top of page

ಮೈ ಲಿಪ್ ಸ್ಟಿಕ್‌ ಈಸ್‌ ರೆಡ್‌, ಡಾರ್ಲಿಂಗ್‌

ಮೂಲ:  My Lipstick is Red Darling by Eka Kurniawan

ಕನ್ನಡಕ್ಕೆ: Mr. Shridhar C R

Assistant Professor of English

Government First Grade College Bellavi,

Tumkur.


ಕೆಂಪು ಲಾಟೀನು ದೀಪದಂತೆ ಉರಿಯುತ್ತಿರುವ ಲಿಪ್‌ ಸ್ಟಿಕ್‌ ಲೇಪಿಸಿದ ಅವಳು ಬೆರಂಡಾ ಬಾರ್‌ ನ ಬಾಗಿಲ ಬಳಿ ಬರುವುದಕ್ಕೂ ಐದು ಪಿಕಪ್ ವ್ಯಾನುಗಳು ಗೇಟಿನ ಮುಂಬಾಗದಲ್ಲಿ ನಿಲ್ಲುವುದಕ್ಕೂ ಸರಿ ಹೋಯಿತು. ಅವುಗಳಿಂದ ಧಡಬಡನೆ ಇಳಿದ ಪೊಲೀಸರು ಬಾರ್‌ ಒಳಗೆ ನುಗ್ಗಿದರು. ಒಳಗಿನಿಂದ ಹೆಂಗಸರ ಆರ್ತನಾದವೂ, ಗಿರಾಕಿಗಳು ದಿಕ್ಕುಗಾಣದೆ ಎಲ್ಲೆಂದರಲ್ಲಿಗೆ ಧಾವಿಸುವ ಸದ್ದೂ ಕೇಳಲಾರಂಭಿಸಿತು. ಮಾಮೂಲಾಗಿ ಇಂತಹ ರೇಡ್‌ ನಡೆದಾಗ ಬಾರ್‌ ಗೆ ಮುಂಚೆಯೇ ವರ್ತಮಾನ ಸಿಗುತ್ತಿತ್ತು; ಹೆಣ್ಣುಮಕ್ಕಳು ಅಡಗಿಕೊಳ್ಳಲು, ಮನೆಗೆ ತೆರಳಲು ಸಮಯ ದೊರೆಯುತ್ತಿತ್ತು. ಲಿಪ್‌ ಸ್ಟಿಕ್‌ ಧರಿಸಿದ್ದ ಮಾರ್ನಿ ಐವರು ಪೇದೆಗಳು ತನ್ನನ್ನು ಸುತ್ತುವರೆದು ಬಂಧಿಸಿ ಟ್ರಕ್‌ ಬಳಿ ಒಯ್ಯುತ್ತಿದ್ದಂತೆ ಕಂಗಾಲಾದಳು.

“ಸಾರ್‌ ನಾನು ಅಂತೋಳಲ್ಲ! ನಂಗೆ ಮದುವೆ ಆಗಿದೆ.” ಆಘಾತದಿಂದ ಚೇತರಿಸಿಕೊಂಡ ಮಾರ್ನಿ ಪ್ರತಿಭಟಿಸಿದಳು.


“ಒಹೋ. ಹಾಗಾದ್ರೆ ನಿನ್ನ ಯಜಮಾನ್ರು ಬಂದು ಬಿಡಿಸ್ಕೋತಾರೆ ಬಿಡು”. ಬಳಿಯಿದ್ದ ಪೋಲೀಸಿನವನು ವ್ಯಂಗ್ಯವಾಡಿದ.

ʼಹಾಳು ರಾತ್ರಿʼ ಅವಳು ಬಯ್ದುಕೊಂಡಳು. ವ್ಯಾನಿನಲ್ಲಿದ್ದ ಪೊಲೀಸರು ಧಂಧೆ ನಿಯಂತ್ರಿಸುವ ಕಾನೂನುಗಳ ಬಗ್ಗೆ ಮಾತಾಡಿಕೊಳ್ಳುತ್ತಿದ್ದರು. ಅವರ ಕಣ್ಣಲ್ಲಿ ಮಾರ್ನಿ ಸಹ ಒಬ್ಬ ಲೈಂಗಿಕ ಕಾರ್ಯಕರ್ತೆ. ಒಂದಾನೊಂದು ಕಾಲದಲ್ಲಿ ಮಾರ್ನಿ ಅದೇ ವೃತ್ತಿಯಲ್ಲಿ ಇದ್ದದ್ದು ನಿಜವಾದರೂ ಅವತ್ತಿನ ರಾತ್ರಿ ಅವಳು ತಾನೊಬ್ಬ ಸೀದಾ ಸಾದಾ ಗೃಹಿಣಿ ಮಾತ್ರ ಎಂದು ಕಣ್ಣು ಮುಚ್ಚಿಕೊಂಡು ಪ್ರಮಾಣ ಮಾಡಲು ತಯಾರಿದ್ದಳು. ನಿಜ, ಅವಳಿಗಿನ್ನೂ ಮಕ್ಕಳಿರಲಿಲ್ಲ ಆದರೆ, ಸಾಕ್ಷಿಗಾಗಿ ಗಂಡ ಒಬ್ಬನಿದ್ದ. ದುರದೃಷ್ಟಕ್ಕೆ ಮಾರ್ನಿ ಎಷ್ಟೇ ಗೋಗರೆದರೂ ಪೊಲೀಸರು ಅವಳ ಮಾತಿಗೆ ಕೇರೇ ಮಾಡಲಿಲ್ಲ. ಅವರು ಕರೆತಂದ ಎಲ್ಲ ವೇಶ್ಯೆಯರೂ ಅದೇ ತರದ ಕಥೆ ಹೇಳುತ್ತಿದ್ದರು.


ಬಾರಿನಲ್ಲಿದ್ದ ಹುಡುಗಿಯರ ಜೊತೆ ಮಾರ್ನಿಯನ್ನೂ ಸ್ಟೇಷನ್ನಿಗೆ ಒಯ್ದು ರಾತ್ರಿಯಿಡೀ ವಿಚಾರಣೆ ನಡೆಸಲಾಯಿತು. ಆ ಹುಡುಗಿಯರಾದರೂ ತಾನು ಅವರ ಗುಂಪಿನವಳಲ್ಲ ಎಂದು ಪೊಲೀಸರಿಗೆ ತಿಳಿಸಬಹುದೇನೋ ಎಂದಾಕೆ ಕೇಳಿ ನೋಡಿದಳು. ಆದರೆ ಅವರೆಲ್ಲ ಹೊಸದಾಗಿ ಕಸುಬಿಗೆ ಸೇರಿದ ಹುಡುಗಿಯರಾಗಿದ್ದರು. ಮಾರ್ನಿ ಬಾರಿನ ಕೆಲಸ ಬಿಟ್ಟು ಮೂರು ವರುಷಗಳಾಗಿದ್ದವು. ಅವಳ ಪರಿಚಯದ ಹಳೆ ಮುಖಗಳು ಒಂದೂ ಕಂಡುಬರಲಿಲ್ಲ. ರಾತ್ರಿ ಒಂದು ಗಂಟೆ ಹೊತ್ತಿಗೆ ಬಾರಿನ ಹತ್ತಿರ ಮಾರ್ನಿ ಯಾಕಾಗಿ ಬಂದಿದ್ದಳು ಎಂದು ಅವರಿಗೆ ಅರ್ಥವಾಗಲಿಲ್ಲ.


