ಮಮತೆಯ ಸುಳಿ ‘ಮಂಥರೆ’
- poorna drishti
- Feb 4
- 2 min read
ಡಾ. ಮಹೇಂದ್ರ ಟಿ. ಎಂ
ಪಿ.ಡಿ.ಎಫ್ ಸಂಶೋಧನಾರ್ಥಿ
ಕನ್ನಡ ಭಾರತಿ ವಿಭಾಗ
ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ
ರಾಮಾಯಣದ ಕರುಣಾಜನಕ ಕತೆಗೆ ಕಾರಣೀಭೂತಳಾದ ಪಾತ್ರ ಮಂಥರೆ. ವಾಲ್ಮೀಕಿ ರಾಮಾಯಣಗಳನ್ನೊಳಗೊಂಡAತೆ ಎಲ್ಲಾ ರಾಮಾಯಣಗಳಲ್ಲೂ ಕೈಕೆಯಂತೆ ಮಂಥರೆಯೂ ಅಪಮಾನ, ನಿಂದನೆ, ತಿರಸ್ಕಾರಕ್ಕೆ ಗುರಿಯಾಗಿರುವ ಪಾತ್ರ. ವಾಲ್ಮೀಕಿಯಲ್ಲಿ ಮಂಥರೆ ಕುತಂತ್ರ ಬುದ್ಧಿಯ ದಾಸಿಯಾಗಿ ಕಂಡು ಬಂದರೆ ‘ಶ್ರೀ ರಾಮಾಯಣ ದರ್ಶನಂ’ನಲ್ಲಿ ಅವಳು ಮಮತೆಯ ಮೂರ್ತಿಯಾಗಿ ಪರಿವರ್ತಿತಳಾಗಿದ್ದಾಳೆ. ಇದು ವಾಲ್ಮೀಕಿಯ ಕತೆಯ ಕಥೆಯ ಪಾತ್ರವೇ ಆದರೂ ಆ ಕತೆಯನ್ನು ನೋಡುವ ಕ್ರಮ ಇಲ್ಲಿ ಭಿನ್ನವಾಗಿವೆ.
ಮಂಥರೆ ರಾಮಾಯಣ ಪರಂಪರೆಗಳೆಲ್ಲದರಲ್ಲಿಯೂ ತಿರಸ್ಕಾರಕ್ಕೆ ಒಳಗಾದ ಪಾತ್ರ. ಶತಮಾನಗಳಿಂದ ಲೋಕ ನಿಂದನೆಗಳಿಗೆ ಒಳಗಾದ, ಕೆಡುಕಿನ ರೂಪಕವಾಗಿರುವ ಈ ಪಾತ್ರದ ಒಳಹೊಕ್ಕು, ಮಂಥರೆಯೊಳಗಿನ ತಾಯಿ ಪ್ರೇಮವನ್ನು ಅವಳ ಒಳಗೂ ಇರುವ ಒಳಿತನ್ನು ಲೋಕಕ್ಕೆ ತೆರೆದಿಡುವ ಪ್ರಯತ್ನ ಈ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ನಡೆದಿದೆ. ಇಲ್ಲಿ ಮಂಥರೆ ಕೆಡುಕಿನ, ಕುತಂತ್ರದ, ದುಷ್ಟಬುದ್ಧಿಯ, ಅಧರ್ಮದ ರೂಪಕವಲ್ಲ. ಅರಮನೆಯಲ್ಲಿ ಎಲ್ಲರೂ ಅವಳ ವಿರೂಪಕ್ಕೆ ದಾಸಿತನಕ್ಕೆ ಅವಮಾನ ತಿರಸ್ಕಾರಗಳಿಂದ ಕಂಡರೆ, ಅವಳಿಗೆ ತಾಯಿಯ ಸ್ಥಾನವನ್ನು ನೀಡಿದವಳು ಕೈಕೆ. ಭರತನನ್ನು ಸಲಹುವ ಜವಾಬ್ದಾರಿಯನ್ನು ಕೈಕೆ ವಹಿಸುವುದು ಮಂಥರೆಗೆ. ಹಾಗಾಗಿ ಮಂಥರೆಗೆ ಕೈಕೆ ಮತ್ತು ಭರತನೇ ಅವಳ ಪ್ರಪಂಚ. ಅವಳ ಈ ಅತಿಯಾದ ಮಮತೆಯೇ ಭರತನಿಗೆ ಪಟ್ಟವಾಗಬೇಕೆಂದು ಯೋಚಿಸುವ ಕ್ರಮದಲ್ಲಡಗಿದೆ. ಆಕೆ ಕೈಕೆಯ ಮನಸ್ಸನ್ನು ಕೆಡಿಸುವುದು ಅವಳ ಸ್ವಾರ್ಥಕ್ಕಾಗಿ ಅಲ್ಲ. ಬೀದಿಯಲ್ಲಿ ರಾಮನ ಪಟ್ಟಾಭಿಷೇಕದ ಸುದ್ದಿ ಕೇಳಿದ ಜನರ ಹರ್ಷೋದ್ಗಾರವನ್ನು, ನಗರವೆಲ್ಲಾ ಚೈತನ್ಯ ತುಂಬಿ ಕಂಗೊಳಿಸುತ್ತಿರುವುದನ್ನು ಕಂಡ ಆಕೆಗೆ ಭರತನ ನೆನಪು ಉಕ್ಕುತ್ತದೆ. ಅವಳು ಭರತನನ್ನು ಆ ಸ್ಥಾನದಲ್ಲಿ ಕಲ್ಪಿಸಿಕೊಳ್ಳಲು ಬಯಸುವುದು ಇಲ್ಲಿ ರಾಮನ ಮೇಲಿನ ಅಥವಾ ಕೌಸಲ್ಯೆ ಮೇಲಿನ ದ್ವೇಷದಿಂದ ಅಲ್ಲ. ಬದಲಾಗಿ ಭರತನ ಮೇಲಿನ ಉತ್ಕಟ ಪ್ರೇಮದ ಕಾರಣದಿಂದ ಎನ್ನುವುದನ್ನು ಕುವೆಂಪು ಕಾವ್ಯದಲ್ಲಿ ವಿವರವಾಗಿ ನಿರೂಪಿಸಿದ್ದಾರೆ.
ಮಂಥರೆಯ ಮಮತೆಯನ್ನು ಕುವೆಂಪು ಆರಂಭದಲ್ಲಿ ಒಂದು ಕತೆಯನ್ನು ಸೃಷ್ಟಿಸುವ ಮೂಲಕ ಕಟ್ಟಿಕೊಟ್ಟಿರುವುದು ವಿಶಿಷ್ಟವಾಗಿದೆ. ರಾಮ ‘ಪೂರ್ಣಚಂದ’್ರ ಬೇಕೆಂದು ಹಠ ಹಿಡಿದು ಅಳತೊಡಗುತ್ತಾನೆ. ಅರಮನೆಯ ಎಲ್ಲರೂ ಅವನನ್ನು ಸಮಾಧಾನಪಡಿಸಲು ವಿಫಲರಾಗುತ್ತಾರೆ. ಆದರೆ ಮಂಥರೆ ಕನ್ನಡಿಯಲ್ಲಿ ಚಂದ್ರಬಿAಬವನ್ನು ತೋರಿಸುವ ಮೂಲಕ ಅವನ ಅಳುವನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗುತ್ತಾಳೆ. ಆಟವಾಡುತ್ತಿರುವ ಅವನನ್ನು ನೋಡಿ ಮಂಥರೆಗೆ ಮಮತೆ ಉಕ್ಕುತ್ತದೆ. ಎತ್ತಿಕೊಳ್ಳಲು ರಾಮನ ಬಳಿ ಕೈಚಾಚಿದಾಗ ಕೌಸಲ್ಯೆ ನಿರಾಕರಿಸುತ್ತಾಳೆ. ಅವಳಿಗೆ ಅರಮನೆಯಲ್ಲಿ ಇಂತಹ ಅವಮಾನ, ನಿಂದನೆಗಳು ದಿನನಿತ್ಯ ಆಗುತ್ತಿದ್ದವು. ಆದರೆ ಕೈಕೆ ಮತ್ತು ಭರತ ಅವಳನ್ನು ತಾಯಿಯಂತೆ ಗೌರವಿಸುತ್ತಿದ್ದರು. ಹಾಗಾಗಿಯೇ ಮಂಥರೆಗೆ ಅವರಿಬ್ಬರ ಒಳಿತನ್ನು ಯೋಚಿಸುವುದನ್ನು ಬಿಟ್ಟು ಅನ್ಯ ವಿಷಯ, ವಿಶೇಷವೇನೂ ಇರಲಿಲ್ಲ.
“ತಲೆಗೆಟ್ಟ ಗೂನಿಯೆನ್ನಯ ನುಡಿಗೆ
ಬಿಳ್ದು ತುರುವಾಯದೊಳ್ ದೂರದಿರ್ ಮಮತೆಯಿಂ,
ನಿನ್ನ ಭರತ ಮೇಲಣಳ್ಕರೆಯ ಮಮತೆಯಿಂ,
ರಾಮ ವಿದ್ವೇಷದಿಂದಲ್ತು, ರಾಮಂ ಬಾಲ್ಲೆ!
