top of page

ಶೂದ್ರ ತಪಸ್ವಿ: ಸಾಮಾಜಿಕ ನ್ಯಾಯ ಪರಿಕಲ್ಪನೆ

ಆಶಿಕ್

ಸಂಶೋಧನಾರ್ಥಿ, ಕನ್ನಡ ಭಾರತಿ

ಕುವೆಂಪು ವಿಶ್ವವಿದ್ಯಾಲಯ

ಶಂಕರಘಟ್ಟ, ಶಿವಮೊಗ್ಗ-೫೭೭೪೫೧ ದೂರವಾಣಿ: ೯೧೧೩೫೯೦೭೩೬

ಮಿಂಚಂಚೆ: koppaashik999@gmail.com


ಕನ್ನಡ ಸಾಹಿತ್ಯಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ ಹಾಗೂ ಈ ಸಾಹಿತ್ಯ ಪರಂಪರೆ ಅತ್ಯಂತ ಸಮೃದ್ಧವೂ ವೈವಿಧ್ಯಮಯವೂ ಆಗಿದೆ. ಕವಿರಾಜಮಾರ್ಗಕಾರನಿಂದ ಇಂದಿನವರೆಗೆ ಹರಿದು ಬಂದಿರುವ ಸಾಹಿತ್ಯ ದಾರಿ ಹಲವು ವೈವಿಧ್ಯಗಳ ಮುಖಾಂತರ ಚೈತನ್ಯಮಯವಾಗಿ ಬೆಳೆದು ನಿಂತಿದೆ. ಆಧುನಿಕ ಸಾಹಿತ್ಯ ಕಾಲಘಟ್ಟವು ಹಲವು ಮಜಲುಗಳಲ್ಲಿ, ಹಲವು ಪ್ರಕಾರಗಳಲ್ಲಿ ಮಹೋನ್ನತ ಬೆಳವಣಿಗೆಯನ್ನು ಕಂಡಿದೆ. ಅದರಲ್ಲಿ ಪಾಶ್ಚಾತ್ಯ ಸಾಹಿತ್ಯದ ಪ್ರೇರಣೆಯಿಂದ ರೂಪುಗೊಂಡ ‘ಹೊಸಗನ್ನಡ ಸಾಹಿತ್ಯ’ ೨೦ನೇ ಶತಮಾನದಲ್ಲಿ ಆರಂಭಗೊಂಡಿತು. ರಾಷ್ಟ್ರೀಯತೆಯ ತುಡಿತಗಳಿಗೆ, ದೇಶಿಯತೆಯ ಕಾಳಜಿಗಳಿಗೆ ಕಾಲದಿಂದ ಕಾಲಕ್ಕೆ ಆದ ಸಾಮಾಜಿಕ ಚಿಂತನೆಗಳಿಗೆ ಕಾವ್ಯ, ಕಥೆ, ಕಾದಂಬರಿ, ನಾಟಕ, ಸಣ್ಣಕಥೆಗಳಂತಹ ಹೊಸ ಪ್ರಕಾರಗಳು ಹುಟ್ಟಿಕೊಂಡವು.


