top of page

‘‘ಶ್ರೀ ರಾಮಾಯಣ ದರ್ಶನಂ: ದರ್ಶನ ಮತ್ತು ಅನುಭಾವದ ಪರಿಕಲ್ಪನೆಗಳು’’

ಡಾ. ಮಹೇಂದ್ರ ಟಿ. ಎಂ

ಪೋಸ್ಟ್ಡಾಕ್ಟರಲ್ ರಿಸರ್ಚರ್

ಕನ್ನಡ ಭಾರತಿ ವಿಭಾಗ

ಕುವೆಂಪು ವಿಶ್ವವಿದ್ಯಾಲಯ


ಮನುಷ್ಯ ಪ್ರಕೃತಿಯ ಕೂಸು. ಅವನದು ಪ್ರಕೃತಿಯೊಂದಿಗೆ ಕರುಳ ಬಳ್ಳಿಯ ಸಂಬಂಧ. ಮನುಷ್ಯ ಪ್ರಕೃತಿಯ ಅಂಶವಾಗಿದ್ದರೂ ಆತನಿಗೆ ಪ್ರಕೃತಿಯ ಆಂತರ್ಯದ ರಹಸ್ಯಗಳು ಇಂದಿಗೂ ಸ್ಪಷ್ಟವಿಲ್ಲ, ನಿಗೂಢ. ಪ್ರಕೃತಿಯೂ ನಿರಂತರವಾದ ಬದಲಾವಣೆಗೆ ತೆರೆದುಕೊಳ್ಳುವುದರಿಂದ ಅಶಾಶ್ವತ ಭೂಮಂಡಲದಲ್ಲಿ ನಿತ್ಯವೂ ನೂತನ. ಮನುಷ್ಯನೂ ಅನಾಗರಿಕ ಪ್ರಜ್ಞೆಯನ್ನು ದಾಟಿ ಬಂದು ಹಲವು ಯುಗಗಳು ಸಂದಿವೆ. ಹಾಗಾಗಿ ಈಗ ಆತನ ಗುರಿ, ಪ್ರಜ್ಞೆ ಕೇವಲ ಆಹಾರ ಸಂಗ್ರಹಣೆ ಮಾತ್ರವಲ್ಲ. ತನ್ನನ್ನು ತಾನು ಕಂಡುಕೊಳ್ಳುವುದಕ್ಕೆ, ಪ್ರಕೃತಿಯೊಂದಿಗೆ ತನ್ನ ಸಂಬಂಧವನ್ನು ಅರಿಯುವುದಕ್ಕೆ ತನ್ನ ಪ್ರಜ್ಞೆಯ ಮೂಲಕ, ವಿಚಾರ ಶಕ್ತಿಯ ಮೂಲಕ ನಿರಂತರ ಶೋಧವನ್ನು ಕೈಗೊಂಡಿದ್ದಾನೆ. ಈ ಶೋಧದ ಹಾದಿಯಲ್ಲಿ ಆತ ಅಲೌಕಿಕ ಶಕ್ತಿಗಳತ್ತ ಆಕರ್ಷಿತನಾಗಿದ್ದಾನೆ. ‘ದೇವರು’ ಎನ್ನುವ ನಂಬಿಕೆ ಸಹ ಇಲ್ಲಿಂದಲೇ ಆರಂಭವಾದದ್ದು.


ಆತ್ಮಜ್ಞಾನವನ್ನು ಹೊಂದುವುದು ಮನುಷ್ಯನ ಆಂತರ್ಯದ ಕೂಗು. ಹಾಗಾಗಿಯೇ ಆತ ಒಳಗಣ್ಣಿನಿಂದ ಸತ್ಯಶೋಧನೆಗೆ ಪ್ರಯತ್ನಿಸುವನು. ಅಂತರಂಗದ ಪ್ರಜ್ಞೆ ಜಾಗೃತಗೊಂಡಾಗ ಹೊರಗಣ್ಣಿಗೆ ಕಾಣದ ವಿಚಾರಗಳು ಒಳಗಣ್ಣಿಗೆ ಕಾಣತೊಡಗುತ್ತವೆ. ಸೃಷ್ಟಿ ರಹಸ್ಯ ಅನುಭಾವದ ಹಂತದಲ್ಲಿ ಗೋಚರಿತವಾಗುತ್ತವೆ. ಇನ್ನೂ ಆಳಕ್ಕೆ ತನ್ನ ಆಂತರ್ಯದ ಅನುಭಾವವನ್ನು, ಪ್ರಜ್ಞೆಯನ್ನು ವಿಸ್ತರಿಸಿಕೊಂಡಂತೆಯೂ ಪ್ರಕೃತಿಗೆ ಮತ್ತಷ್ಟು ಸಾಮೀಪ್ಯ ಹೊಂದುತ್ತಾನೆ ಮನುಷ್ಯ. ಈ ಅಂತರಂಗದ ಸಾಮಿಪ್ಯವೇ ‘ದರ್ಶನ’. ಈ ಸಾಮಿಪ್ಯ ಮನುಷ್ಯನಿಗೆ ಬದುಕಿನ ಅನೇಕ ಹೊಳಹುಗಳನ್ನು ವಿವಿಧ ರೂಪಗಳಲ್ಲಿ ನೀಡುತ್ತಿರುತ್ತದೆ. ಧ್ಯಾನ, ಕನಸು, ಶಕುನಗಳಿತ್ಯಾದಿಗಳು ಈ ಹೊಳಹುಗಳಿಗೆ ಸಾಧನಗಳು. “ಏಕವೂ ಅಖಂಡವೂ ಆಗಿರುವ ಬ್ರಹ್ಮವು ಬುದ್ಧಿಯ ದೃಷ್ಟಿಗೆ ಸತ್ಯದಂತೆಯೂ, ಭಾವದ ದೃಷ್ಟಿಗೆ ಸೌಂದರ್ಯದಂತೆಯೂ ತೋರುತ್ತದೆ. ಸತ್ಯ ಸೌಂದರ್ಯಗಳ ಸಂಗಮವೇ ಪರಮಸಿದ್ಧಿ”. (ಕುವೆಂಪು, ೨೦೧೩, ಪು. ೧೦) ಈ ಪರಮಸಿದ್ಧಿಯ ಸಾಕ್ಷಾತ್ಕಾರ ಅಂತರಂಗದ ಕಣ್ಣಿನಿಂದ ನೋಡುವವರಿಗೆ ದರ್ಶನವಾಗುತ್ತದೆ. ಸೃಷ್ಟಿಯ ಸಕಲ ಚೇತನ-ಜಡಗಳಲ್ಲೂ ಸೃಷ್ಟಿಕ್ರಿಯೆಯ ಪ್ರಕ್ರಿಯೆ, ಉದ್ದೇಶಗಳು ಈ ಮೂಲಕ ಗ್ರಾಹ್ಯವಾಗುತ್ತದೆ. ಕಲೆಯ ಕಣ್ಣುಳ್ಳವರಿಗೆ ಮಾತ್ರ ಪ್ರಕೃತಿಯ ಸತ್ಯ-ಸೌಂದರ್ಯಗಳ ದರ್ಶನವಾಗುತ್ತದೆ. ಇದು ಒಂದು ರೀತಿಯಲ್ಲಿ ತತ್ವಜ್ಞಾನದಂತೆಯೂ ಆಗಿರುವುದು. “ ‘ದರ್ಶನ’ವೆಂಬುದು ಕೇವಲ ವಿಚಾರ ಮಾರ್ಗವಲ್ಲ; ಅದು ಜೀವನ ಮಾರ್ಗವಾಗಿದೆ. ಅದು ನಮ್ಮನ್ನು ಬೆಳಕಿನೆಡೆಗೆ ಸತ್ಯದೆಡೆಗೆ ಒಯ್ಯುವುದು. ಒಬ್ಬನು ನಿಜವಾದ ದಾರ್ಶನಿಕನಾಗಬೇಕಾದರೆ ಅವನ ಜೀವನವು ಸಂಪೂರ್ಣ ಪರಿವರ್ತಿತವಾಗಬೇಕು. ಮನಸ್ಸಿನ ನವೀಕರಣವಾಗಬೇಕು. ಮತ್ತು ಆತ್ಮಾನ್ವೇಷಣೆಯ ದೀಕ್ಷೆಯನ್ನು ಸ್ವೀಕರಿಸಬೇಕು”. (ಸ್ವಾಮಿ ಪ್ರಭುವಾನಂದ, ಪು. ೧೦) ಹಾಗಾಗಿ ದರ್ಶನವೆಂಬುದು ಸುಲಭಗ್ರಾಹ್ಯ ವಿಷಯವಲ್ಲ. ಇದೊಂದು ಉನ್ನತವಾದ ಮಾನಸಿಕ ಸ್ಥಿತಿ, ಆತ್ಮದ ಜೊತೆಗಿನ ಸಂವಹನ. ಇಂತಹ ದಾರ್ಶನಿಕ ಹಂತವೇ ಕವಿ ಕುವೆಂಪು ಅವರನ್ನು ದಾರ್ಶನಿಕ ದೃಷ್ಟಿಯಿಂದ ರಾಮಕತೆೆಯನ್ನು ಪುನರ್ ರಚಿಸುವಂತೆ ಮಾಡಿದೆ. ಶ್ರೀ ರಾಮಾಯಣ ದರ್ಶನಂ ಕಾವ್ಯದಲ್ಲಿ ಆಧ್ಯಾತ್ಮ, ಅನುಭಾವ, ದರ್ಶನ, ಜಾಗೃತ ಪ್ರಜ್ಞೆ, ಸುಪ್ತ ಮನಸು ಈ ಎಲ್ಲವುಗಳ ಅನ್ವಯಿಕತೆ ಇದೆ. ಈ ಎಲ್ಲವೂ ಒಟ್ಟಾಗಿ ಒಂದು ‘ದರ್ಶನ’ವನ್ನು ಕೃತಿ ಹೊಮ್ಮಿಸುತ್ತಿದೆ. “ವಿಧಿಯ ಮನಸು ಕಡೆದ ಕನಸು ಕಾಣ್ಬ ಕನಸೆ, ಕಾಣ್: ಕುವೆಂಪು!” (ಕುವೆಂಪು, ೨೦೨೫, ಪು. ೬೨) ಎನ್ನುವ ಕವಿಯ ಮಾತಿನಲ್ಲಿ ಅವರ ಅನುಭಾವಿಕ ನೆಲೆ ಗೋಚರಿಸುತ್ತದೆ. ರಾಮನ ಅವತಾರವನ್ನು ಕವಿ ದಾರ್ಶನಿಕ ನೆಲೆಯಲ್ಲಿ ವರ್ಣಿಸುವ ಬಗೆ ಈ ಕೆಳಗಿನಂತೆ ಕಾಣಬಹುದು.


