವೆ. ತದನಂತರದಲ್ಲಿ ಮೋಹನ ಪಶ್ಚಾತಾಪದಿಂದ ಮರುಗಿ ಬಂದು ಪ್ರೇಮ ನಿವೇದಿಸಿಕೊಂಡರೂ, ಮೊದಲು ಆತ ತೋರಿದ ಅಪ್ರಮಾಣಿಕತೆಯನ್ನು ಒಪ್ಪದೇ ಆತನನ್ನು ನಿರಾಕರಿಸುವ ಮೂಲಕ ಒಂಟಿಯಾಗಿ ಬಾಳುವ ನಿರ್ಧಾರ ತಳೆಯುತ್ತಾಳೆ. ಇದು ಈ ಸಿನಿಮಾದ ಚಿತ್ರಕಥೆಯ ಒಟ್ಟು ಸ್ವರೂಪವಾಗಿದೆ. ಚಿತ್ರಕಥೆಯ ರಚನೆಯಲ್ಲಿ ಕಾದಂಬರಿಯ ಅನೇಕ ಸಂಭಾಷಣೆ, ಸಂದರ್ಭ, ನಿರೂಪಣಾ ಶೈಲಿಗಳನ್ನು ತೆಗೆದುಕೊಂಡರೂ ಸಹ ನಿರ್ದೇಶಕರು ಹಲವು ವಿಚಾರಗಳಲ್ಲಿ ಸ್ವಂತಿಕೆ ತೋರಿದ್ದಾರೆ. ಈ ಕತೆಯನ್ನು ದೃಶ್ಯೀಕರಿಸುವಾಗ ನಿರ್ದೇಶಕರು ಕಂಡುಕೊಂಡ ಒಳನೋಟಗಳು ಸಿನಿಮಾದ ಮಹತ್ವವನ್ನು ಹೆಚ್ಚಿಸಿವೆ.
ಸಮಾಜ ಮತ್ತು ಕುಟುಂಬದಲ್ಲಿ ಹೆಣ್ಣಿನ ಸ್ಥಾನ, ಸ್ತ್ರೀ ಮೌಲ್ಯಗಳು, ಪುರುಷ ಮೌಲ್ಯಗಳು ಸಿನಿಮಾದಲ್ಲಿ ಪ್ರಶ್ನಿಸಲ್ಪಟ್ಟಿವೆ. ಈ ನಿಟ್ಟಿನಲ್ಲಿ ಸಿನಿಮಾ ಕಾದಂಬರಿಯ ಮಹಿಳಾ ಪರವಾದ ಗಟ್ಟಿಧ್ವನಿಯನ್ನು ಎತ್ತಿದೆ. ಇಲ್ಲಿ ತರಲಾದ ಕೌಟುಂಬಿಕ ದೃಶ್ಯಗಳಲ್ಲಿ ಉದ್ದೇಶಪೂರ್ವಕವಾಗಿ ಹೆಣ್ಣಿನ ಅಭಿಪ್ರಾಯಗಳಿಗೆ ಮಾತುಗಳಿಗೆ ಮೊದಲ ಪ್ರಾಶಸ್ತö್ಯವನ್ನು ನೀಡಿರುವ ಹಿಂದಿರುವ ಕಾರಣವೂ ಅದೇ…ಆಗಿದೆ. ಆದರಂತೆ ಕೌಟುಂಬಿಕ ಬಾಂಧವ್ಯವನ್ನು ಅಷ್ಟೇ ಮುಖ್ಯವಾಗಿ ಪ್ರತಿಪಾದಿಸಲಾಗಿದೆ. ಸದಾಶಿವರಾಯರು ಅವರ ಹೆಂಡತಿ ಮತ್ತು ಮಗಳು ಈ ಮೂವರ ಬಾಂಧವ್ಯವನ್ನು ಕೌಟುಂಬಿಕ ನೆಲೆಯಲ್ಲಿಯೇ ಭಾವನಾತ್ಮಕವಾಗಿ, ಆತ್ಮೀಯವಾಗಿ ಚಿತ್ರಿಸುವ ಜೊತೆಗೆ ಅಲ್ಲಿನ ಮಹಿಳಾ ಪಾತ್ರಗಳ ಮೇಲ್ಮಟ್ಟದ ಸ್ಥಾನವನ್ನು ನಿರ್ದೇಶಕರು ಉಳಿಸಿಕೊಂಡದ್ದು ಗಮನಾರ್ಹ. ಇಲ್ಲಿ ಮಹಿಳಾ ಪಾತ್ರಗಳು ಸಾಂಪ್ರದಾಯಿಕ ನೆಲೆಯನ್ನು ಮೀರಿ ಸಹಜ ಸ್ವಾತಂತ್ರ್ಯದಲ್ಲಿ ವರ್ತಿಸುತ್ತವೆ. ಕೌಟುಂಬಿಕ ಬಾಂಧವ್ಯದ ಪ್ರಾಮುಖ್ಯತೆಯನ್ನು ಅಷ್ಟೇ ಮುಖ್ಯವಾಗಿ ಪ್ರತಿಪಾದಿಸಲಾಗಿದೆ.