ಕನ್ನಡ ಸಾರಸ್ವತ ಲೋಕದ ಹರಿಕಾರ, ಪಂಚಮಂತ್ರಗಳ ಸಂದೇಶ ಸಾರಿದ ರಾಷ್ಟ್ರಕವಿ ‘ಕುವೆಂಪು’ ಅವರ ಸಾಹಿತ್ಯ ಸೇವೆ ಅನನ್ಯವಾದದು ಮತ್ತು ವಿಶಿಷ್ಟವಾದುದು. ಹೊಸಗನ್ನಡ ಸಾಹಿತ್ಯದಲ್ಲಿ ಕುವೆಂಪುರವರದ್ದು ಒಂದು ಮಹತ್ತರವಾದ ಘಟ್ಟ. ನವೋದಯ ಸಾಹಿತ್ಯದ ಕಾಲಘಟ್ಟದ ಸಂದರ್ಭದಲ್ಲಿ ಬ್ರಿಟಿಷರು ಭಾರತವನ್ನು ಆಳ್ವಿಕೆ ನಡೆಸುತ್ತಾ ಇಂಗ್ಲಿಷ್ ಶಿಕ್ಷಣವನ್ನು ಜಾರಿಗೊಳಿಸಿ, ವಿದ್ಯಾಭ್ಯಾಸವನ್ನು ಪಸರಿಸಿ ಸಾಮಾಜಿಕ ಪರಿವರ್ತನೆಗೆ ಒಳಪಟ್ಟಿತ್ತು. ಬ್ರಿಟಿಷರ ವಿರುದ್ಧ ಕುವೆಂಪು ಅವರ ಬರವಣಿಗೆ ಆಧುನಿಕತೆಯ ಪ್ರಭಾವದಿಂದ ಆದ ಅಸಂಪ್ರದಾಯ ದಬ್ಬಾಳಿಕೆಗಳನ್ನು ತೊಲಗಿಸಿ ರಾಷ್ಟçಪ್ರೇಮ, ಸ್ವಾಭಿಮಾನವನ್ನು ಜನಸಾಮಾನ್ಯರಲ್ಲಿ ಬಿತ್ತುವಲ್ಲಿ ಪ್ರಮುಖ ಪಾತ್ರವಹಿಸಿತು. ಕುವೆಂಪು ಅವರ ಸಾಹಿತ್ಯವು ವಾಲ್ಮೀಕಿ, ಬುದ್ಧ, ರವೀಂದ್ರನಾಥ ಟ್ಯಾಗೋರ್, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ ಮೊದಲಾದ ಮಹನೀಯರ ಸ್ಫೂರ್ತಿಯ ಸೆಲೆಯನ್ನು ಒಳಗೊಂಡಿತು. ಅದರೊಡನೆ ಪಾಶ್ಚಾತ್ಯ ಕವಿಗಳಾದ ಶೆಲ್ಲಿ, ಕೀಟ್ಸ್, ಶೇಕ್ಸ್ಪಿಯರ್ ಮೊದಲಾದವರ ಸಾಹಿತ್ಯವನ್ನು ಓದಿ ಸಮಾಜದ ಸಮಸ್ತ ಸಂವೇದನೆಗಳನ್ನು ಅರಳಿಸಿ ಜಾಗೃತಗೊಳಿಸುವ ಬದುಕಿನ ಸಮಸ್ತ ಮುಖಗಳನ್ನು ಕಾವ್ಯವಾಗಿಸುವ ನವೀನತೆ ಕುವೆಂಪುರವರಲ್ಲಿ ಬೆಳೆಯತೊಡಗಿತು.


ನವೋದಯ ಸಾಹಿತ್ಯ ಪರಿಸರದ ಪ್ರೀತಿ, ಬದುಕಿನಲ್ಲಿ ತನ್ಮಯತೆ ಮತ್ತು ಪ್ರತಿರೋಧದ ಶಕ್ತಿಯನ್ನು ಕೇಂದ್ರವಾಗಿರಿಸಿಕೊಂಡಿದೆ. ‘ಇಕಾಲಜಿಯ’ ಬೇರುಗಳನ್ನು ರೊಮ್ಯಾಂಟಿಕ್ ಪರಿಕಲ್ಪನೆಯಲ್ಲಿ ಮತ್ತು ರೊಮ್ಯಾಂಟಿಕ್ ಧೋರಣೆಯ ಸಾಹಿತ್ಯ ಕೃತಿಗಳಲ್ಲಿ ಕಾಣಬಹುದಾಗಿದೆ. ಪರಿಸರವನ್ನು ಮೂಲವಾಗಿಟ್ಟುಕೊಂಡು ನವೋದಯ ಸಾಹಿತ್ಯ ಸಮಕಾಲೀನ ಬದುಕಿನ ಸ್ಥಿತಿಗತಿಗಳ ಬಗ್ಗೆ ಅಭಿವ್ಯಕ್ತಿಸುತ್ತದೆ.