“ಬಹುಜನರ ಪೆರ್ಬಯಕೆ

ಕಲ್ಪವೃಕ್ಷದ ಕೊಂಬೆಯನೆ ಕಚ್ಚಿ ಸೆಳೆದಿಳೆಗೆ

ಫಲದಮೃತಮಂ ಮಳೆಗರೆಯದಿಹುದೆ? ಜನಮನಮೆ

ಯುಗಶಕ್ತಿಯಲ್ತೆ? ತಾನಾ ಶಕ್ತಿ ಮರ‍್ತಿಗೊಳೆ

ನಾಮದನ್ನವತಾರಮೆಂದು ಪೂಜಿಪೆವಲ್ತೆ ಪೇಳ್,

ವೃಷ್ಟಿರೂಪದಿನಿಳಿವ ಸೃಷ್ಟಿಯ ಸಮಷ್ಟಿಯಂ?”

(ಶ್ರೀ ರಾಮಾಯಣ ದರ್ಶನಂ: ಕವಿಕ್ರತು ದರ್ಶನ, ಪದ್ಯ ೩೦೦)


ರಾಮನ ಜನನ ಕ್ಷುಲ್ಲಕ ಕಾರಣಕ್ಕೆ ಆದದ್ದಲ್ಲ. ಮಹೌನ್ನತ ಉದ್ದೇಶಕ್ಕೆಂದು ಆವಿರ್ಭವಿಸಿದ ಉನ್ನತ ಮೂರ್ತಿ ಈ ರಾಮ. ಆತ ದೇವಲೋಕದಿಂದ ಭೂಲೋಕಕ್ಕೆ ಅವತರಿಸಿ ಬರುವುದು ಸಹ ಸಾಮಾನ್ಯವಾದ ಉದ್ದೇಶದಿಂದಲ್ಲ. ರಾವಣನೊಬ್ಬನ ನಾಶವೇ ರಾಮನು ಅವತರಿಸಿ ಬರುವುದಕ್ಕೆ ಕಾರಣವಾಗಲು ಸಾಧ್ಯವಿಲ್ಲ. ರಾವಣ ಒಂದು ನಿಮಿತ್ತ ಮಾತ್ರ. ಜಗತ್ತನ್ನು ಅಧರ್ಮ, ಅಂಧಕಾರಗಳಿಂದ ಬಿಡುಗಡೆಗೊಳಿಸಿ, ಪ್ರತೀ ಜೀವಾತ್ಮರೊಳಗೂ ಅಡಗಿರುವ ರಾವಣತ್ವವನ್ನು ನಾಶ ಮಾಡಿ ಧರ್ಮದ ಮಾರ್ಗವನ್ನು ತೋರುವುದೇ ರಾಮನ ಜನನದ ಹಿಂದಿನ ಉದ್ದೇಶವಾಗಿತ್ತು ಎಂದು ಕವಿ ದಾರ್ಶನಿಕ ನೆಲೆಯಲ್ಲಿ ವಿವರಿಸುತ್ತಾರೆ.


“ಶ್ರೀರಾಮನಾ ಲೋಕದಿಂದವತರಿಸಿ ಬಂದು

ಈ ಲೋಕಸಂಭವೆಯನೆಮ್ಮ ಭೂಜಾತೆಯಂ

ಸೀತೆಯಂ ವರಿಸುತಾಕೆಯ ನೆವದಿ ಮೃಚ್ಛಕ್ತಿಯಂ

ಮರ್ದಿಸುತೆ, ಸಂವರ್ಧಿಸಿರ್ಪವೋಲ್ ಚಿಚ್ಛಕ್ತಿಯಂ; -

ರಾವಣಾವಿದ್ಯೆಯೀ ನಮ್ಮ ಮರ್ತ್ಯಪ್ರಜ್ಞೆ ತಾಂ

ತನ್ನ ತಮದಿಂ ಮುಕ್ತಮಪ್ಪುದು, ದಿಟಂ, ನಿಮ್ಮ

ದೀಪ್ಯದೈವೀ ಪ್ರಜ್ಞೆಯಮೃತ ಗೋಪುರಕೇರ್ವವೋಲ್!”

(ಶ್ರೀ ರಾಮಾಯಣ ದರ್ಶನಂ: ಶ್ರೀ ವೆಂಕಣ್ಣಯ್ಯನವರಿಗೆ, ಪದ್ಯ ೩೦,೪೦)