‘ಬೆಳ್ಳಿಮೋಡ’ ಸಿನಿಮಾದ ವೈಶಿಷ್ಟ್ಯವಿರುವುದೇ ನಾಯಕಿಯ ವ್ಯಕ್ತಿತ್ವವನ್ನು ನಾಯಕನಿಗಿಂತ ಎತ್ತರದಲ್ಲಿ ತೋರಿಸಲಾಗಿರುವಲ್ಲಿ ಎನ್ನಬಹುದು. ಸಮಕಾಲೀನ ಹಿಂದಿ ಸಿನಿಮಾಗಳು ನಾಯಕನನ್ನು ವೈಭವೀಕರಿಸಿದರೆ ಪುಟ್ಟಣ್ಣ ನಾಯಕಿಯನ್ನು ವೈಭವೀಕರಿಸಿರುವುದು ಗಮನಾರ್ಹ. ಇದಕ್ಕೆ ಕಾದಂಬರಿಯ ಇಂದಿರಾ ಪಾತ್ರದ ಸ್ವರೂಪವೇ ಕಾರಣ. ಕಾದಂಬರಿಯ ಇಂದಿರಾ ಪಾತ್ರಕ್ಕೆ ಸಿನಿಮಾದಲ್ಲಿ ಕಲ್ಪನಾ ಅವರ ಅಭಿನಯದ ಮೂಲಕ ನವಚೈತನ್ಯ ಮೂಡಿದಂತಿದೆ. ಲೇಖಕಿ ಇಂದಿರಾ ಪಾತ್ರಕ್ಕೆ ಕೊಟ್ಟ ಪ್ರಾಮುಖ್ಯತೆ ಸಿನಿಮಾದಲ್ಲೂ ಮೂಡಿದೆ. ಕಾದಂಬರಿಯ ಕೊನೆಯ ಸನ್ನಿವೇಶವಾದ ಇಂದಿರಾ ಮತ್ತು ಮೋಹನನ ಕೊನೆಯ ಸಂಭಾಷಣೆಯ ದೃಶ್ಯ ಸಿನಿಮಾದಲ್ಲಿ ಧ್ವನಿಶಕ್ತಿ ಪಡೆದಿದೆ. ಪರಿಪರಿಯಾಗಿ ಬೇಡಿಕೊಳ್ಳುವ ನಾಯಕನ ಚಿತ್ರ ಹಾಗೂ ಅವನ ಬೇಡಿಕೆಯನ್ನು ಅಷ್ಟೇ ಸಹಜವಾಗಿ ತಿರಸ್ಕರಿಸುವ ನಾಯಕಿಯ ಚಿತ್ರದಲ್ಲಿ ಕಾದಂಬರಿಯ ಸನ್ನಿವೇಶ-ಸಂಭಾಷಣೆಗಳಿಗೆ ಜೀವ ಬಂದಹಾಗೆ ಅನ್ನಿಸುತ್ತದೆ. ಈ ದೃಶ್ಯ ಸಂದರ್ಭದ ಪಾಕೃತಿಕ ಪರಿಸರ ಸನ್ನಿವೇಶದ ಗಾಂಭೀರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗೆ ಪುಟ್ಟಣ್ಣನವರ ಒಳನೋಟದಿಂದಾಗಿ ಕಾದಂಬರಿಗಿಂತಲೂ ಬೇರೆ ಬೇರೆ ಆಯಾಮಗಳನ್ನು ಸಿನಿಮಾ ಬಿಂಬಿಸಿದೆ.
ಕಾದಂಬರಿಯಲ್ಲಿಲ್ಲದ ಕೆಲವು ಪಾತ್ರ, ದೃಶ್ಯಗಳು ಸಿನಿಮಾದಲ್ಲಿವೆ. ಉದಾಹರಣೆಗೆ, ಪಾಪಯ್ಯ-ಸಾವಿತ್ರಿಯರ ಹಾಸ್ಯ ದೃಶ್ಯಗಳನ್ನು ಗಮನಿಸಬಹುದು. ಹಾಸ್ಯ ಸನ್ನಿವೇಶಗಳು ಸಿನಿಮಾಕ್ಕೆ ಹೊಸ ಮೆರುಗು ನೀಡಿವೆ. ಇಂದಿರಾಳ ಕೌಟುಂಬಿಕ ವಿವರಗಳು, ಇಂದಿರಾ ಹಾಗೂ ಕಾಫಿ ತೋಟದ ನಡುವಿನ ಆಪ್ತತೆ, ಇಂದಿರಾ ಜೊತೆಗಿನ ಅವಳ ತಂದೆ ತಾಯಿಯರ ಸಂಬಂಧದ ನಿರೂಪಣೆ, ಇಂದಿರಾಳ ತಂದೆ-ತಾಯಿಯರ ಪ್ರೇಮ ಹಾಗೂ ಜೀವನೋತ್ಸಾಹ ಕಾದಂಬರಿಯಲ್ಲಿ ವಿಸ್ತಾರವಾಗಿ ನಿರೂಪಿತವಾಗಿದೆ. ಸಿನಿಮಾದಲ್ಲಿ ನಿರ್ದೇಶಕರು ಈ ಎಲ್ಲ ಅಂಶಗಳಿಗೂ ಮಹತ್ವವನ್ನು ನೀಡಿ ತೆರೆ ಮೇಲೆ ಮೂಡಿಸಿದ್ದರೂ ಕಾದಂಬರಿಯ ಎಲ್ಲಾ ವಿಸ್ತಾರವಾದ ವಿವರಗಳನ್ನು ಸಿನಿಮಾ ಚೌಕಟ್ಟಿಗೆ ತರಲು ಸಹಜವಾಗಿಯೇ ಸಾಧ್ಯವಾಗಿಲ್ಲ. ಆದರೆ ಸಂದರ್ಭ, ಸನ್ನಿವೇಶಗಳ ಸಂಕ್ಷಿಪ್ತತೆಯಲ್ಲಿಯೇ ಈ ಬಾಂಧವ್ಯಗಳನ್ನು ಪರಿಣಾಮಕಾರಿಯಾಗಿ ತೆರೆ ಕಾಣಿಸಿದ್ದಾರೆ.