ಕುವೆಂಪು ಅವರು ಆಯ್ದುಕೊಂಡ ಬರಹದಲ್ಲಿ ವೈಚಾರಿಕ ದೃಷ್ಟಿಕೋನ ಇದ್ದೇ ಇರುತ್ತದೆ. ಅದು ನಾಟಕವಾಗಲಿ, ಕಾವ್ಯವಾಗಲಿ, ಮಹಾಕಾವ್ಯವೇ ಆಗಲಿ ಎಲ್ಲದರಲ್ಲೂ ಸಮಾಜವನ್ನು ಸರಿದಾರಿಯಲ್ಲಿ ನಡೆಸುವ ಜವಾಬ್ದಾರಿಯನ್ನು ತಿಳಿಸಿಕೊಡುತ್ತಾರೆ. ಕನ್ನಡ ಸಾಹಿತ್ಯ ಕ್ಷೇತ್ರದ ದೃಷ್ಟಿಯನ್ನು ಕ್ರಾಂತಿಗೊಳಿಸಿದ ವೈಚಾರಿಕ ಬರಹಗಾರ.


ಕುವೆಂಪು ಅವರು ತಮ್ಮ ನಾಟಕ, ಕತೆ, ಕಾದಂಬರಿ ಕಾವ್ಯದ ಮೂಲಕ ತಳ ಸಮುದಾಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಒಂದು ವಾಗ್ವಾದವನ್ನು ನಡೆಸುತ್ತಾರೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಈ ವೈದಿಕ ವಿರೋಧಿ ನಿಲುವಿನ ಜತೆಗೆ ಪ್ರಭುತ್ವ ವಿರೋಧಿ ನಿಲುವೂ ಮುಖ್ಯವಾಗಿ ಗೋಚರಿಸುತ್ತದೆ. ಕುವೆಂಪು ಅವರು ಒಟ್ಟು ಹದಿನಾಲ್ಕು ನಾಟಕಗಳನ್ನು ರಚಿಸಿದ್ದಾರೆ. ಕನ್ನಡ ನಾಟಕ ಕ್ಷೇತ್ರ ಅಷ್ಟೇನೂ ಸಮೃದ್ಧವಾಗಿರದ ಆ ದಿನಗಳಲ್ಲಿ ಕುವೆಂಪು ಅವರು ರಚಿಸಿದ ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳು ತುಂಬಾ ಗಮನಾರ್ಹವಾದದ್ದು. ರಾಮಾಯಣ ಆಧಾರಿತ ನಾಟಕಗಳಲ್ಲಿ ‘ಶೂದ್ರ ತಪಸ್ವಿ’ ಮತ್ತು ‘ವಾಲ್ಮೀಕಿಯ ಭಾಗ್ಯ’ ಮುಖ್ಯವಾದದ್ದು. ‘ಶೂದ್ರ ತಪಸ್ವಿ’ ಕನ್ನಡ ಸಾಹಿತ್ಯದಲ್ಲಿ ಬಿರುಗಾಳಿಯನ್ನು ಎಬ್ಬಿಸಿದ ಕೃತಿ. ಈ ನಾಟಕದಲ್ಲಿ ಶಂಬೂಕನ ವಧೆಯ ಪ್ರಸಂಗವನ್ನು ಕೈಗೆತ್ತಿಕೊಂಡಿದ್ದಾರೆ. ಈ ಪ್ರಸಂಗವನ್ನು ಆಧುನಿಕ ಕಾಲಕ್ಕೆ ವ್ಯಾಖ್ಯಾನಿಸಿ ರಚಿಸಿದಾಗ ಸಂಪ್ರದಾಯ ವಲಯಗಳಿಂದ ಪ್ರತಿಭಟನೆ ಬಂದರೂ ಕೂಡ ಅದಕ್ಕೆ ತಕ್ಕ ರೀತಿಯಲ್ಲಿಯೇ ಉತ್ತರಿಸಿದ್ದಾರೆ. ವರ್ಣವ್ಯವಸ್ಥೆಯ ಹೆಸರಿನಲ್ಲಿ ಮೌಢ್ಯತೆ ಹಾಗೂ ಜ್ಞಾನ ಅಂಧಕಾರದ ಸ್ವಾರ್ಥವನ್ನು ಕುವೆಂಪು ಶೂದ್ರತಪಸ್ವಿ ನಾಟಕದಲ್ಲಿ ವಿವರಿಸಿದ್ದಾರೆ.