ಭಗವಂತ ಅವತರಿಸಿ ಬರುವಂತೆ ಮಾಡಲು ಸಾಮಾನ್ಯರಿಂದ ಸಾಧ್ಯವಿಲ್ಲ. ಅದು ಇಡೀ ಪ್ರಕೃತಿಯ ಕರೆ ಎಂದು ಕವಿ ಭಾವಿಸುವುದು ಕವಿಯ ದರ್ಶನ ಪ್ರಜ್ಞೆಗೆ ಸಾಕ್ಷಿ. ಮುಂದೆ ನಡೆಯುವ ಸೀತಾ ಸ್ವಯಂವರ, ರಾಮನ ವನವಾಸ, ಸೀತಾಪಹರಣ, ರಾಮ-ರಾವಣರ ಯುದ್ಧ ಇತ್ಯಾದಿ ಎಲ್ಲಾ ಪ್ರಮುಖ ಘಟನೆಗಳು ಜರುಗುವುದು ಪೂರ್ವನಿಯೋಜಿತ ಪ್ರಕ್ರಿಯೆಯಂತೆ. ಇಲ್ಲಿ ಬರುವ ಎಲ್ಲಾ ಪಾತ್ರಗಳು ವಿಧಿ ಲಿಖಿತದ ಸೂತ್ರದಲ್ಲಿ, ಕಾರ್ಯ-ಕಾರಣ ಸಂಬಂಧದಲ್ಲಿ ಆಡುವ ಸೂತ್ರದ ಗೊಂಬೆಗಳು. ಹಾಗಾಗಿಯೇ ಇಲ್ಲಿ ನೀಚ ಪಾತ್ರಗಳೂ ಸಹ ಆತ್ಮ ವಿಮರ್ಶೆ, ಪಾಪ ಪ್ರಜ್ಞೆ, ಪಾಪ ಪರಿಹಾರದ ಮೂಲಕ ಉದ್ಧರಿಸಲ್ಪಟ್ಟಿವೆ. ಸೃಷ್ಟಿಯಲ್ಲಿನ ಒಳಿತು-ಕೆಡುಕುಗಳನ್ನು ಸಮವಾಗಿ ನೋಡುವ ಕವಿಯ ದಾರ್ಶನಿಕ ದೃಷ್ಟಿ ಶ್ರೀ ರಾಮಾಯಣ ದರ್ಶನಂನ ಉದ್ದಕ್ಕೂ ಒಂದು ರೀತಿಯ ತತ್ವಜ್ಞಾನವಾಗಿ ಕಂಡುಬರುತ್ತದೆ. ಇದು ಕವಿಯ ಪೂರ್ಣಪ್ರಜ್ಞೆಯ ಮಾನಸಿಕ ಸ್ಥಿತಿಯೂ ಆಗಿದೆ. ಆಧ್ಯಾತ್ಮಿಕ ಮತ್ತು ಅನುಭಾವದ ದೃಷ್ಟಿಕೋನವೂ ಕವಿಯ ಪೂರ್ಣಪ್ರಜ್ಞೆಯನ್ನು ರೂಪಿಸಿದೆ. ಹಾಗಾಗಿ ಶ್ರೀ ರಾಮಾಯಣ ದರ್ಶನಂನಲ್ಲಿ ಯಾವ ಘಟನೆಗಳೂ ಸುಮ್ಮನೆ ಸಂಭವಿಸಿದಂತೆ ಚಿತ್ರಿತವಾಗಿಲ್ಲ. ದರ್ಶನ, ಅನುಭಾವ, ಆಧ್ಯಾತ್ಮ, ಪೂರ್ಣದೃಷ್ಟಿಗಳ ಜೊತೆಗೆ ವೈಚಾರಿಕತೆ ಮತ್ತು ಸರ್ವರ ಏಳಿಗೆಗಾಗಿ ಹಾತೊರೆಯುವ ಕವಿ ಮನಸ್ಸು ಕೂಡ ಶ್ರೀ ರಾಮಾಯಣ ದರ್ಶನಂ ಕಾವ್ಯದ ದಿಕ್ಕು-ಧೋರಣೆಗಳನ್ನು ರೂಪಿಸಿದೆ.


ಪ್ರಾರ್ಥನೆಗಳು, ಹಾರೈಕೆಗಳು, ಬೇಡಿಕೆ-ಬಯಕೆಗಳು ಶ್ರೀ ರಾಮಾಯಣ ದರ್ಶನಂನಲ್ಲಿ ಅದ್ಭುತ ಅಗೋಚರ ಶಕ್ತಿಯಾಗಿ ಕಂಡುಬರುತ್ತದೆ. ‘ಅಂದುಕೊಂಡಂತೆಯೇ ಆಗುತ್ತದೆ’ ಎನ್ನುವುದೊಂದು ಆಧ್ಯಾತ್ಮಿಕ ಕಲ್ಪನೆ. ಪ್ರಕೃತಿಯೆದುರು ಮನುಷ್ಯ ಬೇಡಿಕೆಗಳನಿಟ್ಟಾಗ, ಆ ಬೇಡಿಕೆಗಳನ್ನು ಸರಿಯಾದ ರೀತಿಯಲ್ಲಿ ಒಳ್ಳೆಯ ಉದ್ದೇಶದಿಂದ, ಪೂರ್ಣ ಪ್ರಯತ್ನದಿಂದ ಬೇಡಿದಾಗ ಈಡೇರುತ್ತದೆ. ಎನ್ನುವ ಹಲವು ಪರಿಕಲ್ಪನೆಗಳಿವೆ. ಶ್ರೀ ರಾಮಾಯಣ ದರ್ಶನಂನಲ್ಲಿ ಇಂತಹ ಉದಾಹರಣೆಗಳು ಹೇರಳವಾಗಿ ಕಾಣಸಿಗುತ್ತವೆ. ದಶರಥನ ಮತ್ತು ಇಡೀ ಜನಸಮೂಹವನ್ನೊಳಗೊಂಡ ಪ್ರಕೃತಿಯ ಕರೆ ರಾಮನ ಜನನಕ್ಕೆ ಕಾರಣವಾಯಿತು, ಶಬರಿಯ ರಾಮನನ್ನು ಕಾಣಬೇಕೆಂಬ ಬಯಕೆ, ನಿರಂತರ ಪ್ರಾರ್ಥನೆಯಿಂದ ರಾಮ ದರ್ಶನವಾಗುವುದಾಯಿತು. ಮಂಡೋದರಿ ರಾವಣನ ಮನಃಪರಿವರ್ತನೆ ಮತ್ತು ಉದ್ಧಾರಕ್ಕಾಗಿ ನಿರಂತವಾಗಿ ಪ್ರಾರ್ಥಿಸುತ್ತಾ ಧ್ಯಾನಕ್ಕೆ ಕೂರುತ್ತಾಳೆ- ಇದರ ಪ್ರತಿಫಲವೆಂಬಂತೆ ರಾವಣ ಕ್ರಮೇಣ ತನ್ನ ನಿಲುವನ್ನು ಬದಲಿಸಿಕೊಂಡು ಆತ್ಮೋದ್ಧಾರದತ್ತ ಸಾಗುತ್ತಾನೆ. ಸೀತೆ ಅಶೋಕವನದಲ್ಲಿ ಧ್ಯಾನಾಸಕ್ತಳಾಗಿ ನಿರಂತರ ಪ್ರಾರ್ಥನೆಯಲ್ಲಿ ತೊಡಗುತ್ತಾಳೆ- ಅದು ಲಂಕೆಗೆ ರಾಮನ ಆಗಮನ, ರಾವಣನ ಉದ್ಧಾರಕ್ಕೂ ಪೂರಕ ಶಕ್ತಿ ನೀಡುತ್ತದೆ. ಪ್ರಾರ್ಥನೆಯ ಉದ್ದೇಶ ಮತ್ತು ಮಾರ್ಗ ಸರಿಯಾಗಿದ್ದಲ್ಲಿ ಪ್ರಕೃತಿ ತಾನಾಗಿಯೇ ಸ್ಪಂದಿಸುತ್ತದೆ- ಎನ್ನುವುದು ಶ್ರೀ ರಾಮಾಯಣ ದರ್ಶನಂನಲ್ಲಿ ಹಲವು ಪಾತ್ರಗಳ ಚಿತ್ರಣದಲ್ಲಿ ಹೇಳಲಾಗಿದೆ. “ಪ್ರಾರ್ಥನಾ ತೀವ್ರತೆಯ ಸಾತ್ವಿಕ ತಪಶ್ಯಕ್ತಿ, ಪೇಳ್, ತಾಂ ಸ್ವಯಂಕ್ರಿಯೆಯಾಗಿ ಚೋದಿಸದೆ ಸೃಷ್ಟಿಯಂ?.” (ಕುವೆಂಪು, ೨೦೦೪, ಪು. ೩೩೦) ಎಂದು ಕವಿ ಪ್ರಾರ್ಥನಾ ಶಕ್ತಿಯ ಮಹಿಮೆಯನ್ನು ಹೇಳುತ್ತಾರೆ. “ಫಲಿಸಿತನಲಾ ಪ್ರಾರ್ಥನಂ. ಭಾರನಿನ್ ಬಳಿಗವನ್ ಈ ಜನ್ಮದೊಳ್! ತ್ರಿಜಟೆ, ಕಡಿದುದಾತನ ಸೂತ್ರಮಾಯೆ. ಪಟವಾಡಿಪಳ್ ಜೀವಗಳನಂಬೆ, ಆದ್ಯಾಶಕ್ತಿ.” (ಕುವೆಂಪು, ೨೦೦೪, ಪು. ೭೫೩) ಇಲ್ಲಿ, ಯುದ್ಧ ಭೂಮಿಗೆ ತೆರಳುವ ಮುನ್ನ ರಾವಣ ಅಶೋಕವನಕ್ಕೆ ಬರುತ್ತಾನೆ. ಅಲ್ಲಿ ಪರ್ಣಕುಟೀರಕ್ಕೆ ಬೆಂಕಿ ಬಿದ್ದಂತೆ ಅವನಿಗೆ ಮಾತ್ರ ಗೋಚರವಾಗುತ್ತದೆ. ಆತ ಹಾಗೆಯೇ ಹಿಂತಿರುಗಿ ಹೋಗುತ್ತಾನೆ. ಇದು ಅನಲೆಯ ಪ್ರಾರ್ಥನಾ ಶಕ್ತಿಯಿಂದಾದದ್ದು ಎಂದು ಸೀತೆ ಹೇಳುತ್ತಾಳೆ. ರಾವಣ ರಾಮನ ಮೇಲೆ ಶೂಲವನ್ನು ಪ್ರಯೋಗಿಸುವಾಗಲೂ ರಾಮನ ಪ್ರಾಣವನ್ನು ತೆಗೆಯದಂತೆ, ವೈರಿಯಾದ ಆತನನ್ನು ಸೆರೆ ಹಿಡಿಯುವಂತೆ ಶೂಲಕ್ಕೆ ಪ್ರಾರ್ಥಿಸುತ್ತಾನೆ. ಹೀಗೆ ಶ್ರೀ ರಾಮಾಯಣ ದರ್ಶನಂನ ಹಲವು ಸನ್ನಿವೇಶಗಳು ಪ್ರಾರ್ಥನೆಯ ಮಹಿಮಾ ಶಕ್ತಿಯನ್ನು ತಿಳಿಸುತ್ತವೆ. ಅಂತರಂಗದಿಂದ ಬೇಡಿಕೊಂಡ ಪ್ರಾರ್ಥನೆಗಳು ಸಫಲಗೊಳ್ಳುತ್ತವೆ ಎನ್ನುವ ಭಾವನೆ ಕುವೆಂಪು ಅವರಲ್ಲಿ ದಟ್ಟವಾಗಿರುವುದನ್ನು ನೋಡಬಹುದು.