ಕಣಗಾಲರು ತಮ್ಮ ಬಹುತೇಕ ಸಿನಿಮಾಗಳಲ್ಲಿ ಪ್ರಕೃತಿಯ ಸೊಬಗನ್ನು ಅನೇಕ ಸನ್ನಿವೇಶ, ಸಂದರ್ಭಗಳಲ್ಲಿ ಪೂರಕವಾಗಿ ಬಳಸಿಕೊಂಡಿದ್ದಾರೆ. ಪ್ರಕೃತಿಯ ಸಹಜ ಸೌಂದರ್ಯ ‘ಬೆಳ್ಳಿಮೋಡ’ ಚಲನಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಚಿಕ್ಕಮಗಳೂರಿನ ಗಿರಿಗಳ ಪರಿಸರ ಸಿನಿಮಾದ ಕಳೆಯನ್ನು ಹೆಚ್ಚಿಸಿದೆ. ಕಾಫಿ ತೋಟ, ‘ಮಿನುಗು ತಾರೆ’ ಮನೆಯ ಪರಿಸರದ ಸಿನಿಮಾ ಚಿತ್ರೀಕರಣ ರಮ್ಯವಾಗಿದೆ. ಮಲೆನಾಡಿನ ಭಾಷೆ, ಊಟೋಪಚಾರ, ಸಂಸ್ಕೃತಿಯನ್ನು ಅಲ್ಲಲ್ಲಿ ಬಿಂಬಿಸಲಾಗಿದೆ. ಪ್ರಕೃತಿಯ ಮಡಿಲಿನಲ್ಲಿ, ಪ್ರಕೃತಿಯಷ್ಟೇ ಸಹಜವಾಗಿ ಬದುಕುತ್ತಿರುವ ಕುಟುಂಬದ ಚಿತ್ರಣ ಸಿನಿಮಾದಲ್ಲಿದೆ. ಪುಟ್ಟಯ್ಯನವರ ಹಾಸ್ಯಭರಿತ ಸಂಭಾಷಣೆಗಳು, ಪಾಪಯ್ಯ ಸಾವಿತ್ರಿಯರ ಹಾಸ್ಯ ದೃಶ್ಯಗಳು, ಇವು ಸಿನಿಮಾ ತನ್ನುದ್ದಕ್ಕೂ ನವಿರು ಹಾಸ್ಯವನ್ನು ಒಳಗೊಳ್ಳಲು ಸಹಕಾರಿಯಾಗಿದೆ, ಚಿತ್ರಕಥೆಗೆ ಜೀವ ತುಂಬಿದೆ.
ಪುಟ್ಟಣ್ಣ ಕಣಗಾಲ್ ‘ಬೆಳ್ಳಿಮೋಡ’ ಸಿನಿಮಾದ ಮೂಲಕ ತೋರಿದ ಇಂತಹ ಹೊಸತನ, ಪ್ರಯೋಗಶೀಲತೆಯೇ ಮುಂದಿನ ಸಿನಿಮಾಗಳಿಗೆ ಮಾರ್ಗದರ್ಶಿಯಾಯಿತು. ಚಲನಚಿತ್ರದ ಅವಿಭಾಜ್ಯ ಅಂಗಗಳಾಗಿ ಚಿತ್ರಗೀತೆಗಳನ್ನು ಅಳವಡಿಸಿಕೊಂಡದ್ದು, ಪ್ರೇಕ್ಷಕರು ಕಣಗಾಲರ ಚಿತ್ರಗೀತೆಗಳಿಗೆ ಮನಸೋತದ್ದು ಮುಂದಿನ ಸಿನಿಮಾಗಳು ಈ ತಂತ್ರವನ್ನು ಬಳಸಿಕೊಂಡು ಪ್ರೇಕ್ಷಕರನ್ನು ಸಿನಿಮಾಗಳತ್ತ ಸೆಳೆಯುವ ತಂತ್ರ ಕಂಡುಕೊಂಡವು. ಪುಟ್ಟಣ್ಣ ಕಣಗಾಲ್ ಚಿತ್ರಕಥೆಯ ನಿರೂಪಣೆಯಲ್ಲಿ ಹಾಡುಗಳಿಗೆ, ಹಿನ್ನೆಲೆ ಸಂಗೀತಕ್ಕೆ ನೀಡುತ್ತಿದ್ದ ಪ್ರಾಧಾನ್ಯತೆ ಅವರ ಸಿನಿಮಾಗಳ ಯಶಸ್ಸಿಗೆ ಒಂದು ಪ್ರಮುಖ ಕಾರಣವೂ ಆಗಿತ್ತು. ಉದಾಹರಣೆಗೆ ಬೆಳ್ಳಿಮೋಡ ಸಿನಿಮಾದ ಹಾಡುಗಳು ಚಿತ್ರಕಥೆಗೆ ಮೆರುಗನ್ನು ನೀಡಿವೆ. ‘ಮೂಡಲ ಮನೆಯ ಮುತ್ತಿನ ನೀರಿನ..’ ಹಾಡಿನಲ್ಲಿ ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ಸೆರೆ ಹಿಡಿಯುವ ಮೂಲಕ ಬೇಂದ್ರೆ ಅವರ ಕವಿತೆಯನ್ನು ಅರ್ಥಪೂರ್ಣಗೊಳಿಸಿದ್ದಾರೆ. ‘ಮುದ್ದಿನ ಗಿಣಿಯೇ ಬಾರೋ..’ ಹಾಡು ಮಮತೆಯ ರೂಪಕವಾದರೆ, ‘ಇದೇ ನನ್ನ ಉತ್ತರ..’, ‘ಬೆಳ್ಳಿ ಮೋಡದ ಅಂಚಿನಿಂದ..’ ಹಾಡುಗಳು ನಾಯಕಿ-ನಾಯಕ ಪ್ರೇಮ-ಪ್ರಣಯಗಳ ರೂಪಕವಾಗಿ ಮೂಡಿವೆ. ‘ಒಡೆಯಿತು ಮನಸಿನ ಕನ್ನಡಿ..’ ಹಾಡು ನಾಯಕಿ ಇಂದಿರಾಳ ವಿರಹವನ್ನು, ಮನಸ್ಸಿಗಾದ ಆಶಾಭಂಗವನ್ನು ಹಿಡಿದಿಡುತ್ತದೆ. ಪಿ.ಬಿ. ಶ್ರೀನಿವಾಸ್, ಪಿ. ಸುಶೀಲ ಹಾಗೂ ಎಸ್. ಜಾನಕಿ ಅವರು ಈ ಮೇಲಿನ ಗೀತೆಗಳನ್ನು ಹಾಡುವ ಮೂಲಕ ಇಂದಿಗೂ ಜನಮನದಲ್ಲಿ ಉಳಿದಿದ್ದಾರೆ.
ಕನ್ನಡ ಸಾಹಿತ್ಯ ಕೃತಿಗಳ ‘ಭಾವೋದ್ರೇಕಿಕರಣ’ ಮಾಡಿದರು ಎನ್ನುವ ಅಪವಾದ ಪುಟ್ಟಣ್ಣ ಕಣಗಾಲ್ ಅವರ ಮೇಲಿದೆ. ಸಿನಿಮಾದಲ್ಲಿ ಕೆಲವು ತೀವ್ರವಾದ ಭಾವಗಳನ್ನು, ದುಃಖದ ಸನ್ನಿವೇಶಗಳನ್ನು ಹಿಡಿದಿಡುವಾಗ ಸಹಜವಾಗಿಯೇ ಭಾವೋದ್ರೇಕ ಆದದ್ದಿದೆ. ಆದರೆ ಕೆಲವೊಮ್ಮೆ ಸನ್ನಿವೇಶಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮೂಡಿಸಲು ಉದ್ದೇಶ ಪೂರ್ವಕವಾಗಿಯೇ ಇದು ಇವರ ಸಿನಿಮಾಗಳಲ್ಲಿ ನಡೆದಿದೆ. ಅದು ಅವರ ನಿರ್ದೇಶನದ ಶೈಲಿ. ಸಿನಿಮಾ ಹಾಗೂ ಕಾದಂಬರಿ ಭಿನ್ನ ಮಾಧ್ಯಮಗಳು, ಅದರ ಜೊತೆಗೆ ಸಿನಿಮಾ ಮಾಧ್ಯಮದ ಸಾಧ್ಯತೆ ಸವಾಲುಗಳೇ ಬೇರೆ. ಹೀಗಾಗಿಯೂ ಈ ಬಗೆಯ ಕೆಲವು ವೈರುಧ್ಯಗಳು ತಲೆದೋರುತ್ತವೆ.