ಶಂಬೂಕ ಮಹರ್ಷಿಯ ಕಥೆಯನ್ನು ಬಳಸಿಕೊಂಡು ತಪಸ್ಸಿನ ಮಹಿಮೆಯನ್ನು ಎತ್ತಿ ಹಿಡಿದು ವಾಲ್ಮೀಕಿಗೆ ಅಂಟಿಕೊAಡಿದ್ದ ಕಳಂಕವನ್ನು ಪರಿಹರಿಸುವುದೇ ಶೂದ್ರ ತಪಸ್ವಿ ನಾಟಕದ ಉದ್ದೇಶ. ೧೯೪೪ರಲ್ಲಿ ರಚಿತವಾದ ಈ ನಾಟಕ ಸಿದ್ಧ ಮಾದರಿಯನ್ನು ಒಡೆಯುವುದರ ಜೊತೆಗೆ ಯಾಜಮಾನ್ಯ ಸಂಸ್ಕೃತಿಯನ್ನು ಧಿಕ್ಕರಿಸಿದ್ದಾರೆ. ಬ್ರಾಹ್ಮಣನೊಬ್ಬ ಶೂದ್ರ ತಪಸ್ವಿಗೆ ಮಣಿಯುವುದೇ ಈ ನಾಟಕದ ಆಶಯವಾಗಿದೆ. ನಾಟಕವು ಮೂರು ಅಂಕಗಳಲ್ಲಿ ರಚಿತವಾಗಿದೆ.


ಮೂಲದಲ್ಲಿ ಒಬ್ಬ ಶೂದ್ರನು ತಪಸ್ಸನ್ನು ಮಾಡುವುದೇ ಮಹಾಪರಾಧದಂತೆ ‘ಶಂಬೂಕ’ನನ್ನು ಬಿಂಬಿಸಿದ್ದಾರೆ. ಶಂಬೂಕ ಶೂದ್ರ ಸಮುದಾಯದ ಪ್ರತಿನಿಧಿಯಾಗಿ ಸಾಮಾಜಿಕವಾಗಿ ಸಮಾಜದಿಂದ ಹೊರಗುಳಿದಿರುವುದನ್ನು ಕಾಣಬಹುದು. ಬ್ರಾಹ್ಮಣನ ಮಗ ಸಾವನ್ನಪ್ಪಿರುವುದು ಶಂಬೂಕ ತಪಸ್ಸನ್ನು ಮಾಡಿದ್ದರಿಂದ ಎಂಬ ಕಾರಣಕ್ಕೆ ಬ್ರಾಹ್ಮಣನ ಮಾತನ್ನು ಕೇಳಿದ ಶ್ರೀರಾಮನು ಶಂಬೂಕನನ್ನು ಕೊಲ್ಲುತ್ತಾನೆ. ಮೇಲ್ವರ್ಗದವರ ಈ ಕುತಂತ್ರದ ಕಾರಣಕ್ಕಾಗಿ ಶಂಬೂಕ ಕೇವಲ ಸಾಮಾಜಿಕವಾಗಿ ಹೊರಗುಳಿಯದೆ ದ್ವೇಷ ರಾಜಕಾರಣದಿಂದ ಸಾವನ್ನಪ್ಪ ಬೇಕಾಗುತ್ತದೆ. ಇದು ಮೂಲದ ಕಥೆ.