ಪ್ರಾರ್ಥನೆಗಳಂತೆ ಶಕುನಗಳು ಅಥವಾ ಸೂಚಕಗಳು ಸಹ ಶ್ರೀ ರಾಮಾಯಣ ದರ್ಶನಂ ಕಾವ್ಯದಲ್ಲಿ ಮುಖ್ಯ ಪಾತ್ರವಹಿಸುತ್ತವೆ. ಭಾರತೀಯರು ಶಕುನಗಳನ್ನು ಹೆಚ್ಚು ನಂಬುತ್ತಾರೆ. ಯಾವುದೇ ಒಂದು ಘಟನೆ ನಡೆಯುವ ಮುನ್ನ ಪ್ರಕೃತಿ ನೀಡುವ ಎಚ್ಚರಿಕೆಯೇ ಶಕುನವೆಂದು ಹೇಳಬಹುದು. ಇದು ಪ್ರಕೃತಿಯ ಸಾಂಕೇತಿಕ ಭಾಷೆ. ಕೆಲವು ಶಕುನಗಳು ಮೂಢನಂಬಿಕೆಗಳಾಗಿರುವ ಸಾಧ್ಯತೆಗಳೂ ಇರುತ್ತವೆ. ಆದರೆ ಪ್ರಾಕೃತಿಕ ಸೂಚಕಗಳು ಅಥವಾ ಶಕುನಗಳು ಸತ್ಯಕ್ಕೆ ಹತ್ತಿರವಾದವುಗಳು. ಉದಾಹರಣೆಗೆ ಭೂಕಂಪ, ಸುನಾಮಿಯಂತಹ ಘಟನೆಗಳು ಜರುಗುವ ಮುನ್ನ ಜಲಚರಗಳು ಮತ್ತು ಪ್ರಾಣಿ ಪಕ್ಷಿಗಳಿಗೆ ಅದರ ಸೂಚನೆ ಮೊದಲೇ ದೊರಕುವುದನ್ನು ನೋಡಬಹುದು. ಪ್ರಾಕೃತಿಕ ಶಕುನಗಳಿಗೆ ವೈಜ್ಞಾನಿಕ ಕಾರಣಗಳಿವೆ. ಜ್ಯೋತಿಷ್ಯವೂ ಸಹ ಒಂದು ಬಗೆಯ ವಿಜ್ಞಾನವೇ ಆಗಿದೆ. ಶಕುನಗಳು ಸಹ ಇದರ ಭಾಗವೇ ಆಗಿ ಹೋಗಿವೆ. ಶಕುನಗಳು ಒಂದು ಪ್ರಾದೇಶಿಕ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತ, ಮನುಷ್ಯನನ್ನು ಸದಾಕಾಲ ನಿಯಂತ್ರಿಸುತ್ತಲೇ ಬಂದಿವೆ.