ಬೆಳಕು ಹರಿಯಲು ಇನ್ನೇನು ಕೆಲ ಸಮಯವಿದೆ ಅನ್ನುವಾಗ ಮಾರ್ನಿಗೆ ನಿಯಂತ್ರಣದ ಮೇರೆ ಮೀರಿ ಕಣ್ಣೀರು ಹರಿಯಲಾರಂಭಿಸಿತು. ತನ್ನ ಗಂಡ ತಾನು ಮನೆಯಲ್ಲಿ ಇಲ್ಲದಿರುವುದನ್ನು ನೋಡಿ ಎಲ್ಲೆಡೆ ಹುಡುಕುತ್ತಿರಬಹುದು, ದಮ್ಮಯ್ಯ ನನ್ನನ್ನು ಬಿಟ್ಟುಬಿಡಿ ಎಂದು ಅಂಗಲಾಚಿದಳು. “ಸರಿ ಬಿಡಮ್ಮ, ನಿನಗೊಬ್ಬ ಗಂಡ ಇದಾನೆ ಅಂತ ಒಪ್ಪಣ. ಸ್ವಲ್ಪ ಹೊತ್ತಲ್ಲಿ ನಿನ್ನ ಹುಡಕ್ಕೊಂಡು ಇಲ್ಲಿಗೇ ಬರ್ತಾನೆ ಬಿಡು.” ಬಳಿಯಿದ್ದ ಪೋಲೀಸಿನವ ಮೂದಲಿಸಿದ.


“ಅವರಿಗೆ ನಾನು ಇಲ್ಲಿಗೆ ಬಂದಿರೋದು ಗೊತ್ತಿಲ್ಲ ಸಾರ್”‌

“ಓ, ಗಂಡನಿಗೂ ಗೊತ್ತಿಲ್ಲದಂಗೆ ಧಂಧೆ ಮಾಡ್ತೀಯಾ ಅನ್ನು. ಅಹಹಹ”

ಈ ಮಾತು ಮಾರ್ನಿಗೆ ಇನ್ನಿಲ್ಲದಂತೆ ಚುಚ್ಚಿತು. ಈ ಹಾಳು ರಾತ್ರಿ ಯಾವುದೋ ಶಾಪ ತನ್ನ ಬೆನ್ನೇರಿದೆ ಎಂದು ಅವಳಿಗೆ ಬಲವಾಗಿ ಅನಿಸತೊಡಗಿತು. ಆದರೆ ಅದೃಷ್ಟವೋ ಎಂಬಂತೆ ಸಮಾಜ ಸೇವಾ ಸಂಸ್ಥೆಯ ಹೆಂಗಸೊಬ್ಬಳು ಮಾರ್ನಿಯ ಮೇಲಿನ ಕನಿಕರದಿಂದ ಗಂಡ ರೊಹಮತ್‌ ನುರ್ಜಾಮನ್‌ ಗೆ ಕರೆ ಮಾಡಿ ವಿಷಯ ತಿಳಿಸಿದಳು. ಅವನಡನೆ ಮಾತಾಡಿದ ನಂತರ ಮಾರ್ನಿಯನ್ನು ಮನೆಯವರೆಗೆ ಬಿಡುತ್ತೇನೆಂದು ತಿಳಿಸಿದಳು. ಕೃತಜ್ಞತೆಯ ಭಾವದಿಂದ ತುಂಬಿದ ಮಾರ್ನಿ ಲಗುಬಗೆಯಿಂದ ಮುಖಕ್ಕೆ ನೀರೆರಚಿಕೊಂಡಳು. ಬಾರ್‌ ಹುಡುಗಿಯೊಬ್ಬಳಿಂದ ಪಡೆದ ಪೌಡರ್‌ ಲೇಪಿಸಿಕೊಂಡು, ಲಿಪ್‌ ಸ್ಟಿಕ್‌ ಹಚ್ಚಿಕೊಂಡಳು. ಮನೆ ತಲುಪಿ ಪತಿಯನ್ನು ಕಾಣಬೇಕು ಇನ್ನು.

ಆದರೆ, ಸಮಾಜ ಸೇವಾ ಸಂಸ್ಥೆಯ ಹೆಂಗಸು ಮನೆಗೆ ತಲುಪಿಸಿ ಹೊರಟ ನಂತರ ಮಾರ್ನಿ ಲಾಕಪ್ಪಿಗಿಂತ ಘೋರವಾದ ಪರಿಸ್ಥಿತಿ ಎದುರಿಸಬೇಕಾಯ್ತು. ಅವಳ ಬಟ್ಟೆ ಬರೆ, ಸಾಮಾನುಗಳನ್ನೊಳಗೊಂಡ ಸೂಟ್ ಕೇಸು ಅವಳಿಗಾಗಿ ಸೋಫಾದ ಮೇಲೆ ಕಾದಿತ್ತು. ಬಾಗಿಲ ಬಳಿ ನಿಂತ ರೊಹಮತ್‌ ನುರ್ಜಾಮನ್‌ ಕಣ್ಣುಗಳು ಅವಳ ಮುಖವನ್ನು ಅದರಲ್ಲೂ ತುಟಿಯ ಮೇಲಿನ ಕೆಂಪು ಲಿಪ್‌ ಸ್ಟಿಕ್‌ ಅನ್ನು ದುರದುರನೆ ನಿಟ್ಟಿಸುತ್ತಿದ್ದವು. ʼಎಂಥಾ ನಾಚಿಕೆಗೆಟ್ಟ ಹೆಂಗಸುʼ ಎಂಬ ಭಾವ ಅವುಗಳಲ್ಲಿತ್ತು.


“ನಾವು ಡಿವೋರ್ಸ್‌ ತಗೊಂಡು ಬೇರೆಯಾಗೋದು ಒಳ್ಳೇದು” ಒರಟಾಗಿ ಅವನಂದ.