ಕುವೆಂಪು ಅವರು ಈ ಪ್ರಸಂಗವನ್ನು ಕುರಿತು ಶ್ರೇಣಿಕೃತ ಸಮಾಜವು ತನಗೆ ಅನುಕೂಲವಾಗುವಂತೆ ಈ ಕಥೆಯನ್ನು ತಿರುಚಿದೆ. ಶಂಬೂಕನಿಗೆ ಸಾಮಾಜಿಕ ನ್ಯಾಯವನ್ನು ಕೊಡಬೇಕೆಂಬ ಉದ್ದೇಶದಿಂದ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಈ ನಾಟಕವನ್ನು ರಚಿಸಿಲಾಗಿದೆ. ಸಾಮಾಜಿಕ ವ್ಯವಸ್ಥೆಯನ್ನು ವೈದಿಕ ಶಕ್ತಿಗಳು ನಿಯಂತ್ರಿಸುತ್ತಿರುವ ಸಂದರ್ಭದಲ್ಲಿ ಕುವೆಂಪು 'ಶಂಬೂಕ' ಪಾತ್ರದ ಮೂಲಕ ಒಂದು ಕ್ರಾಂತಿಯನ್ನೇ ಮಾಡಿದ್ದಾರೆ.


ಮೂಲದ ಕಥೆಯಲ್ಲಿ ಬ್ರಾಹ್ಮಣನ ಮಾತನ್ನು ಕೇಳಿ ಶೂದ್ರ ತಪಸ್ವಿಯನ್ನು ಕೊಲ್ಲಲು ಬಾಣ ಹೂಡುವ ಶ್ರೀ ರಾಮ ಕುವೆಂಪು ಅವರ ನಾಟಕದಲ್ಲಿ ಬ್ರಾಹ್ಮಣನಿಗೆ ಬುದ್ಧಿ ಕಲಿಸಬೇಕೆಂದು ರಾಮನು ತೀರ್ಮಾನಿಸುತ್ತಾನೆ. ಶಂಬೂಕನ ಪ್ರಸಂಗ ಕುವೆಂಪು ಅವರ ಶೂದ್ರ ತಪಸ್ವಿಯಲ್ಲಿ ಸಂಪೂರ್ಣ ಹೊಸ ರೂಪ ತಾಳಿದೆ. ಮೊದಲನೆಯ ದೃಶ್ಯದಲ್ಲಿ ಮೃತ್ಯು ದೇವತೆ ಮತ್ತು ವೃಕ್ಷ ಭೈರವನ ನಡುವೆ ನಡೆಯುವ ಮಾತುಕತೆಯ ಸಂವಾದವಿದೆ. ಶಂಬೂಕನು ತಪಸ್ಸನ್ನು ಮಾಡುತ್ತಿರುವಾಗ ಮೃತ್ಯು ದೇವತೆ ಅವನ ಆಶ್ರಮಕ್ಕೆ ಬಂದಾಗ, ಆಶ್ರಮವನ್ನು ಕಾಯುತ್ತಿದ್ದ ವೃಕ್ಷ ಭೈರವ ಮೃತ್ಯು ದೇವತೆಯನ್ನು ತಡೆಯುತ್ತಾನೆ. “ಪುಟ್ಟೊಳಾತಂ ಶೂದ್ರನಾಗಿರ್ದನೆಂದು” ಬ್ರಾಹ್ಮಣನು ಶಂಬೂಕನಿಗೆ ಅಗೌರವವನ್ನು ತೋರಿಸಿದ್ದಾನೆ ಎಂಬ ಕಾರಣಕ್ಕೆ ಅವನನ್ನು ಶಿಕ್ಷಿಸಲು ಬಂದಿದ್ದೇನೆ ಎಂದು ಮೃತ್ಯು ದೇವತೆ ತಿಳಿಸುತ್ತದೆ. ಇದು ಮೂಲ ನಾಟಕದ ರೂಪಾಂತರದ ಮುಖ್ಯ ಕೇಂದ್ರ ಎಂದು ಹೇಳಬಹುದು.