ಪ್ರೇಕ್ಷಕರನ್ನು ಆಕರ್ಷಿಸಲು ಕೆಲವು ತಂತ್ರಗಳನ್ನು ನಿರ್ದೇಶಕ ಬಳಸುವಾಗಲೂ ಇಂಥವುಗಳು ಜರುಗುತ್ತವೆ. ಹಾಗಾಗಿ ಕಾದಂಬರಿಯ ಯಥಾವತ್ತಾದ ಅನುಕರಣೆಯು ಇಲ್ಲಿ ಸಾಧ್ಯವಿಲ್ಲ. ಇದರ ಜೊತೆಗೆ ಸಿನಿಮಾ ಒಂದು ಸಮೂಹ ಸೃಷ್ಟಿ, ಇದರ ಜೊತೆಗೆ ಇಲ್ಲಿ ನಿರ್ದೇಶಕನ ವೈಯುಕ್ತಿಕ ಅಭಿಪ್ರಾಯಗಳು ಹೆಚ್ಚು ಕೆಲಸ ಮಾಡಿರುತ್ತವೆ. ಈ ಭಾವೋದ್ರೇಕಿಕರಣದ ಅಪವಾದವನ್ನು ನಾವು ಇಡಿಯಾಗಿ ಸ್ವೀಕರಿಸುವ ಬದಲು, ಮೇಲೆ ಗಮನಿಸಿದಂತೆ ಸಹಜವಾಗಿ ಮತ್ತು ಉದ್ದೇಶಪೂರ್ವಕವಾಗಿ ಕೆಲವೆಡೆ ಆದದ್ದಿದೆ ಎಂದು ಒಪ್ಪಬಹುದು. ಪುಟ್ಟಣ್ಣನವರು ಸಾಹಿತ್ಯ ಕೃತಿಗಳನ್ನು ಆಧರಿಸಿ ಸಿನಿಮಾ ಮಾಡಿದ್ದರಿಂದ ಸಾಹಿತ್ಯ ಕೃತಿಗಳ ಅರ್ಥವಿಸ್ತಾರ, ಜನಪ್ರಿಯತೆ ಮತ್ತು ಕೃತಿಗಳಿಗೆ ಹೆಚ್ಚಿನ ಮಹತ್ವವೂ ಉಂಟಾಗಿದೆ ಎನ್ನುವುದನ್ನು ಇಲ್ಲಿ ಮುಖ್ಯ ವಿಚಾರವಾಗಿ ಭಾವಿಸಬಹುದು.
ಕೊನೆ ಟಿಪ್ಪಣಿ
೧. ಬಸವೇಗೌಡ, ಡಿ.ಬಿ. (೨೦೧೧). ನಾ ಕಂಡ ಪುಟ್ಟಣ್ಣ ಕಣಗಾಲ್. ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ಪು. ೨೪.
ಪರಾಮರ್ಶನ ಗ್ರಂಥಗಳು
೨. ಪಾರ್ವತಿ, ಎಚ್.ಎಸ್. (ಸಂ.) (೧೯೯೧). ಸುರಗಿ. ಇಳಾ ಪ್ರಕಾಶನ, ಬೆಂಗಳೂರು.
೩. ಪ್ರಶಾAತ ನಾಯಕ, ಜಿ. (೨೦೦೯). ಕನ್ನಡ ಸಿನಿಮಾ ಲೋಕ. ರಚನಾ ಪ್ರಕಾಶನ, ಮೈಸೂರು.
೪. ಪ್ರಸನ್ನ, ಎ.ಎನ್. (೨೦೧೭). ಚಿತ್ರಕಥೆಯ ಸ್ವರೂಪ. ಕಣ್ವ ಪ್ರಕಾಶನ, ಬೆಂಗಳೂರು.
೫. ಬರಗೂರು ರಾಮಚಂದ್ರಪ್ಪ (೨೦೧೬). ಸಿನಿಮಾ ಒಂದು ಜಾನಪದ ಕಲೆ. ಅಂಕಿತ ಪುಸ್ತಕ ಪ್ರಕಾಶನ, ಬೆಂಗಳೂರು.


Comments