ಶ್ರೀ ರಾಮಾಯಣ ದರ್ಶನಂನಲ್ಲಿ ಹಲವು ಸನ್ನಿವೇಶ, ಸಂದರ್ಭಗಳಲ್ಲಿ ಶಕುನಗಳ ಬಳಕೆ ಇದೆ. ಉದಾಹರಣೆಗೆ- ಅಯೋಧ್ಯೆಯಲ್ಲಿ ಒಂದು ರಾತ್ರಿ ಧೂಮಕೇತು ಆಗಸದಲ್ಲಿ ಕಾಣಿಸಿಕೊಳ್ಳುತ್ತದೆ. ಅದನ್ನು ಕಂಡ ಜನ ಏನೋ ಅಪಶಕುನ ಕಾದಿದೆ ಎಂದು ಭಾವಿಸಿರುತ್ತಾರೆ. ಹೀಗಿರುವಾಗ, ದಶರಥ ಕೂಡ ಇದು ತನ್ನ ಕರ್ತವ್ಯ ಮುಕ್ತಿಗೆ ಸೂಚನೆ ಎಂದು ಭಾವಿಸಿ ರಾಮನಿಗೆ ಪಟ್ಟಕಟ್ಟಲು ಮುಂದಾಗುತ್ತಾನೆ. ತದನಂತರದಲ್ಲಿ ಜರುಗುವ ದುರ್ಘಟನೆಗಳು ಈ ಶಕುನ ನಿಜವಾಗಿರುವುದಕ್ಕೆ ಸಾಕ್ಷಿಯಾಗುತ್ತದೆ. ಇನ್ನೊಮ್ಮೆ, ಪಂಚವಟಿಯನ್ನು ರಾಮ-ಸೀತೆ ಪ್ರವೇಶಿಸುವಾಗ ಸೀತೆಯ ಕಾಲು ಜಾರುತ್ತದೆ. ‘ಏನು ಅಮಂಗಲವೋ? ಕಾಲ್ ಜಾರುತಿದೆ ನನಗೆ!’ ಎಂದು ಸೀತೆ ಮನಸ್ಸಿನಲ್ಲಿಯೇ ಚಿಂತಿಸುತ್ತಾಳೆ. ಈ ಹಿಂದೆ ಹಲವು ಬಾರಿ, ವನವಾಸದ ದಾರಿಯಲ್ಲಿ ಕಾಲು ಜಾರಿರಬಹುದು. ಆದರೆ ಅದೇಕೋ ಈ ಬಾರಿ ಅವಳಿಗೆ ಅದು ಅಮಂಗಲದ ಸೂಚನೆಯೆಂಬಂತೆ ತೋರುತ್ತದೆ. ಗ್ರಾಮೀಣರಲ್ಲಿ ಇಂತಹ ನಂಬಿಕೆಗಳು ದಟ್ಟವಾಗಿವೆ. ಅವು ಕಾಕತಾಳೀಯವೋ ಏನೋ ನಿಜವಾಗುವ ಸಾಧ್ಯತೆಗಳೂ ಹೆಚ್ಚಿರುವುದುಂಟು. ಈ ಕಾರಣದಿಂದಲೇ ಇಂದಿಗೂ ಜನಸಾಮಾನ್ಯರಲ್ಲಿ ಅವು ಉಳಿದುಕೊಂಡು ಬಂದಿದೆ. ಪಂಚವಟಿಯಿಂದ ಸೀತೆಯ ಅಪಹರಣವಾದಾಗ ಈ ಶಕುನ ನಿಜವಾಗುತ್ತದೆ. ಸೀತೆಯ ಅಪಹರಣವಾಗುವ ದಿನ ಸೀತೆಗೆ ಇಂದಿನ ದಿನವೇಕೋ ಕೆಟ್ಟದಿನವೆಂದು ಅನ್ನಿಸಿ ಮನಸ್ಸಿನಲ್ಲಿ ಕಸಿವಿಸಿ ಉಂಟಾಗುತ್ತಿರುತ್ತದೆ. ಸುತ್ತಲ ಪ್ರಕೃತಿಯಲ್ಲಿ ಸುಂಟರಗಾಳಿ, ಕಾರ್ಮೋಡಗಳು ರಚನೆಯಾಗುತ್ತವೆ. ‘ಏನಿದು ದುರ್ದಿನವೊ ನನಗೆ’ ಎಂದು ಸೀತೆ ಅಪಾಯದ ಮುನ್ಸೂಚನೆಯನ್ನು ಅರಿತವಳಾಗುತ್ತಾಳೆ. ಲಂಕೆಯಲ್ಲಿ ಹನುಮಂತ ಇಂದ್ರಜಿತುವಿನ ಅರಮನೆಯ ಬಳಿ ಹಾದುಹೋದ ಸಂದರ್ಭದಲ್ಲಿ ಆ ನೆರಳನ್ನು ಕಂಡ ಅವನ ಮಗು ಹೆದರಿ ಅಳಲಾರಂಭಿಸುತ್ತದೆ. ಈ ಸಂದರ್ಭದಲ್ಲಿ ಅವನ ಪತ್ನಿ ಇಂದ್ರಜಿತುವಿಗೆ ತನಗನಿಸುತ್ತಿರುವ ಕಳವಳವನ್ನು ವ್ಯಕ್ತಪಡಿಸುತ್ತಾಳೆ. ನಾಯಿಗಳು ಊಳಿಡುವುದು, ಘಂಟೆಯನಾದ, ನವಿಲಿನ ಕೇಕೆ, ಮಗು ಇದ್ದಕ್ಕಿದ್ದಂತೆ ಅಳುವುದು ಇವೆಲ್ಲ ಅಪಶಕುನದ ಸೂಚನೆಯೆಂದು ತಿಳಿಸುತ್ತಾಳೆ. ರಾಮ-ರಾವಣರ ಯುದ್ಧ ಸಂದರ್ಭ, ರಾವಣನ ಅಂತ್ಯಕಾಲ, ರಾಮ-ಸೀತೆ-ಲಕ್ಷö್ಮಣರು ವನವಾಸ ಮುಗಿಸಿ ಅಯೋಧ್ಯ ಪ್ರವೇಶ ಮಾಡುವ ಸಂದರ್ಭ, ಈ ಎಲ್ಲಾ ಸನ್ನಿವೇಶಗಳಲ್ಲೂ ಪ್ರಕೃತಿಯ ಪ್ರತಿಕ್ರಿಯೆ ಪ್ರಾಣಿ-ಪಕ್ಷಿ ಇತ್ಯಾದಿಗಳ ವಿಚಿತ್ರ ಪ್ರತಿಕ್ರಿಯೆಗಳನ್ನು ಶ್ರೀ ರಾಮಾಯಣ ದರ್ಶನಂನಲ್ಲಿ ಅನ್ವಯಿಸಿಕೊಂಡಿದ್ದಾರೆ. ಇವು ವೈಜ್ಞಾನಿಕವೂ, ಕಾಕತಾಳೀಯವೂ ಆಗಿರಬಹುದಾದಂತವುಗಳು, ಕೆಲವು ಆಧ್ಯಾತ್ಮಿಕ ನೆಲೆಯುಳ್ಳವುಗಳು, ಪ್ರಕೃತಿಯ ಪ್ರತಿಕ್ರಿಯೆ ಎನ್ನುವುದು ವೈಜ್ಞಾನಿಕ ಸತ್ಯ. ಪ್ರಕೃತಿಯಲ್ಲಿ ಮನುಷ್ಯನೂ ಒಂದು ಭಾಗವಾಗಿರುವುದರಿಂದ ಮನುಷ್ಯನಿಗೆ ಪ್ರಕೃತಿ ನೀಡುವ ಇಂತಹ ಸೂಚನೆಗಳನ್ನು ಮೂಢನಂಬಿಕೆ ಎಂದು ಸಾರಾಸಗಟಾಗಿ ತಿರಸ್ಕರಿಸಲು ಬರುವುದಿಲ್ಲ. ಏಕೆಂದರೆ ವಿಜ್ಞಾನದ ಕಣ್ಣಲ್ಲಿ ವಿಶ್ಲೇಷಣೆಗೊಳಪಡಿಸಲಾಗದ ಅದೆಷ್ಟೋ ಸಂಗತಿಗಳು ನಮ್ಮ ನಡುವೆ ಹಾಗೆ ಉಳಿದಿವೆ. ಇವುಗಳನ್ನು ಪ್ರಕೃತಿ ವಿಸ್ಮಯ ಅಥವಾ ರಹಸ್ಯವೆಂದು ಕರೆಯಬಹುದು.


ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಮತ್ತೊಂದು ಮುಖ್ಯ ಪರಿಕಲ್ಪನೆ ಕನಸುಗಳ ಮೂಲಕ ಭವಿಷ್ಯತ್ತಿನ ದರ್ಶನ. ಕನಸು ಇಲ್ಲಿ ಪೂರ್ವ ಜನ್ಮದ ಸಂಸ್ಕಾರದ ಸ್ಮರಣೆ ರೂಪವಾಗಿಯೂ ಕಂಡುಬAದಿವೆ. ಕವಿಯ ಅನುಭಾವಿಕ ನೆಲೆ, ಕವಿ ಕಾಣುವ ವಿಶ್ವ ರಹಸ್ಯಗಳ ಕವಿ ಕಲ್ಪನೆಗಳು ಇಲ್ಲಿ ಕನಸಾಗಿ ರೂಪು ತಳೆದಿವೆ. ಸ್ವಪ್ನ ಪ್ರಪಂಚವನ್ನು ಆಧ್ಯಾತ್ಮ-ವಿಜ್ಞಾನಗಳ ದಿವ್ಯ ಸಂಗಮವಾಗಿ ಬಳಸಿಕೊಂಡು ಕವಿ ಕುವೆಂಪು. ಮನಸ್ಸಿನ ಪೂರ್ಣತ್ವ, ಆತ್ಮೋದ್ಧಾರದ ಪ್ರಕ್ರಿಯೆಗಳು ಶ್ರೀ ರಾಮಾಯಣ ದರ್ಶನಂನಲ್ಲಿ ಕನಸಿನ ಮೂಲಕವೇ ಬೆಳವಣಿಗೆಗೊಂಡು ನನಸಾಗುತ್ತವೆ. ‘ದಶಾನನ ಸ್ವಪ್ನಸಿದ್ಧಿ’ ಇದಕ್ಕೆ ಉತ್ತಮ ಉದಾಹರಣೆ. ಮನೋವಿಜ್ಞಾನ ಮತ್ತು ಅಧ್ಯಾತ್ಮಗಳಲ್ಲಿ ಕನಸುಗಳಿಗೆ ವಿಶೇಷ ಮಹಾತ್ವವಿದೆ. ಕನಸುಗಳು ಮನುಷ್ಯನ ಸುಪ್ತ ಪ್ರಜ್ಞೆಯ, ಸುಪ್ತ ಭಾವಗಳ ಕನ್ನಡಿ ಇದ್ದಂತೆ. ವ್ಯಕ್ತಿಯ ಆಸೆ-ಆಕಾಂಕ್ಷೆ, ನೋವು-ನಲಿವು, ಹತಾಶೆ-ನಿರಾಶೆಗಳು ಕನಸಿನ ಮೂಲಕ ಪೂರ್ಣತ್ವವನ್ನು ಪಡೆಯಲು ಹೆಣಗುತ್ತವೆ. ಈ ಬಗೆಯ ಕನಸುಗಳು ಮನಸ್ಸಿನ ಭಾವ ಬೇಗುದಿಗಳಿಗೆ ಸಂಬಂಧಿಸಿದವುಗಳು. ಭವಿಷ್ಯದ ಸೂಚನೆಯನ್ನು ನೀಡುವ ಕನಸುಗಳು ಪ್ರಕೃತಿ ಮತ್ತು ಅಧ್ಯಾತ್ಮದ ಹಿನ್ನೆಲೆಯುಳ್ಳವಾಗಿವೆ. ಆಧ್ಯಾತ್ಮಿಕ ಸಾಧನೆಯಲ್ಲಿ ವ್ಯಕ್ತಿಗೆ ಸತ್ಯಗಳು ಕನಸಿನ ಮೂಲಕವೂ ಗೋಚರವಾಗುತ್ತದೆ. ಇನ್ನೊಂದು, ಕೆಲವು ವ್ಯಕ್ತಿಗಳಿಗೆ ಪ್ರಕೃತಿ ಮನಸಿನ ಶಕ್ತಿಯ ಮೂಲಕ ಕನಸಿನ ರೂಪದಲ್ಲಿ ಭವಿಷ್ಯತ್ತನ್ನು ಕಾಣಲು ನೀಡಿದ ವರ. ಪ್ರಕೃತಿ ಮನುಷ್ಯನಿಗೆ ನೀಡಿರುವ ಇಂತಹ ಶಕ್ತಿಗಳ ಮೂಲ ನಿಗೂಢ ಶ್ರೀ ರಾಮಾಯಣ ದರ್ಶನಂನಲ್ಲಿ ಕನಸುಗಳು ಪ್ರಾಕೃತಿಕ ಮತ್ತು ಆಧ್ಯಾತ್ಮಿಕ ಸೂಚಕಗಳೆರಡರ ಸಮ್ಮಿಶ್ರಣದಂತೆ ಕಂಡುಬರುತ್ತವೆ. ಹೆಚ್ಚು ಭಾಗ ಆಧ್ಯಾತ್ಮವೇ ಆಗಿದೆ.