“ಸಾಲದೇನಾ ಶೂದ್ರನ ತಪಕೆ ಮುನಿದ ರ‍್ಮಶಾಪಂ” ಶೂದ್ರನೊಬ್ಬ ತನ್ನ ವರ್ಗಕ್ಕೆ ಮೀರಿ ತಪಸ್ಸನ್ನು ಮಾಡಿದ್ದು ವರ್ಣಾಶ್ರಮಕ್ಕೆ, ಪುರೋಹಿತಶಾಹಿ ಪ್ರಭುತ್ವಕ್ಕೆ ಸಹಿಸಿಕೊಳ್ಳಲಾಗಲಿಲ್ಲ. ಧರ್ಮದೇವತೆ ಮುನಿದು ತನ್ನ ಮಗನ ಸಾವನ್ನಪ್ಪಿದನೆಂದು ಶ್ರೀರಾಮನ ಬಳಿ ನ್ಯಾಯ ಕೇಳಿ, ತನ್ನ ಮಗನ ಸಾವಿಗೆ ನ್ಯಾಯ ಒದಗಿಸಬೇಕೆಂದು ಕೋರಿಕೊಳ್ಳುತ್ತಾನೆ.


ಶಂಬೂಕನಿಗೆ ಬಾಣ ಹೂಡುವ ನೆಪದಲ್ಲಿ ರಾಮ ಶಂಬೂಕನಿಗೆ ನಮಸ್ಕರಿಸುತ್ತಾನೆ. “ಅರಸಿಕೊಲ್ ಅರಗುಲಿಯನ್” ಎಂದು ರಾಮ ಬ್ರಹ್ಮಾಸ್ತ್ರ ವನ್ನು ಪ್ರಯೋಗಿಸಿದಾಗ ಆ ಬಾಣ ಶಂಬೂಕನಿಗೆ ವಂದಿಸಿ, ಬ್ರಾಹ್ಮಣನನ್ನು ಬೆನ್ನಟ್ಟುತ್ತದೆ. ಬ್ರಾಹ್ಮಣ ರಾಮನ ದಯೆಯಿಂದ ಬದುಕುಳಿದು ತನ್ನ ತಪ್ಪನ್ನು ಒಪ್ಪಿಕೊಂಡು ಶಂಬೂಕನಿಗೆ ವಂದಿಸುತ್ತಾನೆ. ಸತ್ತ ಮಗನೂ ಕೂಡ ಬದುಕುತ್ತಾನೆ. ಬ್ರಾಹ್ಮಣನ ಮನಃಪರಿವರ್ತನೆಯಾಗುತ್ತದೆ. ಈ ರೀತಿಯಾಗಿ ಕುವೆಂಪುರವರು ಸಾಮಾಜಿಕವಾಗಿ ಹೊರಗುಳಿದ ಶೂದ್ರ ತಪಸ್ವಿಯನ್ನು ಮಹಾನ್ ವ್ಯಕ್ತಿಯಾಗಿ ಸಾಮಾಜಿಕ ನ್ಯಾಯ ಒದಗಿಸುತ್ತಾರೆ.