ಪೇಳ್ದೆನಿನಿತೆಲ್ಲಮಂ ನಿನಗೆ. ರಾಮಂ ಬಾಳ್ಗೆ !”
ಕೈಕೆಯ ಮನಸ್ಸನ್ನು ಕೆಡಿಸಿ ಭರತನಿಗೆ ಪಟ್ಟ ದೊರಕುವಂತೆ ಮಾಡುವಲ್ಲಿ ಆಕೆಯ ತರ್ಕ ಚತುರತೆಯ ಮಾತುಗಳು, ಭರತ ಮತ್ತು ಕೈಕೆಯ ಮೇಲಿನ ಪ್ರೇಮ, ರಾಮನ ಮೇಲೆಯೂ ಇರುವ ಅಭಿಮಾನ ಎಲ್ಲವನ್ನೂ ಕವಿ ಕೆಲವೇ ಸಾಲುಗಳಲ್ಲಿ ಒಟ್ಟಾಗಿ ಕಟ್ಟಿಕೊಟ್ಟಿರುವುದನ್ನು ಮೇಲೆ ಗಮನಿಸಬಹುದು.
ಮುಂದೆ ರಾಮನ ವನವಾಸಕ್ಕೆ ಕಾರಣಳಾದ ಮಂಥರೆ ಅರಮನೆಯಲ್ಲಿ ನಡೆದ ಘಟನೆಗಳಿಂದ ಪಶ್ಚಾತ್ತಾಪಕ್ಕೆ ಒಳಗಾಗುತ್ತಾಳೆ. ರಾಮನನ್ನು ವನವಾಸಕ್ಕೆ ತೆರಳುವಂತೆ ಮಾಡುವಲ್ಲಿ ಮಂಥರೆಯೇ ಪ್ರಮುಖ ಕಾರಣಳಾಗಿದ್ದಾಳೆ ಎಂದು ತಿಳಿದ ಮೇಲೆ ಭರತ, ಶತ್ರುಘ್ನರಿಂದ ನಿಂದನೆಗೆ ಗುರಿಯಾಗುತ್ತಾಳೆ. ಶತ್ರುಘ್ನನಂತೂ ಕೋಪದಲ್ಲಿ ಅವಳನ್ನು ನೆಲಕ್ಕೆ ಹಾಕಿ ಬಡಿಯುತ್ತಾನೆ. ಅವಳು ಭರತನನ್ನು ಕೂಗಿ ಕರೆದರೂ ಭರತ ಅವಳಿಂದಾದ ದುರಂತವನ್ನು ನೆನೆದಾಗ ಅವಳು ತೋರಿದ್ದ ಮಮತೆ ಅವನಿಗೆ ಮರೆಯಾಗುತ್ತದೆ. “ತೊಲಗೆಲೆ ಕುರೂಪಿ, ಓ ತೊಲಗು ಕಣ್ಬೊಲದಿಂದೆ ತೊಲಗಾಚೆ, ಪಾಪಿ ! ಬಳಿಸಾರದಿರ್; ನಿಲ್ಲದಿರ್ !” ಎನ್ನುವ ಭರತನ ಮಾತುಗಳು ಅವನ ಅಂತರಾಳದ ನೋವನ್ನು, ವ್ಯಥೆಯನ್ನು ಸಾರುತ್ತಿವೆ.