ಮಾರ್ನಿ ಸಮಜಾಯಿಷಿ ನೀಡಲು ಬಾಯಿ ತೆಗೆದಳು. ಆದರೆ ಅವಳಿಗೆ ತನ್ನ ಪರಿಸ್ಥಿತಿ ಹೇಗೆ ವಿವರಿಸಬೇಕೋ ತಿಳಿಯಲಿಲ್ಲ. ರೊಹಮತ್‌ ನುರ್ಜಾಮನ್‌ ಗೆ ಅವಳ ಮಾತು ಕೇಳುವ ತಾಳ್ಮೆಯೂ ಇರಲಿಲ್ಲ.

2

ರೊಹಮತ್‌ ನುರ್ಜಾಮನ್‌ ಗೆ ಯಾವಾಗಲೂ ತನ್ನ ಹೆಂಡತಿಯ ಲಿಪ್‌ ಸ್ಟಿಕ್‌ ಒಂಥರಾ ಇರುಸುಮುರಿಸು ಉಂಟುಮಾಡುತ್ತಿತ್ತು. ಹಾಗೆಂದು ಅದನ್ನು ಹಚ್ಚಿಕೊಳ್ಳಬೇಡ ಎಂದು ಹೇಳುವ ಧೈರ್ಯ ಅವನಿಗೆ ಇರಲಿಲ್ಲ. ಯಾಕಂದರೆ ಆಗವನು ಅದಕ್ಕೆ ಕಾರಣ ಕೊಡಬೇಕಾಗುತ್ತಿತ್ತು, ಮತ್ತು ಮಾರ್ನಿ ಖಂಡಿತವಾಗಿಯೂ ನೊಂದುಕೊಳ್ಳುತ್ತಿದ್ದಳು. “ಲಿಪ್‌ ಸ್ಟಿಕ್‌ ಹಚ್ಚಿಕೊಂಡರೆ ನೀನು ಥೇಟು ಸೂಳೆಯ ಹಾಗೆ ಕಾಣುತ್ತೀ” ಅಂತ ರೊಹಮತ್‌ ಹೇಗೆ ತಾನೇ ಹೇಳಿಯಾನು?


ಸಮಸ್ಯೆ ಏನಂದರೆ, ರೊಹಮತ್‌ ತನ್ನ ಹೆಂಡತಿಯನ್ನು ಮೊದಲ ಬಾರಿ ಭೇಟಿಯಾಗಿದ್ದು ಮಂದ ಬೆಳಕಿನ ಚಿಕ್ಕ ಕೋಣೆಯೊಂದರಲ್ಲಿ. ಆದರೆ ಅದಾಗಿ ಹಲವಾರು ವರುಷಗಳೇ ಕಳೆದಿವೆ. ಇಬ್ಬರೂ ಆ ದಿನಗಳನ್ನೆಲ್ಲ ಮರೆತು ಬದುಕುವ ತೀರ್ಮಾನ ಮಾಡಿದ್ದರು. ಆ ದಿನಗಳಲ್ಲಿ ರೊಹಮತ್‌ ನುರ್ಜಾಮನ್‌ ನ ಸಂಜೆಗಳು ದಾನ್‌ ಮೋಗೊಟ್‌ ಬೀದಿಯ ಉದ್ದಕ್ಕೂ ಹರಡಿಕೊಂಡಿರುವ ಡ್ಯಾಂಡಟ್‌ ಮ್ಯೂಸಿಕ್‌ ಬಾರ್‌ ಗಳಲ್ಲಿ ತನ್ನ ಮೂವರು ದೋಸ್ತಿಗಳೊಂದಿಗೆ ಕಳೆದುಹೋಗುತ್ತಿತ್ತು. ಅಂತಹ ಒಂದು ಬಾರ್‌ ನಲ್ಲಿ ಮಾರ್ನಿಯನ್ನವನು ಮೊದಲು ಕಂಡಿದ್ದ.


ಮೊದಮೊದಲು ಇಬ್ಬರ ಸಂಬಂಧ ಬಾರ್‌ ಗರ್ಲ್‌ ಮತ್ತವಳ ಗಿರಾಕಿಯ ನಡುವಣ ಬೇಟದ ವಿಲಕ್ಷಣ ಭೇಟಿಗಳಿಗಷ್ಟೇ ಸೀಮಿತವಾಗಿತ್ತು. ಎಲ್ಲರಿಗೂ ಗೊತ್ತಿರುವಂತೆ ಇಂತಹ ಜಾಗಗಳಲ್ಲಿ ಹುಡುಗಿಯರು ತಮ್ಮ ತಮ್ಮ ಗ್ರಾಹಕರನ್ನು ಇನ್ನೊಬ್ಬಳು ಸೆಳೆಯದಂತೆ ಜತನದಿಂದ ಕಾಯ್ದುಕೊಳ್ಳುತ್ತಿದ್ದರು. ಯಾಕೆಂದರೆ ಅವರಿಂದ ಬರುವ ಗಳಿಕೆ ಬಾರ್‌ ನ ಪಗಾರಕ್ಕೂ ಮಿಕ್ಕಿಇರುತ್ತಿತ್ತು. ಹಾಗಾಗಿ, ಹೊಸ ಹುಡುಗಿಯರು ಬಂದಾಗ ಅಥವಾ ಯಾರಾದರೊಬ್ಬರ ಮಾಮೂಲಿ ಗಂಡು ಬರದೇ ಇದ್ದಾಗ ತನ್ನ ಕಡೆ ಬರಬೇಕಾದವನನ್ನು ಮತ್ತೊಬ್ಬಳು ಲಪಟಾಯಿಸಿದಳೆಂದು ಜಗಳ ಕಾಯುವುವ ದೃಶ್ಯ ಅಲ್ಲಿ ಸರ್ವೇಸಾಮಾನ್ಯ.


ಬಯಕೆಯ ಬೆನ್ನುಹತ್ತಿ ಬಂದ ರೊಹಮತ್‌ ನಂತಹ ಗಿರಾಕಿಗಳಿಗೆ ಹುಡುಗಿಯರ ಈ ಜಿದ್ದಾಜಿದ್ದಿನಿಂದ ಒಂದು ಲಾಭವಾಗುತ್ತಿತ್ತು. ಬಾರಿಗೆ ಬಂದಾಗೆಲ್ಲ ಒಬ್ಬಳಲ್ಲ ಇನ್ನೊಬ್ಬಳು ಅವನಿಗೆ ತೆಕ್ಕೆಹಾಕಿಕೊಳ್ಳುತ್ತಿದ್ದಳು. ನನ್ನನ್ನು ನಂಬಿ, ಇಂತಹ ಅಡ್ಡೆಗಳಲ್ಲಿ, ಎದುರಿಗೆ ಮತ್ತೇರಿಸುವ ಸಂಗೀತ, ಟೇಬಲ್ಲಿನ ಮೇಲೆ ಬಿಯರ್‌ ಇರುವಾಗ ಪಕ್ಕದಲ್ಲಿ ಕಂಪನಿಗೆ ಈ ಗಂಡಸರಿಗೆ ಒಬ್ಬ ಹುಡುಗಿಯೂ ಸಿಗಲಿಲ್ಲ ಅಂದರೆ ಕಷ್ಟಕ್ಕೆ ಬರುತ್ತಿತ್ತು.