ಉದಾಹರಣೆಗೆ, ಕೌಸಲ್ಯೆ ಗರ್ಭಿಣಿಯಾಗಿದ್ದಾಗ ಕನಸಿನಲ್ಲಿ ಅವಳಿಗೆ ಹಾಲಿನ ತೆರೆಯಲ್ಲಿ ತೇಲಿಬಂದ ಶಿಶುವನ್ನು ಕೌಸಲ್ಯ ಹಿಡಿದುಕೊಳ್ಳಲು ಕೈಚಾಚಿದಾಗ ಆ ಶಿಶು ಮೊಗ್ಗಿನ ರೂಪ ತಾಳಿ ದಡದ ಸಮೀಪಕ್ಕೆ ತೇಲಿ ಬರುತ್ತದೆ, ಇದು ಸಾಕ್ಷಾತ್ ವಿಷ್ಣುವಿನ ಅವತಾರವೇ ಮಗುವಾಗಿ ಜನಿಸುವ ಸೂಚಕವೆಂದು ಕವಿ ವರ್ಣಿಸಿದ್ದಾನೆ. ಸೀತಾ-ಸ್ವಯಂವರ ಸನ್ನಿವೇಶದಲ್ಲೂ ಕನಸಿನ ಬಳಕೆಯಿದೆ. ರಾಮ ಶಿವಧನಸ್ಸನ್ನು ಮುರಿಯಲೆಂದು ಬಂದು, ಮಿಥಿಲೆಯ ಉದ್ಯಾನವನದಲ್ಲಿ ಸಂಚರಿಸುತ್ತಿರುವಾಗ, ಸೀತೆ ರಾಮನನ್ನು ಕಂಡು ನಿತ್ಯವೂ ತನ್ನ ಕನಸಿನಲ್ಲಿ ಬಹುದಿನಗಳಿಂದ ಬರುತ್ತಿದ್ದ ನೀಲದೇಹಿ ಪುರುಷ ಈತನೇ ಎಂದು ಗುರುತಿಸುತ್ತಾಳೆ. ಮುಂದೆ ರಾಮನ ವನವಾಸಕ್ಕಿಂತ ಮುಂಚೆ ಮಂಥರೆಗೆ ಬೀಳುವ ಕನಸಿನಲ್ಲಿ ರಾವಣನ ಸಂಹಾರ ಮತ್ತು ಉದ್ಧಾರದ ಭವಿಷ್ಯದ ಕಥೆ ಅಡಗಿದೆ. ರಾಮನಿಗೂ ಇದೇ ತರಹದ ಕನಸುಗಳು ಬೀಳುತ್ತಿರುತ್ತವೆ. ಅರಣ್ಯಗಳು, ಕಡಲುಗಳು, ವಿವಿಧ ಪ್ರಾಣಿ ಪಕ್ಷಿಗಳು, ವಾನರವೊಂದು ಆಕಾಶದೆತ್ತರ ಬೆಳೆದು ನಿಂತಂತೆ, ಕರೆಯುತ್ತಿರುವಂತೆ ಭಾಸವಾಗುವ ಕನಸುಗಳು ಬೀಳುತ್ತಿರುತ್ತವೆ. ಇಲ್ಲಿ ಕವಿಯ ಕಲ್ಪನೆಯೂ ಇದೆ. ಮನಸ್ಸಿನ ವಿಶಿಷ್ಟ ಶಕ್ತಿಯ ರೂಪವೂ ಇದೆ, ವಿಧಿ ಲಿಖಿತವಾಗಿರುವ ಭವಿಷ್ಯದ ಮುನ್ಸೂಚನೆಯೂ ಆಗಿದೆ. ರಾಮ ವನವಾಸಕ್ಕೆ ತೆರಳುವ ಮುನ್ನ ಪ್ರಕೃತಿ ಮಾನಸಿಕವಾಗಿ ಅವನನ್ನು ಅಣಿಗೊಳಿಸುವ ಬಗೆಯೂ ಆಗಿದೆ. ದಶರಥನ ಮರಣವಾದಾಗ ಭರತನಿಗೆ ಮೊದಲು ಸುದ್ದಿ ತಿಳಿಯುವುದು ಕನಸಿನ ಮೂಲಕ. ಶಬರಿಗೆ ರಾಮ ಬರುವ ಹಿಂದಿನ ರಾತ್ರಿ ಕನಸಿನ ಮೂಲಕ ಸೂಚ್ಯವಾಗಿ ತಿಳಿಯುತ್ತದೆ. ಸೀತೆಯನ್ನು ರಾವಣ ಅಪಹರಿಸಿರುವ ಸಂಗತಿ ರಾಮ-ಶಬರಿ ಇಬ್ಬರಿಗೂ ಕನಸಿನ ಮೂಲಕ ವೇದ್ಯವಾಗುತ್ತದೆ. ಮುಂದೆ ರಾವಣನ ಸಂಹಾರ ಆದಾಗ ನಂದಿಗ್ರಾಮದಲ್ಲಿದ್ದ ಭರತನಿಗೆ ರಾಮ ಹಿಂತಿರುಗಿ ಬಂದಂತೆ ಕನಸು ಬೀಳುತ್ತದೆ. ಈ ಮೇಲಿನ ಎಲ್ಲ ಉದಾಹರಣೆಗಳನ್ನು ಸೂಕ್ಷö್ಮವಾಗಿ ಗಮನಿಸಿದಾಗ ಶ್ರೀ ರಾಮಾಯಣ ದರ್ಶನಂನಲ್ಲಿ ಕನಸುಗಳ ಅನ್ವಯಿಕತೆ ಕೇವಲ ಆಧ್ಯಾತ್ಮಿಕ ನೆಲೆಯದ್ದಾಗಿರದೆ, ಮನಸ್ಸು ಯಾವುದೇ ಒಂದು ವಿಷಯವನ್ನು ಕುರಿತು ಗಹನವಾಗಿ ಆಲೋಚನೆ, ಚಿಂತನೆ ನಡೆಸಿದಾಗ, ಮನಸ್ಸು ಏಕಾಗ್ರತೆಯಲ್ಲಿ ಕೇಂದ್ರೀಕರಿಸಲ್ಪಟ್ಟಾಗ, ಸಮಸ್ಯೆಗಳಿಗೆ ಮನಸ್ಸು ನಿದ್ರಾಸ್ಥಿತಿಯಲ್ಲಿ ವ್ಯಕ್ತಿಗಳಿಗೆ ಉತ್ತರವನ್ನು ಹುಡುಕಿ ಕೊಡುವ ವಿಶಿಷ್ಟ ರಹಸ್ಯ ಶಕ್ತಿಯಾಗಿ ಕಂಡುಬರುತ್ತದೆ. ಇದು ಮನಸ್ಸಿನಲ್ಲಿ ಅತೀಂದ್ರಿಯಶಕ್ತಿ. ದರ್ಶನವನ್ನು ಕವಿ ಮಾಡಿಸುವುದು ಕಾವ್ಯದಲ್ಲಿ ಕನಸುಗಳನ್ನು ಹೆಣೆಯುವ ಮೂಲಕ. ಶ್ರೀ ರಾಮಾಯಣ ದರ್ಶನದಲ್ಲಿ ಕನಸುಗಳು ಭೂತ-ವರ್ತಮಾನ-ಭವಿಷ್ಯಗಳ ಕೊಂಡಿಯಾಗಿ, ಸೃಷ್ಟಿ ರಹಸ್ಯಗಳನ್ನು ಬೇಧಿಸುವ ಶಕ್ತಿಯಾಗಿ ಕಂಡುಬರುತ್ತವೆ.