ತನ್ನ ಪ್ರೇಮದಿಂದ, ತಾನು ತೆಗೆದುಕೊಂಡ ನಿರ್ಧಾರದಿಂದ ಉಂಟಾದ ದುರಂತವನ್ನು ಸರಿಪಡಿಸಲು ಮಂಥರೆ ಯೋಚಿಸುವುದು ಕುವೆಂಪು ಕಟ್ಟಿಕೊಡುವ ಮಂಥರೆ ಪಾತ್ರದಲ್ಲಿ ಕಂಡು ಬರುತ್ತದೆ. ಕೈಕೆ, ಭರತ, ಶತ್ರುಘ್ನ ಎಲ್ಲರಿಂದಲೂ ನಿಂದನೆಗೆ ಗುರಿಯಾಗಿ ಅಪರಾಧಿ ಸ್ಥಾನದಲ್ಲಿ ನಿಂತಿರುವ ಮಂಥರೆ ಕಾಡಿಗೆ ಹೋಗಿ ರಾಮನನ್ನು ಕರೆದುಕೊಂಡು ಬಂದು ಭರತನನ್ನು ಖುಷಿಪಡಿಸಬೇಕೆಂದು ನಿರ್ಧರಿಸುತ್ತಾಳೆ. ಹೀಗೆ ತನ್ನ ಪಾಪಗಳನ್ನು ಕಳೆಯಲು ಪುಣ್ಯವನ್ನು ಅರಸಿ ಹೋಗುವಂತೆ ಕಾಡಿನಲ್ಲಿ ರಾಮನನ್ನು ಕರೆಯುತ್ತಾ ಓಡುತ್ತಾಳೆ. ದೂರದ ಕಾಳ್ಗಿಚ್ಚನ್ನು ರಾಮನೆಂದೇ ಭಾವಿಸಿ ಅದರತ್ತ ಓಡುವ ಮಂಥರೆ ಅವಳ ಪಾಪಗಳಿಗೆ ಪ್ರಾಯಶ್ಚಿತ್ತದಂತೆ ಬೆಂಕಿಗಾಹುತಿಯಾಗುತ್ತಾಳೆ. ಮಂಥರೆಯ ಪ್ರಾಯಶ್ಚಿತ್ತವೇ ಅವಳ ಉದ್ಧಾರದ ಮಾರ್ಗವಾಗಿದೆ ಎನ್ನುವುದು ‘ಶ್ರೀ ರಾಮಾಯಣ ದರ್ಶನಂ’ ಕಾವ್ಯದಲ್ಲಿ ಧ್ವನಿತವಾಗಿದೆ. ಇನ್ನೊಮ್ಮೆ ಆಕೆ ಕಾಣಿಸಿಕೊಳ್ಳುವುದು ಹದಿನಾಲ್ಕು ವರ್ಷದ ನಂತರ. ರಾಮ ಬಾರದೆ ಇದ್ದಾಗ ಭರತ ಅಗ್ನಿ ಪ್ರವೇಶಕ್ಕೆ ಸಿದ್ಧವಾಗುತ್ತಿದ್ದ ಸಂದರ್ಭದಲ್ಲಿ ಮಂಥರೆ ಆ ಬೆಂಕಿಯಲ್ಲಿ ಕಾಣಿಸಿಕೊಂಡು ರಾಮನ ಬರುವಿಕೆಯ ಸುಳಿವು ನೀಡುತ್ತಾಳೆ. ಮಂಥರೆ ಬೆಂಕಿಯಲ್ಲಿ ಕಾಣಿಸಿಕೊಳ್ಳುವುದನ್ನು ಕುವೆಂಪು ಅವಳು ಪ್ರಾಯಶ್ಚಿತ್ತದ ಮೂಲಕ ಆತ್ಮೋದ್ಧಾರದ ನೆಲೆಗೆ ತಲಪಿರುವುದನ್ನು ರೂಪಕವಾಗಿ ಧ್ವನಿಸಿದ್ದಾರೆ.
ಕುವೆಂಪು ಮಂಥರೆ ಪಾತ್ರಕ್ಕೆ ಶತಮಾನಗಳಿಂದ ದೊರಕಿದ್ದ ಕೀಳು ಸ್ಥಾನವನ್ನು ಇಲ್ಲವಾಗಿಸಿ, ರಾಮಾಯಣದಲ್ಲಿ ಅವಳಿಗೆ ಪ್ರೇಮದ ತ್ಯಾಗದ, ನಿಸ್ವಾರ್ಥತೆಯ, ವಾತ್ಸಲ್ಯದ ರೂಪಕವಾಗಿರುವ ಸ್ಥಾನವನ್ನು ನೀಡುವುದನ್ನು ಕಾಣಬಹುದು. ಅಷ್ಟೇ ಅಲ್ಲದೆ ಸೀತೆ, ರಾಮ, ರಾವಣ, ಮಾರೀಚ, ಅಹಲ್ಯೆ, ಶಬರಿ, ಕುಂಭಕರ್ಣ ಮುಂತಾದವರೆಲ್ಲರ ಆತ್ಮೋದ್ಧಾರಕ್ಕೆ ಲೋಕಕಲ್ಯಾಣಕ್ಕೆ ಮೂಲ ಕಾರಣವಾಗಿರುವುದರಿಂದ ಕುವೆಂಪು ಮಂಥರೆಯನ್ನು ಮಂಥರಾಲಕ್ಷಿö್ಮÃ, ಮಂಥರಾದೇವಿ ಎಂದು ಕರೆದು ಗೌರವಿಸುವುದು ಅವರ ಪೂರ್ಣದೃಷ್ಟಿ ಮತ್ತು ಕಲಾತ್ಮಕ ದೃಷ್ಟಿಕೋನಕ್ಕೆ ನಿದರ್ಶನವೆನ್ನಬಹುದು.


Comments