ಕನ್ನಡ ನಾಟಕ ಸಾಹಿತ್ಯದಲ್ಲಿ ಕುವೆಂಪು ಅವರಿಗೆ ಪ್ರತ್ಯೇಕ ಸ್ಥಾನ ಇದೆ. ಪುರಾಣ ಮತ್ತು ಇತಿಹಾಸದಿಂದ ವಸ್ತುಗಳನ್ನು ಆಯ್ದುಕೊಂಡು ಸಮಕಾಲೀನ ಸಂದರ್ಭಕ್ಕನುಗುಣವಾಗಿ ಪುನರ್ ವಿಶ್ಲೇಷಿಸುವ ಕುವೆಂಪು ಅವರ ಪ್ರತಿಭೆ ಮಹತ್ತರವಾದದ್ದು. ಅಕ್ಷರ ವಂಚಿತ ಜನಸಮುದಾಯದ ಪ್ರತಿನಿಧಿಯಾಗಿ ವ್ಯವಸ್ಥೆಗೆ ಮುಖಾಮುಖಿಯಾಗಿದ್ದಾರೆ. ಪ್ರಧಾನ ಸಂಸ್ಕೃತಿಗೆ ಪರ್ಯಾಯವಾದ ಸಾಧ್ಯತೆಗಳನ್ನು ಕಲ್ಪಿಸುವ ಚಿಂತನೆ ಈ ನಾಟಕದ ಮೂಲ ದ್ರವ್ಯವಾಗಿದೆ. ಮೃತ್ಯುವನ್ನು ಅಥವಾ ಮನುಷ್ಯ ವಿರೋಧಿ ಧರ್ಮವನ್ನು ಮನುಷ್ಯ ಧರ್ಮ ಗೆಲ್ಲಬೇಕು ಎಂಬ ನಾಟಕದ ಆಶಯ ವ್ಯಕ್ತಗೊಳ್ಳುತ್ತದೆ. ಸಮಾಜದ ಕಟ್ಟಕಡೆಯ ಶಂಬೂಕನನ್ನು ತಪಸ್ವಿಯನ್ನಾಗಿ ರೂಪಿಸಿರುವುದು ಅನನ್ಯವೇ ಹೌದು.


ಆಕರ ಗ್ರಂಥ:

೦೧. ಕುವೆಂಪು, ಶೂದ್ರ ತಪಸ್ವಿ, ಕುವೆಂಪು ಸಮಗ್ರ ನಾಟಕ, ಶಿವಾರೆಡ್ಡಿ ಕೆ.ಸಿ. (ಸಂ), ಪ್ರಸಾರಾಂಗ, ಹಂಪಿ, ೨೦೧೭


ಪರಾಮರ್ಶನ ಗ್ರಂಥಗಳು:

೦೧. ನರಹಳ್ಳಿ ಬಾಲಸುಬ್ರಹ್ಮಣ್ಯ, ಕುವೆಂಪು ಕಥನ ಕೌತುಕ, ಅಭಿನವ ಪುಸ್ತಕ, ಬೆಂಗಳೂರು, ೨೦೧೬

೦೨. ಮರುಳಸಿದ್ಧಪ್ಪ.ಕೆ, ಆಧುನಿಕ ಕನ್ನಡ ನಾಟಕ, ಸಪ್ನ ಬುಕ್ ಹೌಸ್, ೨೦೧೮

೦೩. ಮಳಲಿ ವಸಂತಕುಮಾರ್, ಕುವೆಂಪು ಅವರ ನಾಟಕಗಳು ಒಂದು ಅಧ್ಯಯನ, ಪುಸ್ತಕ ಪ್ರಕಾಶನ, ಮೈಸೂರು, ೨೦೦೧

೦೪. ಮಳಲಿ ವಸಂತಕುಮಾರ್, ಕುವೆಂಪು ಕಾವ್ಯ ಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ, ಮಾಲತೇಶ್ ಪ್ರಕಾಶನ, ಬೆಂಗಳೂರು, ೨೦೧೩

೦೫. ಸುಜನಾ, ಪರಂಪರೆ ಮತ್ತು ಕುವೆಂಪು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ೨೦೧೧

Comments


bottom of page