ಸಮಾಚಾರ ಹೀಗಿರುತ್ತ, ರೊಹಮತ್‌ ನುರ್ಜಾಮನ್‌ ಬಾರ್‌ ಬೆರಾಂಡಕ್ಕೆ ಆಗಮಿಸಿದಾಗೆಲ್ಲ ಅವನ ಆತಿಥ್ಯದ ಹೊಣೆ ಮಾರ್ನಿ ವಹಿಸಿಕೊಳ್ಳುತ್ತಿದ್ದಳು. ಬೆರಾಂಡಕ್ಕೆ ರೊಹಮತ್‌ ಬಂದಾಗ ಅವರಿಬ್ಬರೂ ಬೇಟಿಯಾಗದ ದಿನಗಳನ್ನು ಈ ಕೈಯ ಬೆರಳುಗಳಲ್ಲಿ ಎಣಿಸಬಹುದೇನೋ- ಒಂದು ಸಾರಿ ಅದವಳ ವಾರದ ರಜಾ ದಿನವಾಗಿತ್ತು, ಇನ್ನೊಮ್ಮೆ ಮೈ ಸರಿ ಇರಲಿಲ್ಲ, ಮತ್ತೊಮ್ಮೆ ಅವಳು ತನ್ನೂರು ಬಾನ್ಯುಮಾಸ್‌ಗೆ ತೆರಳಿದ್ದಳು.


ಇಬ್ಬರ ಸಂಬಂಧ ಆರಂಭದಲ್ಲಿ ಮಾಮೂಲಾಗಿ ಇದ್ದದ್ದು ರಾತ್ರಿಗಳು ಉರುಳಿದಂತೆ ಆಳವಾಗುತ್ತ ಆಗುತ್ತ ನಿರಂತರ ಹಂಬಲ, ಕಾತರದ ಭಾವಗಳನ್ನು ಮೀಟಲಾರಂಭಸಿತು.  ಒಂದು ಭಣಭಣ ಮಧ್ಯಾಹ್ನ ರೊಹಮತ್‌ನಿಂದ ಮಾರ್ನಿಗೆ ಬಂದ ಮೆಸೇಜು ಹೀಗಿತ್ತು: “ಏನು ಮಾಡ್ತಾ ಇದ್ದೀಯ? ಇವತ್ತು ಯಾರ ಜೊತೆಗೂ ಹೋಗ್ಬೇಡ, ನಾನು ಬರ್ತಿದ್ದೀನಿ”

ಮುಂದೆ, ಒಂದು ಮುಂಜಾನೆ, ರೊಹಮತ್‌ ನ ಫೋನಿನಲ್ಲಿ ಮಾರ್ನಿಯ ಮೆಸೇಜು ಕುಳಿತಿತ್ತು: “ಇವತ್ತು ಸಂಜೆ ಮೇಲೆ ಬರ್ತೀಯ ತಾನೆ? ಐ ಮಿಸ್‌ ಯೂ”

ಇದಾಗಿ ಹಲ ಕಾಲ ಸರಿದ ಮೇಲೆ ರೊಹಮತ್‌ ನುರ್ಜಾಮನ್‌ ಕೊನೆಗೂ ಮಾರ್ನಿಯನ್ನು ಬಾರ್ ಬೆರಾಂಡದ ಆಚೆಗೆ ಕರೆದೊಯ್ದು ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡ. ಜೋಡಿಗಳು ಬಾನ್ಯುಮಾಸದ ಕಾಡುಮೂಲೆಯಲ್ಲಿರುವ ಮಾರ್ನಿಯ ಹಳ್ಳಿ ತಲುಪಿದರು. ಅಲ್ಲಿ, ಮಾರ್ನಿಯ ಪರಿವಾರ ಮತ್ತು ರೊಹಮತನ ಮೂವರು ಗೆಳೆಯರ ಸಮಕ್ಷಮದಲ್ಲಿ ಇಬ್ಬರ ವಿವಾಹ ಸಂಪನ್ನಗೊಂಡಿತು. ಮರಳಿ ಬಂದು ಜಕಾರ್ತಾದ ಹೊರಗಿನ ಒಂದು ಪುಟಾಣಿ ಮನೆಯಲ್ಲಿ ಇಬ್ಬರೂ ಸಂಸಾರ ಶುರು ಮಾಡಿದರು.


ಈ ಮದುವೆಯ ಬಂಧವನ್ನು ನಿಭಾಯಿಸುವುದು ಸುಲಭವಾಗಿರಲಿಲ್ಲ. ಶುರುವಾತಿಗೆ ತನ್ನ ಮಡದಿಯನ್ನು ಬೇರೆ ಗಂಡಸರು ಬೆರಾಂಡಾ ಬಾರ್‌ ನ ಕತ್ತಲೆ ಕೋಣೆಗೆ ಕರೆದೊಯ್ಯುವ ದುಸ್ವಪ್ನಗಳು ರೊಹಮತ್‌ನ ರಾತ್ರಿಗಳನ್ನು ಕದಡಿಬಿಡುತ್ತಿದ್ದವು. ಆ ಸ್ವಪ್ನಗಳು ಒಂದು ಕಾಲದ ನಿಜವೇ ಆಗಿದ್ದರಿಂದ ಹೊಟ್ಟೆಕಿಚ್ಚಿನ ರೊಚ್ಚಿನಲ್ಲವನು ಧಿಗ್ಗನೇಳುತ್ತಿದ್ದ. ಇನ್ನೊಂದೆಡೆ ಮಾರ್ನಿಗೆ ತನ್ನ ಗಂಡ ಬೆರಾಂಡಾದಲ್ಲಿ ಬೇರೆ ಹುಡುಗಿಯರ ಜೊತೆ ಮಲಗುವ ಕಲ್ಪನೆಗಳು ಮನಸ್ಸನ್ನು ತುಂಬಿಕೊಂಡು ಕಾಡಲಾರಂಭಿಸಿದವು. ಅದೂ ಸಹ ಮದುವೆಗೆ ಮೊದಲು ಇಬ್ಬರಿಗೂ ಗೊತ್ತಿದ್ದ ಸಂಗತಿಯೇ ಆಗಿತ್ತು.