ಶ್ರೀ ರಾಮಾಯಣ ದರ್ಶನಂನಲ್ಲಿ ಕಂಡುಬರುವ ಇನ್ನೊಂದು ಪ್ರಮುಖ ಪರಿಕಲ್ಪನೆ ಎಂದರೆ ‘ಅನುಭಾವ’. ಅನುಭವ ಮತ್ತು ಅನುಭಾವ ಭಿನ್ನ ಪರಿಕಲ್ಪನೆಗಳು ಅನುಭಾವ ಇಂದ್ರಿಯಾತೀತವಾದ, ಅನುಭವದ ಹಂತವನ್ನು ಮೀರಿದ ಜ್ಞಾನ. ಪ್ರಕೃತಿ ಮನುಷ್ಯನ ಮನಸ್ಸಿಗೆ ಹಲವು ರಹಸ್ಯ ಶಕ್ತಿಗಳನ್ನು ನೀಡಿದೆ. ಆದರೆ ಆ ರಹಸ್ಯ ಶಕ್ತಿಗಳನ್ನು ಅಂತರಂಗದ ಕಣ್ಣಿನಿಂದ ಗುರುತಿಸಿಕೊಳ್ಳಬೇಕಾಗುತ್ತದೆ. ಹಾಗಾಗಿಯೇ ಅನುಭಾವ ಸಾಮಾನ್ಯರಿಗೆ ನಿಲುಕದ್ದು ಮತ್ತು ತೀರಾ ವೈಯಕ್ತಿಕವಾದದ್ದು. ಅಂತರ್‌ಮುಖಿಯಾಗಿ, ಏಕಾಗ್ರತೆಯಿಂದ, ಶ್ರದ್ಧೆಯಿಂದ ಒಳಗಣ್ಣನ್ನು ತೆರೆದು ನೋಡುವ ಸಾಧಕನಿಗೆ ಮಾತ್ರ ಇದು ಲಭ್ಯ. ಬಾಹ್ಯದ ಸಾಂಸಾರಿಕ ಜಂಜಡಗಳನ್ನು, ಕಾಮ-ಕ್ರೋಧ, ಮದ-ಮತ್ಸರಗಳನ್ನು ಕೇವಲ ನಿರ್ಲಿಪ್ತತೆಯಿಂದ ಕಾಣುವ ಮಾನಸಿಕ ಸ್ಥಿತಿ ಇದಕ್ಕೆ ಅವಶ್ಯಕ. ಈ ಅತೀಂದ್ರಿಯ ಶಕ್ತಿ ಸಾಧನೆಗೆ ಯೋಗ ಮಾರ್ಗ ಉತ್ತಮ ಸಾಧನ. ಉದಾಹರಣೆಗೆ, ಹನುಮಂತನ ಸಾಗರೋಲಂಘನಕ್ಕೆ ಸಹಕಾರಿಯಾದದ್ದು ಅವನ ಯೋಗ ವಿದ್ಯೆ. ಸಾಗರೋಲಂಘನಕ್ಕೆ ಮುನ್ನ ಯೌಗಿಕ ಕ್ರಿಯೆಯಿಂದ ಹನುಮಂತ ತನ್ನ ಮೂಲ ಶಕ್ತಿಯನ್ನು ಜಾಗೃತಗೊಳಿಸುತ್ತಾನೆ. ಕುಂಡಲಿನಿ ಶಕ್ತಿಯನ್ನು ‘ಸಹಸ್ರಾರು’ಕ್ಕೆ ಒಯ್ದು ಭೌತಶಾಸ್ತçದ ನಿಯಮವನ್ನೇ ತಲೆಕೆಳಗು ಮಾಡುತ್ತಾನೆ. ಆ ಶಕ್ತಿಯಿಂದ ಆತ ಸಂಕಲ್ಪಿಸಿದ ರೂಪ ಪಡೆಯಲು ಸಾಧ್ಯವಾಗಿ ಬೃಹತ್ ಕಪಿಯಾಗಿ ಬೆಳೆದು ನಿಲ್ಲುತ್ತಾನೆ. ಯೋಗ ವಿದ್ಯೆಗಳು ಭಾರತೀಯ ಪುರಾತನ ವಿದ್ಯೆಗಳು ಮತ್ತು ಅವು ವಿಜ್ಞಾನಕ್ಕೆ ಸವಾಲಿನ ವಿಷಯಗಳು. ಮುಂದೆ ಆಂಜನೇಯ ಸಂಜೀವಿನಿ ತರಲು ಹಿಮಾಲಯಕ್ಕೆ ಹೋಗುವುದು ಸಹ ಈ ಯೌಗಿಕ ವಿದ್ಯೆಯ ಸಹಾಯದಿಂದಲೇ ಆಗಿದೆ. ಇಂದ್ರಜಿತು ನಿಕುಂಬಿನಿಯಾಗ ಮಾಡಿ ಯೌಗಿಕ ವಿದ್ಯೆಯಿಂದ ಮಹಾದ್ವಾರ ನಿರ್ಮಿಸಿ ಆ ದ್ವಾರ ಪ್ರವೇಶಿಸಿದ ಎಲ್ಲರನ್ನೂ ಮೂರ್ಛೆಗೊಳ್ಳುವಂತೆ ಮಾಡುತ್ತಾನೆ. ಮುಂದೆ ಕುಂಭಕರ್ಣನ ಸಾವನ್ನು ಚಿತ್ರಿಸುವಾಗ ಕವಿ ಕುವೆಂಪು ಅನುಭಾವದ ತುತ್ತ ತುದಿಗೇರಿದಂತೆ ಭಾಸವಾಗುತ್ತಾರೆ. ರಾಮನಿಂದ ತನ್ನ ಸಾವು ಸಮೀಪಿಸುತ್ತಿರುವಾಗ ಕುಂಭಕರ್ಣನಿಗೆ ಪಂಚೇಂದ್ರಿಯ ಪ್ರಪಂಚವು ಕ್ಷುಲ್ಲಕವಾಗಿ ಕಂಡು, ಅತೀಂದ್ರಿಯ ಆನಂದದಲ್ಲಿ ಅವನ ಅಂತರಂಗ ಮುಳುಗಿ ನಿರ್ಲಿಪ್ತ ಭಾವದಲ್ಲಿ ಸಮಾಧಿ ಸ್ಥಿತಿಯನ್ನು ಪಡೆಯುತ್ತದೆ. ಆ ಸಂದರ್ಭದಲ್ಲಿ ರಾಮನು ಸಹ ಆವೇಶ ಬಂದವನಂತೆ ಸ್ತಬ್ಧವಾಗಿ ನಿಲ್ಲುತ್ತಾನೆ. ಅವನ ಮನಸ್ಸು ಅಲೌಕಿಕವಾದ ಅನುಭವವನ್ನು ಪಡೆಯುತ್ತದೆ. ಕುಂಭಕರ್ಣ ಮತ್ತು ರಾಮ ಇಲ್ಲಿ ಕ್ರಮವಾಗಿ ಆತ್ಮ-ಪರಮಾತ್ಮರಾಗಿ ಕಂಡುಬರುತ್ತಾರೆ. ಕುಂಭಕರ್ಣನ ಆತ್ಮ ಪರಮಾತ್ಮನಲ್ಲಿ ಲೀನವಾಗುತ್ತದೆ. ರಾವಣನ ಅಂತ್ಯವಾದಾಗಲೂ ಕವಿ ಇದೆ ಬಗೆಯ ಅನುಭಾವಿಕ ನೆಲೆಯನ್ನು ತರುತ್ತಾರೆ. ಯುದ್ಧದಲ್ಲಿ ರಾಮನ ಬಾಣ ರಾವಣನ ಎದೆಗೆ ಹೊಕ್ಕಿದಾಗ ಅಲ್ಲಿ ಅವನಿಗೆ ಗೋಚರವಾಗುವುದು ರಾಮನ ಮುಖ. ರಾವಣ ರಾಮನನ್ನೇ ಹಿಡಿದಂತೆ ಭ್ರಮಿತನಾಗುತ್ತಾನೆ. ‘ಸೆರೆ ಸಿಲ್ಕಿದನೋ ವೈರಿ' ಎಂದು ಭ್ರಮೆಯಲ್ಲಿ ಸಂಭ್ರಮಿಸುತ್ತಾ ಅರಮನೆಗೆ ಓಡುತ್ತಾನೆ. ರಾಮನನ್ನು ಹಿಡಿದು ತಂದೆ ಎಂದು ವೀರತನದ ಮಾತನಾಡುತ್ತಿರುವ ರಾವಣನ ಸ್ಥಿತಿ ಮಂಡೋದರಿಗೆ ತಿಳಿಯುತ್ತದೆ. ಆಕೆ ಅವನ ಭ್ರಾಂತಿಯನ್ನು ಕಳೆಯಲು ಯತ್ನಿಸಿ ವಿಫಲಳಾಗುತ್ತಾಳೆ. ರಾವಣ ಸೀತೆಯನ್ನು ರಾಮನಿಗೊಪ್ಪಿಸುವ ಕಾರ್ಯಕ್ರಮಕ್ಕೆ ನಗರವನ್ನೆಲ್ಲಾ ಸಿಂಗರಿಸಲು ಆದೇಶಿಸುತ್ತಾನೆ. ರಾಮನ ಬಾಣವನ್ನು ರಾಮನೆಂದೇ ಭಾವಿಸುವ ರಾವಣ, ರಾಮನನ್ನು ಹೊರ ತೆಗೆಯಲು ಮಂಡೋದರಿಗೆ ಸೂಚಿಸುತ್ತಾನೆ. ಅವಳು ಬಾಣವನ್ನು ಹೊರ ತೆಗೆಯುತ್ತಾಳೆ. ರಾವಣನ ಆತ್ಮ ರಾಮನಲ್ಲಿ ಲೀನವಾಗುತ್ತದೆ ಎಂಬ ಕಲ್ಪನೆಯನ್ನು ಕುವೆಂಪು ಕೊನೆಯಲ್ಲಿ ತರುತ್ತಾರೆ. ರಾಮ ಮತ್ತು ರಾವಣರ ಅಬೇಧ ಕಲ್ಪನೆ ಕುವೆಂಪು ಅವರ ಸ್ವತಂತ್ರ ಸೃಷ್ಟಿ ಮತ್ತು ವಿಭಿನ್ನ ಹಾಗೂ ವಿಶಿಷ್ಟ ದೃಷ್ಟಿ ಎನ್ನಬಹುದು. ಹೀಗೆ ಶ್ರೀ ರಾಮಾಯಣ ದರ್ಶನಂ ಕಾವ್ಯದಲ್ಲಿ ಕಂಡುಬರುವ ಅನುಭಾವದ ನೆಲೆ ಆಧ್ಯಾತ್ಮಿಕ ಶಕ್ತಿಯ ರೂಪವಾಗಿ ಕಂಡುಬರುವುದನ್ನು ಗಮನಿಸಬಹುದು. ಯೋಗ ಸಾಧನೆಯ ವಿದ್ಯೆಗಳು, ಆ ಮೂಲಕ ಪಾತ್ರಗಳು ಪಡೆದುಕೊಳ್ಳುವ ಆಧ್ಯಾತ್ಮಿಕ ಶಕ್ತಿ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಅನುಭಾವಿಕ ನೆಲೆ ಮತ್ತು ಕಲ್ಪನಾ ಶಕ್ತಿಯನ್ನು ಉತ್ತುಂಗಕ್ಕೇರಿಸಿದೆ.


ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಹೆಸರೇ ಹೇಳುವಂತೆ ಇದೊಂದು ‘ದರ್ಶನ’. ಕವಿಯ ಆಧ್ಯಾತ್ಮಿಕ ಪ್ರಜ್ಞೆ, ಕವಿ ಕಂಡ ಸೃಷ್ಟಿ ವೈಚಿತ್ರö್ಯಗಳ ದರ್ಶನ, ಪಾತ್ರ-ಸನ್ನಿವೇಶಗಳ ಒಳಹೊಕ್ಕು, ಮಗ್ನರಾಗಿ, ಅನುಭಾವಿಕ ನೆಲೆಯನ್ನು ಸಹೃದಯನಿಗೆ ತಲುಪುವಂತೆ ಚಿತ್ರಿಸಿರುವ ಶೈಲಿ ಮಹಾಕಾವ್ಯದ ಮಹತ್ವವನ್ನು ಹೆಚ್ಚಿಸಿದೆ. ಮಹಾಕಾವ್ಯಗಳು ಒಂದು ಸಂಸ್ಕೃತಿಯೊಳಗಿನ ಆಚಾರ-ವಿಚಾರ, ಮೌಲ್ಯಾದರ್ಶಗಳು, ರೀತಿ-ನೀತಿಗಳು, ಜೀವನ ಕ್ರಮಗಳು, ನಿತ್ಯ ಜೀವನದ ಹಲವು ಸಂಗತಿಗಳನ್ನು ಪ್ರತಿಬಿಂಬಿಸುತ್ತವೆ. ಈ ನಿಟ್ಟಿನಲ್ಲಿ ಶ್ರೀ ರಾಮಾಯಣ ದರ್ಶನಂ ಕಾವ್ಯ ಕೂಡ ಜನಸಾಮಾನ್ಯರ ನಾಡಿ ಮಿಡಿತಗಳನ್ನು ಗ್ರಹಿಸಿ, ಅರಗಿಸಿಕೊಂಡು ಮೂಡಿದ ಕಲಾಕೃತಿ ಎನ್ನಬಹುದು.


ಪರಾಮರ್ಶನ ಗ್ರಂಥಗಳು

೧. ಕುವೆಂಪು, ಶ್ರೀ ರಾಮಾಯಣ ದರ್ಶನಂ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೨೦೦೪.

೨. ಕುವೆಂಪು, ಕದರಡಕೆ, ಉದಯರವಿ ಪ್ರಕಾಶನ, ಮೈಸೂರು, ೨೦೦೫.

೩. ಕುವೆಂಪು. ಕುವೆಂಪು ಸಮಗ್ರ ಗದ್ಯ ಸಂಪುಟ-೭. ರಾಷ್ಟçಕವಿ ಕುವೆಂಪು ಪ್ರತಿಷ್ಟಾಣ, ಕುಪ್ಪಳ್ಳಿ, ೨೦೧೩.

೪. ಕೋ. ಚೆನ್ನಬಸಪ್ಪ, ಶ್ರೀ ಕುವೆಂಪು ಸಂದರ್ಶನ ಮತ್ತು ಪ್ರಸಂಗಗಳು, ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಮೈಸೂರು, ೨೦೦೨.

೫. ಬಸವಣ್ಣ ಎಂ, ಸಿಗ್ಮಂಡ್ ಫ್ರಾಯ್ಡ್, ಅಭಿನವ ಪ್ರಕಾಶನ, ಬೆಂಗಳೂರು, ೨೦೧೯.

೬. ರಾಗೌ, ಕುವೆಂಪು ಅಧ್ಯಯನ ಆಯಾಮ, ಕರ್ನಾಟಕ ಸಂಘ(ರಿ), ಮಂಡ್ಯ, ೨೦೧೫.

೭. ಲಕ್ಕಪ್ಪಗೌಡ ಎಚ್. ಜೆ., ಶ್ರೀ ರಾಮಾಯಣ ದರ್ಶನಂ ಒಂದು ವಿಮರ್ಶಾತ್ಮಕ ಅಧ್ಯಯನ, ಸಪ್ನ ಬುಕ್ ಹೌಸ್, ಬೆಂಗಳೂರು, ೨೦೧೧.

೮. ವೇಣುಗೋಪಾಲರಾವ್ ಎನ್.ಎಸ್, ಶ್ರೀ ಕುವೆಂಪು ಅವರ ದಾರ್ಶನಿಕ ವಿಚಾರಗಳು, ರಾಷ್ಟçಕವಿ ಕುವೆಂಪು ಪ್ರತಿಷ್ಟಾನ, ಕುಪ್ಪಳ್ಳಿ, ೧೯೯೪.

೯. ಸ್ವಾಮಿ ಪ್ರಭುವಾನಂದ, ಭಾರತೀಯ ಆಧ್ಯಾತ್ಮಿಕ ಪರಂಪರೆ, ಶ್ರೀ ರಾಮಕೃಷ್ಣ ಆಶ್ರಮ, ಮೈಸೂರು, ೨೦೨೩.

Comments


bottom of page