ಅಸೂಯೆ, ಅನುಮಾನಗಳಿಂದ ಇಬ್ಬರ ನಡುವೆ ದುಸುಮುಸು, ಜಗಳ ಹೆಚ್ಚುತ್ತಾ ನಡೆಯಿತು. ಅವರ ಪ್ರೀತಿಯೊಂದೇ ಈ ಪರಿಸ್ಥಿತಿಯನ್ನು ತಿಳಿಗೊಳಿಸಲು ಸಮರ್ಥವಾಗಿದ್ದದ್ದು. ಒಂದು ಒಳ್ಳೆಯ ದಿನ, ಮದುವೆಯಾದ ಹದಿನೇಳನೇ ತಿಂಗಳಲ್ಲಿ, ಇನ್ಯಾವತ್ತೂ ತಮ್ಮ ಹಿಂದಿನ ಬಾಳುವೆಯ ಕುರಿತು ನೆನಪಿಸಿಕೊಳ್ಳುವುದಾಗಲೀ, ಅದಕ್ಕಾಗಿ ಇನ್ನೊಬ್ಬರನ್ನು ಅನುಮಾನದಿಂದ ನೋಡುವುದಾಗಲೀ ಮಾಡಲಾರೆವು ಎಂದು ಇಬ್ಬರೂ ಆಣೆ ಮಾಡಿಕೊಂಡರು. ಅದಾದ ಮೇಲೆ ಅವರ ಸಂಸಾರ ನಾವೆ ಸುಲಲಿತವಾಗಿ ಮುಂದೆ ಸರಿಯತೊಡಗಿತು.

ಒಂದೇ ಒಂದು ಸಮಸ್ಯೆ ಇದ್ದದ್ದು ಮಾರ್ನಿಯ ಲಿಪ್‌ ಸ್ಟಿಕ್‌ ನಲ್ಲಿ.

 

3

ಮಾರ್ನಿಗೆ ಲಿಪ್‌ ಸ್ಟಿಕ್‌ ಹಚ್ಚಲು ಕಲಿಸಿದ್ದು ಬೆರಾಂಡಾ ಬಾರ್‌ ನ ಹಿರೀ ಹುಡುಗಿ ಮರಿದಾ. ಬಾನ್ಯುಮಾಸದ ಆಸುಪಾಸಿನಲ್ಲಿ ಇದ್ದ, ಮ್ಯಾಪಿನಲ್ಲೂ ಕಂಡುಬರದ ಪುಟಾಣಿ ಊರು ಚಿಬೋಲಾಂಗ್‌ ನಿಂದ ಮಾರ್ನಿಯನ್ನು ಕರೆತಂದವಳೇ ಅವಳು. ಅವಳಂತೆಯೇ ಎಷ್ಟೋ ಜನ ಹೆಣ್ಣುಮಕ್ಕಳು ಮರಿದಾಳ ಜೊತೆ ಜಕಾರ್ತಾಗೆ ಬಂದಿದ್ದರು. ಶುರುವಿಂದಲೂ ಅವರಿಗೆ ತಾವು ಬೆರಾಂಡಾ ತರದ ಬಾರ್‌ನಲ್ಲಿ ದುಡಿಯಲಿದ್ದೇವೆ ಅನ್ನುವುದು ತಿಳಿದಿರುತ್ತಿತ್ತು. ಆದರೆ ಮರಿದಾ ಅವರಿಗೆ ಧೈರ್ಯ ಕೊಡುತ್ತಿದ್ದಳು “ನೀವ್ಯಾರೂ ಅಲ್ಲಿ ಮೈ ಮಾರಬೇಕಾಗಿಲ್ಲ. ಬಂದವರಿಗೆ ಬಿಯರ್‌ ಸುರಿದು ಕೊಟ್ಟರೆ ಸಾಕು”

ಮತ್ತವಳ ಮಾತು ಸತ್ಯ ಕೂಡ, ಆದರೆ ಕೆಲವು ಸಮಯದವರೆಗೆ ಮಾತ್ರ. ಗಂಡು ಗಿರಾಕಿಗಳಿಗೆ ಬಿಯರ್‌ ಸುರಿದುಕೊಟ್ಟರೆ ಸಮಾಧಾನವಾಗುತ್ತಿರಲಿಲ್ಲ. ತಾವದನ್ನು ಹೀರುವಾಗ ಈ ಹುಡುಗಿಯರು ಪಕ್ಕದಲ್ಲಿರಬೇಕು ಎಂದವರು ಬಯಸುತ್ತಿದ್ದರು. “ಸುಮ್ಮನೆ ಕಂಪನಿ ಕೊಡಿ ಅಷ್ಟೆ” ಮರಿದಾ ಉಲಿಯುತ್ತಿದ್ದಳು. ಹಾಗಾಗಿ ಮಾರ್ನಿ ಅವರ ಜೊತೆ ಕೂತಳು, ಬಿಯ್‌ ಹೀರುತ್ತ, ಏನಾದರೂ ಮೆಲ್ಲುತ್ತ ಮಾತುಕತೆಯಲ್ಲೂ ಹೂಂಗುಟ್ಟಿದಳು. ಸಮಯ ಸರಿಯುತ್ತಾ ಬಂದಂತೆ ಗಿರಾಕಿಗಳ ಕೈಗಳು ಸುಮ್ಮನಿದ್ದರೆ ಅಡ್ಡಿಯಿಲ್ಲ, ಆದರೆ ಬಹಳ ಹೊತ್ತು ಆ ಕೈಬೆರಳುಗಳಿಗೆ ಸುಮ್ಮನಿರಲು ಆಗುತ್ತಿರಲಿಲ್ಲ. ಮೊದಲಿಗೆ ಅವಳ ಹಿಂಗೈಯನ್ನು ಅವು ಸುಮ್ಮನೆ ಸವರುವವು. ಬಹುಬೇಗ ಆ ಬೆರಳುಗಳು ಎಲ್ಲ ಕಡೆ ಹರಿದಾಡಲು ಆರಂಭಿಸುತ್ತಿದ್ದವು.


ಮೆಲ್ಲಗೆ ಈ ಮಾರ್ಗದಲ್ಲಿ ಹೆಚ್ಚು ಗಳಿಸಬಹುದು ಎಂದವಳಿಗೆ ಅರಿವಾಯಿತು. ಅವರಿಗೆ ಸೆರಗು ಹಾಸಿದರೆ ಇನ್ನೂ ಹೆಚ್ಚು ಕಾಸು ಮಾಡಬಹುದು ಎನ್ನುವುದೂ ತಿಳಿಯಿತು. ಬಂದ ಐದು ತಿಂಗಳಲ್ಲಿ ಮಾರ್ನಿ ತನ್ನ ಕನ್ಯತ್ವ ಕಳಕೊಂಡಳು. ಬದುಕು ಒಂದು ರಾತ್ರಿಯಿಂದ ಇನ್ನೊಂದು ರಾತ್ರಿಗೆ ಕಾಲಿಡುತ್ತ ಸುಮ್ಮನೆ ಸಾಗುತ್ತಿತ್ತು, ರೊಹಮತನ ಭೇಟಿಯಾಗುವವರೆಗೂ.

ನಿಜ ಹೇಳಬೇಕೆಂದರೆ ಸುಮಾರು ವಿಷಯಗಳಲ್ಲಿ ರೊಹಮತ ಉಳಿದ ಗಂಡುಗಳಿಗಿಂತ ಬೇರೆಯೇನು ಆಗಿರಲಿಲ್ಲ. ಎಲ್ಲರಿಗೂ ಬೇಕಾಗಿದ್ದುದು ಒಂದೆ. ಕೆಲವೊಮ್ಮೆ ಅವ ದುಡ್ಡು ಸಹ ಕಡಿಮೆ ಕೊಡುತ್ತಿದ್ದ. ಆದರೆ ಅವನ ಒಂದಷ್ಟು ಗುಣಗಳು ಮಾರ್ನಿಗೆ ಹಿಡಿಸುತ್ತಿದ್ದವು. ಉಳಿದವು ಬೆಳಗ್ಗೆ ಐದರ ಸುಮಾರಿಗೆ ಅವಳನ್ನು ಬಾರಿನ ಮೇಗಣ ಕೋಣೆಗೆ ಒಯ್ದು ಬಟ್ಟೆ ಬಿಚ್ಚುವ ಜಲ್ದಿಯಲ್ಲಿರುತ್ತಿದ್ದವು. ರೊಹಮತ್‌ ಮಾತ್ರ ಅವಳ ಜೊತೆ ಯಾವುದಾದರೂ ಲಾಡ್ಜಿಗೆ ನಡೆಯುತ್ತಿದ್ದ. ಅದರಿಂದಾಗಿ ಮಾರ್ನಿ ತನ್ನ ಸಂಪಾದನೆಯಲ್ಲಿ ಬಾರ್‌ ಯಜಮಾನನಿಗೆ ಪಾಲು ಕೊಡುವುದು ತಪ್ಪುತ್ತಿತ್ತು. ಅಷ್ಟೇ ಅಲ್ಲ, ಲಾಡ್ಜ್ ಸೇರಿದ ಮೇಲೆ ಇಬ್ಬರಿಗೂ ಯಾವುದಕ್ಕೂ ಗಡಿಬಿಡಿ ಮಾಡಬೇಕೆಂದು ಅನಿಸುತ್ತಿರಲಿಲ್ಲ. ಆರಾಮಾಗಿ ಅಂದಿನ ಮಧ್ಯಾಹ್ನದವರೆಗೆ ಅವರಲ್ಲಿ ಕಾಲಕಳೆಯಬಹುದಿತ್ತು. ಆಮೇಲೆ ಅಲ್ಲಿಂದ ಹೊರಬಿದ್ದು ತಿಂಡಿ ತಿನ್ನಲು ಒಳ್ಳೆಯ ಹೊಟೆಲೊಂದಕ್ಕೆ ಸಾಗುವರು. ಇದು ಮಾಮೂಲಿಯಾದಂತೆ ಇಬ್ಬರಲ್ಲೂ ಪ್ರೀತಿ ಅಂಕುರಗೊಂಡಿತು.


ಈ ಕಥೆಯ ಪ್ರತಿ ವಿವರವೂ ರೊಹಮತನಿಗೆ ಎಳೆ ಎಳೆಯಾಗಿ ನೆನಪಿದೆ. ಆದರೆ, ಮದುವೆಯಾಗಿ ಮೂರು ವರ್ಷಗಳು ಕಳೆದರೂ ಒಂದು ಸಂಗತಿ ಮಾತ್ರ ಅವನ ಕಣ್ಣಿನ ಕಿಸುರಾಗಿ ಉಳಕೊಂಡಿತು. ಅದು ಮಾರ್ನಿಯ ಲಿಪ್‌ ಸ್ಟಿಕ್. ಬೆರಾಂಡಾ ಬಾರ್‌ ನ ಮಂದ ಬೆಳಕಿನಲ್ಲಿ ಅವ ಹಿಂದೆ ಕಾಣುತ್ತಿದ್ದಂತಹುದೇ ಬಣ್ಣದ ತುಟಿಯ ರಂಗು. ಮದುವೆಯ ಸಂದರ್ಭದಲ್ಲಿ ಇಬ್ಬರೂ ಬಾರ್‌ ಗರ್ಲ್‌ ಮತ್ತವಳ ಗಿರಾಕಿಯ ಪಾತ್ರಗಳನ್ನು ಪೂರ್ತಿಯಾಗಿ ಕಿತ್ತೊಗೆದು ಗಂಡ ಹೆಂಡಿರಾಗಿ ಬದುಕು ನಡೆಸುವ ಶಪಥ ಮಾಡಿದ್ದರು. ಆದರೆ ಮಾರ್ನಿಯ ಲಿಪ್‌ ಸ್ಟಿಕ್‌ ಮಾತ್ರ ಹಾಗೇ ಉಳಿದು ಬಂದಿತ್ತು. ರೊಹಮತ್‌ ಅವಳಿಗೆ ಖಡಾಖಡಿಯಾಗಿ ಲಿಪ್‌ ಸ್ಟಿಕ್‌ ಹಚ್ಚಬೇಡೆಂದು ಹೇಳಬೇಕೆಂದುಕೊಂಡ. ಆದರೆ ಆ ಮಾತು ಅವರನ್ನು ಮತ್ತೆ ಹಿಂದಿನ ಬದುಕಿನ ನೆನಪುಗಳಿಗೆ ಒಯ್ಯುವುದು ಅವನಿಗಿಷ್ಟವಿರಲಿಲ್ಲ. ಬೆಳಗೂ, ರಾತ್ರೆ ಆ ಲಿಪ್‌ ಸ್ಟಿಕ್‌ ಅವನನ್ನು ಹೆಚ್ಚು ಹೆಚ್ಚು ಕಾಡತೊಡಗಿತು. ಕಡೆಗಂತೂ ತಾನು ಕೆಲಸಕ್ಕೆ ಹೋದಾಗ ಇವಳೇನು ಮಾಡುತ್ತಿರಬಹುದು ಅನ್ನುವ ಅನುಮಾನ ತಲೆಯನ್ನು ಹೊಕ್ಕಿ ಕುಳಿತುಕೊಂಡಿತು.

ಅನುಮಾನವೇನೋ ಬಂತು, ಆದರೆ ಅದನ್ನು ಸಾಬೀತು ಮಾಡಲು ಯಾವ ಆಧಾರವೂ ಇರಲಿಲ್ಲ. ಕೆಲವೊಮ್ಮೆ ರೊಹಮತ್‌ ಮುಂಚಿತವಾಗಿಯೇ ಅಚಾನಕ್ಕಾಗಿ ಮನೆಗೆ ಬರುವನು. ಪ್ರತಿ ಬಾರಿಯೂ ಅವಳು ಮನೆಯಲ್ಲೇ ಇರುವಳು, ಅವನಿಗಾಗಿ ಕಾಯುತ್ತ. ಒಂದು ಮುಂಜಾನೆ ಮಾತ್ರ ಸೇವಾ ಸಂಸ್ಥೆಯ ಹೆಂಗಸೊಬ್ಬಳ ಕರೆ ಬಂತು. ಕಡೆಗೂ ಅವಳನ್ನು ಶಿಕ್ಷಿಸಲು ಬೇಕಾದ ಪುರಾವೆ ದೊರೆತಂತೆನಿಸಿ ರೊಹಮತ್ ಒಂದೇ ವಾಕ್ಯದಲ್ಲಿ ತನ್ನ ಒರಟು ದನಿಯಲ್ಲಿ ಅವಳ ಮೇಲೆ ತೀರ್ಪು ಘೋಷಿಸಿದ್ದ.

“ನಾವು ಡಿವೋರ್ಸ್‌ ತಗೊಂಡು ಬೇರೆಯಾಗೋದು ಒಳ್ಳೇದು”

 

4

ಬಾರ್‌ ಬೆರಾಂಡಾ ಹೊರತಾಗಿ ಮಾರ್ನಿಗೆ ಆಶ್ರಯಕ್ಕೆ ಇನ್ನೊಂದು ತಾವಿರಲಿಲ್ಲ. ಬಾರ್‌ ಓನರ್‌ ಗೆ ಅವಳ ನೆನಪಿತ್ತು. ಮತ್ತೆ ಹಳೆಯ ಕೆಲಸಕ್ಕೆ ಆಕೆ ಮರಳಿದಳು.

ಆದರೆ ಅವಳಿಗೆ ರೊಹಮತನ ನೆನಪುಗಳು ಬಿಟ್ಟೂಬಿಡದೆ ಕಾಡಲಾರಂಭಿಸಿದವು. ಗಿರಾಕಿಯ ಜೊತೆಗಿರುವಾಗಲೇ ತಾವು ಏನೆಲ್ಲ ಹರಟುತ್ತಿದ್ದೆವು ಎಂದು ಜ್ಞಾಪಿಸಿಕೊಳ್ಳುವಳು. ಅವ ಹೇಳಿದ್ದರಲ್ಲಿ ಮುಕ್ಕಾಲು ಮೂರು ಪಾಲು ಮಾತಿನ ತಲೆಬುಡ ಅವಳಿಗೆ ತಿಳಿಯುತ್ತಿರಲಿಲ್ಲ. ಆದರೂ ಅವನ ದನಿ ಕೇಳುವುದರಲ್ಲಿ ಒಂದು ತೆರನ ಖುಷಿಯಿರುತ್ತಿತ್ತು. ರೊಹಮತನಿಗೂ ಅದು ಗೊತ್ತಿತ್ತು. ಅವನೊಮ್ಮೆ ಅಂದಿದ್ದ “ಎಷ್ಟೋ ಹೆಂಗಸರು ಬರೀ ಮಾತಾಡುತ್ತಾರೆ, ನಾನು ಹಿಂದೆ ಮೆಚ್ಚಿದ ಹುಡುಗಿಯರನ್ನೂ ಸೇರಿ. ಆದರೆ ಅರ್ಥ ಮಾಡಿಕೊಂಡವರು ಒಬ್ಬರೂ ಇಲ್ಲ”

ಅವಳು ಈ ಮಾತನ್ನು ಒಂದು ಹೊಗಳಿಕೆಯಾಗಿ ಸ್ವೀಕರಿಸಿದ್ದಳು. ರೊಹಮತ್ ತಾನವಳನ್ನು ಪ್ರೀತಿಸುತ್ತಿದ್ದೇನೆ ಎಂದ ಗಳಿಗೆ ಅವಳ ಬದುಕಿನ ಪರಮಾನಂದದ ಉತ್ತುಂಗ ಕ್ಷಣವಾಗಿತ್ತು.


ಅಂದಿನಿಂದ ಅವಳು ರೊಹಮತ್‌ ಬರುತ್ತಾನೆಂದು ತಿಳಿದಾಗೆಲ್ಲ ಮೇಕಪ್‌ ಮಾಡಿಕೊಂಡು ತಯಾರಾಗಿರುತ್ತಿದ್ದಳು. ಲಿಪ್‌ ಸ್ಟಿಕ್‌ ನಿಂದ ಚಂದಗೊಂಡ ತುಟಿಯಿಂದ ಒಂದು ತಾಜಾ ನಗುವಿನ ಹೊರತಾಗಿ ತನ್ನ ಇನಿಯನಿಗೆ ಇನ್ನೇನು ತಾನೇ ಕೊಡಬಲ್ಲೆ ಎಂದವಳಿಗೆ ಗಾಢವಾಗಿ ಅನಿಸುತ್ತಿತ್ತು.


ಆದರೆ ಮದುವೆಯಾಗಿ ಮೂರು ವಸಂತಗಳ ಹಾದಿಯಲ್ಲಿ ಮಾರ್ನಿಗೆ ಗಂಡನಲ್ಲಿ ಹಲವಾರು ಮಾರ್ಪಾಡುಗಳು ಗೋಚರಿಸತೊಡಗಿದವು. ರೊಹಮತ್ ಆಗಾಗ ತಡವಾಗಿ ಮನೆಗೆ ಬರಲಾರಂಭಿಸಿದ್ದ. ಕೂಡುವಿಕೆಯಲ್ಲಿ ಮೊದಲಿನ ಉನ್ಮತ್ತ ತೀವ್ರತೆ ಉಳಿದಿರಲಿಲ್ಲ. ʼಬಹುಶಃ ನಾನೀಗ ಮೊದಲಷ್ಟು ಚಂದ ಕಾಣುತ್ತಿಲ್ಲವೇನೋʼ ಅವಳು ಯೋಚಿಸಿದಳು. ʼಬಹುಶಃ ನಮಗೆ ಮಕ್ಕಳಾಗದೇ ಇರುವುದರಿಂದ ಹೀಗೆ ಆಗುತ್ತಿರಬಹುದುʼಎಂದೂ ಅಂದುಕೊಂಡಳು. ಅಥವಾ... ರೊಹಮತ್‌ ಮತ್ತೆ ಬಾರ್‌ ಬೆರಾಂಡಾಗೆ ಹೋಗುತ್ತಿರಬಹುದು, ಅಲ್ಲಿ ಚಂದದ ಹುಡುಗಿಯೊಬ್ಬಳ ಬಲೆಗೆ ಬಿದ್ದಿರಬಹುದು. ಬಹುಶಃ ಆ ಹುಡುಗಿ ಹರೆಯದವಳಾಗಿದ್ದು ಮಿರ ಮಿರ ಮಿರುಗುವ ಲಿಪ್‌ ಸ್ಟಿಕ್‌ ಹಚ್ಚುತ್ತಿರಬಹುದು. ಯೋಚಿಸಿದಂತೆ ಮಾರ್ನಿಯ ಮುಖ ಬಿಸಿಯೇರಿತು. ಆ ಅನುಮಾನವನ್ನು ತಲೆಯಿಂದ ತೊಲಗಿಸಲು ಪ್ರಯತ್ನಿಸಿದಳು.  ಆದರೆ ಒಂದು ದಿನ, ಸಂಜೆ ಕಳೆದು ನಡುರಾತ್ರಿ ಮೀರಿದರೂ ಗಂಡನ ಸುಳಿವು ಕಾಣದಿರಲು ತಲೆಯಲ್ಲಿ ಸಾವಿರ ಪ್ರಶ್ನೆಗಳು, ಭಯಗಳು ನರ್ತಿಸಲಾರಂಭಿಸಿದವು. ಕಡೆಗೆ ತಡೆಯಲಾರದೆ ಮಾರ್ನಿ ಹೊರ ಹೋಗಿ ನೋಡಿಕೊಂಡು ಬರಲು ತೀರ್ಮಾನಿಸಿದಳು.


ಮಾರ್ನಿ ತುಟಿಯುದ್ದಕ್ಕೂ ಲಿಪ್‌ ಸ್ಟಿಕ್‌ ಲೇಪಿಸಿದಳು. ಅದರ ಬಲದಿಂದ ರೊಹಮತ್‌ ಮತ್ತೆ ತನ್ನೆಡೆಗೆ ಬರುವ ಅನ್ನುವ ನಂಬಿಕೆ ಅವಳಿಗೆ. ಟ್ಯಾಕ್ಸಿಯೊಂದನ್ನು ಕರೆದು ನೇರ ಬಾರ್‌ ಬೆರಾಂಡಾಗೆ ನಡೆಯಲು ಆಜ್ಞಾಪಿಸಿದಳು. ಬಾರಿನೆದುರು ಇಳಿದೊಡನೆಯೇ, ದಂಧೆ ಮಾಡುವವಳೆಂದು ಪೊಲೀಸರು ಅವಳನ್ನು ಎಳೆದೊಯ್ದಿದ್ದರು. ನಿಜ ಹೇಳಬೇಕೆಂದರೆ, ತನ್ನ ಗಂಡ ಬಾರಿನಲ್ಲಿ ಬೇರೆ ಹುಡುಗೆಯರ ಜೊತೆ ಮಲಗುತ್ತಾನೆಂದು ಅನುಮಾನಿಸಿದ್ದಕ್ಕೆ ತನಗೆ ಸಿಕ್ಕ ಶಿಕ್ಷೆ ಇದು ಎಂದವಳಿಗೆ ಅನಿಸಲಾರಂಭಿಸಿತು. ಆ ದುಷ್ಕಲ್ಪನೆಗಳಿಂದ ಶುರುವಾದ ಹಾಳು ರಾತ್ರಿಯ ಬಗ್ಗೆ ಎಣಿಸಿದಾಗೆಲ್ಲ ಮಾರ್ನಿಗೆ ವಿಪರೀತ ವ್ಯಥೆ ಮನಸ್ಸನ್ನು ತುಂಬುತ್ತಿತ್ತು.


ಈಗಲೂ, ಬಾರಿನಲ್ಲಿ ದುಡಿಯುತ್ತ, ಮಾರ್ನಿಗೆ ಅನಿಸುತ್ತದೆ; ಒಂದು ರಾತ್ರಿ ರೊಹಮತ್‌ ಬರುವ. ಮತ್ತೆ ಎಲ್ಲ ಮೊದಲಿನಂತೆ ಆಗುತ್ತದೆ, ಇರುತ್ತದೆ. ಕಾಯುವಷ್ಟು ಕಾಲವೂ ಮಾರ್ನಿ ತನಗೆ ತಾನೇ ಕೊಟ್ಟುಕಂಡ ಮಾತನ್ನು ಉಳಿಸಿಕೊಂಡಳು. ಲಿಪ್‌ ಸ್ಟಿಕ್‌ ಹಚ್ಚುವುದನ್ನು ಬಿಟ್ಟುಬಿಟ್ಟಳು. ಒಂದು ದಿನ ಹೊಸದಾಗಿ ಬಾರಿಗೆ ಬಂದಿದ್ದ ಹನ್ನೆರಡರ ಹುಡುಗಿಯೊಂದು ಕಾರಣ ಕೇಳಿತು. ಮಾರ್ನಿ ಉತ್ತರಿಸಿದಳು:

“ಮೈ ಲಿಪ್‌ ಸ್ಟಿಕ್‌ ಈಸ್‌ ರೆಡ್‌, ಡಾರ್ಲಿಂಗ್. ‌ ಮತ್ತದು ನನ್ನ ಗಂಡನಿಗಾಗಿ ಮಾತ್ರ”

ಅವಳಂದಂತೆ, ರೊಹಮತ್‌ ನುರ್ಜಾಮನ್‌ ನ ಮೇಲೆ ಪ್ರೀತಿ ಹುಟ್ಟಿದಾಗಿನಿಂದ, ಅವನ ಕೈಹಿಡಿದಾಗಿನಿಂದ, ಅವಳ ತುಟಿಯ ರಂಗು ಬೇರೆ ಯಾವ ಗಂಡಸಿಗಾಗಿಯೂ ಹಚ್ಚಲ್ಪಟ್ಟಿರಲಿಲ್ಲ.

bottom of page